Advertisement

ದಲಿತ ಕುಟುಂಬದಿಂದ ಪ್ರತಿಭಟನೆ

04:40 PM Apr 08, 2019 | Naveen |

ಮುದ್ದೇಬಿಹಾಳ: ರಸ್ತೆ ಅತಿಕ್ರಮಣ ತೆರವು ವಿಷಯ ವಿವಾದ ಪಡೆದುಕೊಂಡು ದಲಿತ ಕುಟುಂಬಗಳ ಸದಸ್ಯರು ರಸ್ತೆಗೆ ಕಲ್ಲು ಅಡ್ಡಲಾಗಿಟ್ಟು ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ಇದರಿಂದ ಗ್ರಾಮದಲ್ಲಿ ರವಿವಾರ ನಡೆಯಲಿರುವ ಮಾರುತೇಶ್ವರ ಜಾತ್ರೆ ಮತ್ತು ತೇರು ಎಳೆಯುವ ಕಾರ್ಯಕ್ಕೆ ಆತಂಕ ಎದುರಾಗಿತ್ತು. ವಿಷಯ ತಿಳಿದು ಪಿಎಸೈ ಗೋವಿಂದಗೌಡ ಪಾಟೀಲ ಸಿಬ್ಬಂದಿ ಸಮೇತ ಗ್ರಾಮಕ್ಕೆ ತೆರಳಿ ದಲಿತ ಕುಟುಂಬದವರಿಗೆ ಬುದ್ಧಿವಾದ ಹೇಳಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ಪ್ರತಿಭಟನೆ ಏಕೆ?: ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನ ಮತ್ತು ಪಾದಗಟ್ಟೆವರೆಗೆ ರಸ್ತೆ ಇದೆ. ಈ ರಸ್ತೆ ಅಗಲೀಕರಣಗೊಳಿಸಲು
ಗ್ರಾಪಂನವರು ಕ್ರಮ ಕೈಗೊಂಡಿದ್ದರು. ಈ ವೇಳೆ ರಸ್ತೆಯ ಒಂದು ಬದಿ ದಲಿತ ವರ್ಗಕ್ಕೆ ಸೇರಿದ ಚಲವಾದಿ ಕುಟುಂಬದವರ ಅತಿಕ್ರಮಣ ತೆರವುಗೊಳಿಸಲಾಗಿತ್ತು. ಆದರೆ ಮುಸ್ಲಿಂ
ವರ್ಗಕ್ಕೆ ಸೇರಿದ ಮಾಗಿ ಕುಟುಂಬದವರ ಅತಿಕ್ರಮಣ ತೆರವುಗೊಳಿಸಲು ಹೋದಾಗ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದು ಸಮಸ್ಯೆಗೆ ಕಾರಣವಾಗಿತ್ತು. ದಲಿತ ಕುಟುಂಬದವರು ಈ ಬಗ್ಗೆ ಆಕ್ಷೇಪಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಇದೇ ವಿಷಯಕ್ಕೋಸ್ಕರ ಇಲ್ಲಿನ ತಹಸೀಲ್ದಾರ್‌ ವಿನಯ್‌ ಕುಮಾರ ಪಾಟೀಲ, ಸಿಪಿಐ ರವಿಕುಮಾರ ಕಪ್ಪತ್ತನ್ನವರ ಅವರು 3-4 ಬಾರಿ ಗ್ರಾಮಕ್ಕೆ ತೆರಳಿ ಊರ ಮುಖಂಡರು (ದೈವದವರ) ಸಭೆ ನಡೆಸಿ ಚಲವಾದಿ ಮತ್ತು ಮಾಗಿ ಕುಟುಂಬದವರಿಗೆ ಬುದ್ಧಿವಾದ ಹೇಳಿ ಇಬ್ಬರೂ ತಲಾ 3 ಅಡಿ
ಅತಿಕ್ರಮಣ ತೆರವುಗೊಳಿಸುವಂತೆ ಸೂಚಿಸಿ ವಿವಾದಕ್ಕೆ ಅಂತ್ಯ ಹೇಳುವ ಪ್ರಯತ್ನ ನಡೆಸಿದ್ದರು.

