Advertisement

Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ

01:24 PM Jan 07, 2025 | Team Udayavani |

ಮೂಡುಬಿದಿರೆ: ಬೆಳೆಯುತ್ತಿರುವ ಮೂಡುಬಿದಿರೆ ನಗರದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ. ಅದರಲ್ಲೂ ಜ್ಯೋತಿ ನಗರದ ಕಡೆಯಿಂದ ಹಲವು ವಸತಿ ಸಂಕೀರ್ಣ, ಉದ್ಯಮಗಳಿಂದ ಹರಿದು ಬರುವ ಮಲಿನ ನೀರು ದೊಡ್ಮನೆ ರಸ್ತೆ ಪರಿಸರದ ಬಹುತೇಕ ಜಲಮೂಲ, ಬಾವಿ ನೀರನ್ನು ಕಲುಷಿತಗೊಳಿಸಿದೆ.

Advertisement

ದೊಡ್ಮನೆ ರಸ್ತೆ ಪಕ್ಕದ ತೋಡಿನಲ್ಲಿ ಸಂಪೂರ್ಣ ಹೂಳು ತುಂಬಿದೆ. ಈ ನಡುವೆ ಖಾಸಗಿ ಜಮೀನಿನವರು ಕಾಂಪೌಂಡ್‌ ಗೋಡೆಯನ್ನು ಓರೆಯಾಗಿ ವಿಸ್ತರಿಸಿ ಕಟ್ಟಿದ್ದರಿಂದ ತೋಡಿನಲ್ಲಿ ಕೊಳಚೆ ನೀರು ಹರಿಯಲು ಅಡಚಣೆಯಾಗಿದೆ. ಇದನ್ನು ಗಮನಿಸಿದವರೊಬ್ಬರು ಯಾರದೋ ಒತ್ತಡಕ್ಕೆ ಮಣಿದು ಮೂರು ಬೆಳೆ ಬೆಳೆಯುವ ಖಾಸಗಿ ಗದ್ದೆಯ ಕಟ್ಟಹುಣಿಯನ್ನು ಅನಧಿಕೃತವಾಗಿ ಕಡಿದು ಹಾಕಿದ ಪರಿಣಾಮವಾಗಿ ಕೊಳಚೆ ನೀರು ಗದ್ದೆಯತ್ತ ಹರಿಯತೊಡಗಿತು.

ಇದರಿಂದಾಗಿ, ಮೊದಲಿಗೆ ಕಟ್ಟಹುಣಿಯ ಪಕ್ಕ, ಗದ್ದೆಯ ಪ್ರವೇಶದಲ್ಲೇ ಇದ್ದ ಕೆರೆ ಹೂಳು ತುಂಬಿ ನಾಶವಾಯಿತು. ಈ ಪ್ರಕ್ರಿಯೆ ನಡೆಯತೊಡಗಿ ಕೆಲವು ವರ್ಷಗಳಾಗುತ್ತಿದ್ದಂತೆ ಪಕ್ಕದ ತೋಟದಲ್ಲಿರುವ ಬೃಹತ್‌ ಬಾವಿ ನೀರು ಕಲುಷಿತವಾಗತೊಡಗಿತು. ಈಗಂತೂ ಅದು ಕೆರೆಯ ನೀರು ಹಳದಿ-ಕೆಂಪು ಬಣ್ಣಕ್ಕೆ ತಿರುಗಿ ನೋಡಿದವರಿಗೆ ದಿಗಿಲು ಹುಟ್ಟಿಸುತ್ತಿದೆ.

ಕಲ್ಸಂಕದವರೆಗೆ ತೋಡು ದುರಸ್ತಿ
ಸಾರ್ವಜನಿಕರ ಒತ್ತಡಕ್ಕೆ ಮಣಿದ ಪುರಸಭೆ ಕೊನೆಗೂ ದೊಡ್ಮನೆ ರಸ್ತೆ ವಲಯದಿಂದ ಕಲ್ಸಂಕದವರೆಗೆ ತೋಡು ತೋಡಲು ಮುಂದಾಗಿದೆ. ಮೂರು ಗದ್ದೆಯವರೂ ಸಹಕಾರ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ಈಗಾಗಲೇ ಕೊಳಚೆಯ ಜಲಾಶಯದಂತಾಗಿರುವ ಮೂರು ಹೊಲಗಳ ಗತಿ ಏನು ಎಂಬುದು ಪ್ರಶ್ನಾರ್ಥಕವಾಗಿ ಬಿಟ್ಟಿದೆ ಅಥವಾ ಮುಂದಿನ ದಿನಗಳಳಲ್ಲಿ ಕಲ್ಸಂಕದ ಪಕ್ಕದ ಗದ್ದೆಗಳಲ್ಲಿ ಮಣ್ಣು ತುಂಬಿ ಕಟ್ಟಡಗಳು ಎದ್ದ ಹಾಗೆ ದೊಡ್ಮನೆ ಪಕ್ಕದ ಗದ್ದೆಗಳಲ್ಲೂ ಕ್ಟಟಡಗಳು ಮೇಲೇಳಲು ಅವಕಾಶಕಲ್ಪಿಸಿಕೊಡುವಂತಾದೀತು ಎನ್ನುವುದು ಜನರ ಮಾತು.

Advertisement

ಸೊಳ್ಳೆ ಉತ್ಪಾದನ ತಾಣವಾದ ಗದ್ದೆ
ಕೊಳಚೆ ನೀರಿನ ಸರಾಗ ಹರಿಯುವಿಕೆಯಾಗದೆ ಸೊಳ್ಳೆ ಉತ್ಪಾದನೆಯ, ರೋಗರುಜಿನಗಳ ಮೂಲತಾಣವಾಗಿದೆ. ಅದರಲ್ಲೂ ಗದ್ದೆಗಳ ತುಂಬ ಕೊಳಚೆ ನೀರು ಮತು ತ್ಯಾಜ್ಯ ತುಂಬಿದೆ. ಈ ಬಗ್ಗೆ ಸ್ಥಳೀಯರು ಪುರಸಭೆಯ ಗಮನ ಸೆಳೆದು ಸೆಳೆದು ಸುಸ್ತಾಗಿದ್ದಾರೆ. ಈಗ ಪುರಸಭೆ ತೋಡು ವಿಸ್ತರಣೆಗೆ ಮುಂದಾಗಿದೆ. ಆದರೆ, ಮಳೆಗಾಲದಲ್ಲಿ ನೀರು ಹರಿಯುವುದಕ್ಕೇ ಸೀಮಿತವಾಗಬೇಕಾದ ತೋಡಿನಲ್ಲಿ ಮನೆಗಳ, ಬಚ್ಚಲುಗಳ ತ್ಯಾಜ್ಯ ನೀರಿನ ಹರಿಯುವಿಕೆಗೆ ಅವಕಾಶ ಮಾಡಿಕೊಡುವುದು ಯಾಕೆ? ಸಮಗ್ರ ಒಳಚರಂಡಿ ಯೋಜನೆ ಇನ್ನೂ ಯಾಕೆ ಜಾರಿಯಾಗಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next