ಶುಕ್ರವಾರವೂ ಗ್ರಾಮದಲ್ಲಿ ಅಧಿಕಾರಿಗಳು ಸಭೆ
ನಡೆಸಿ ರವಿವಾರ ಜಾತ್ರೆ ಇರುವುದರಿಂದ ವಿವಾದ ದೊಡ್ಡದು ಮಾಡದಂತೆ, ಜಾತ್ರೆ ಸುಗಮವಾಗಿ ನಡೆಯಲು, ಮಾರುತೇಶ್ವರ ತೇರು ಎಳೆಯಲು ಎಲ್ಲರೂ ಕೈ ಜೋಡಿಸುವಂತೆ ತಿಳಿಹೇಳಿ
ಬಂದಿದ್ದರು. ಆದರೂ ದಲಿತ ಕುಟುಂಬದವರು ಅಧಿ ಕಾರಿಗಳ ಮಾತಿಗೆ ಬೆಲೆ ಕೊಡದೆ ತಮಗೆ ನ್ಯಾಯ ಬೇಕು ಎಂದು ಶನಿವಾರ ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಕಲ್ಲು ಇಟ್ಟು ದಿಢೀರ್‌ ಧರಣಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನೀಲಮ್ಮ ಚಲವಾದಿ, ಹಣಮಂತ ಚಲವಾದಿ, ರಸ್ತೆ ಪಕ್ಕದಲ್ಲಿ ನಮ್ಮದು, ಮಾಗಿ ಅವರದ್ದು ಅತಿಕ್ರಮಣ ಇದೆ. ನಮ್ಮದು ಮಾತ್ರ ತೆಗೆದು ಮಾಗಿ ಅವರದ್ದನ್ನು ಹಾಗೆ ಬಿಡಲಾಗಿದೆ. ಇದರಲ್ಲಿ ಪಂಚಾಯಿತಿ
ಪಿಡಿಒ ಕೈವಾಡ ಇದೆ. ನಮ್ಮ ಅತಿಕ್ರಮಣ ಜಾಗೆ ತೆಗೆದಂತೆ ಮಾಗಿ ಅವರ ಜಾಗೆ ಅತಿಕ್ರಮಣವನ್ನೂ ತೆರವುಗೊಳಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಮಾಗಿ ಕುಟುಂಬದ ಮಹ್ಮದಯುಸೂಫ್‌ ಮಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅತಿಕ್ರಮಣ ಮಾಡಿಲ್ಲ. ನಮ್ಮ ಜಾಗ ಸರಿಯಾಗಿದೆ. ವಿನಾಕಾರಣ ವಿವಾದ ಎಬ್ಬಿಸಲಾಗಿದೆ. ನಾವು ನಮ್ಮ ಆಸ್ತಿ ರಕ್ಷಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ ಎಂದರು. ತಹಸೀಲ್ದಾರ್‌ ವಿನಯ್‌ಕುಮಾರ
ಪಾಟೀಲ, ಸಿಪಿಐ ರವಿಕುಮಾರ ಕಪ್ಪತ್ತನ್ನವರ ಪ್ರತಿಕ್ರಿಯಿಸಿ, ಇದೇ ಅತಿಕ್ರಮಣ ಕಾರಣಕ್ಕಾಗಿ ಕಳೆದ ವರ್ಷ ಮಾರುತೇಶ್ವರ ತೇರು ಅರ್ಧಕ್ಕೆ ನಿಂತಿತ್ತು. 4-5 ಬಾರಿ ಗ್ರಾಮಕ್ಕೆ ತೆರಳಿ ಎರಡೂ ಕಡೆಯವರಿಗೆ ಬುದ್ಧಿವಾದ ಹೇಳಲಾಗಿದೆ.
ಎರಡೂ ಕಡೆಯವರು ತಲಾ 3 ಅಡಿ ಅತಿಕ್ರಮಣ ತೆರವುಗೊಳಿಸಲು ಒಪ್ಪಿದ್ದಾರೆ. ಹೀಗಿದ್ದರೂ ಮತ್ತೆ ವಿವಾದ ಎಬ್ಬಿಸುತ್ತಿರುವುದು ಸರಿ ಅಲ್ಲ. ಜಾತ್ರೆಯ ಸಂದರ್ಭ ಎಲ್ಲರೂ ಸೇರಿ ಒಗ್ಗಟ್ಟಿನಿಂದ ತೇರು ಎಳೆದು ಸೌಹಾರ್ದತೆ ಪ್ರದರ್ಶಿಸಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next