ಮೈಸೂರು: ಸಿಎಂ ತಮಗೆ ಬಂದಿರುವ ಜಾಗವನ್ನು ಸರಕಾರಕ್ಕೆ ವಾಪಾಸ್ ಕೊಡಲಿ. ಅದೇ ಜಾಗದಲ್ಲಿ ಒಂದು ಆಸ್ಪತ್ರೆ ಕಟ್ಟಿಸಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಇಲ್ಲದೆ ಇದ್ದರೆ ನಿಮ್ಮ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತದೆ. ಯಾಕೆ ಮಾನ ಮರ್ಯಾದೆ ಬೀದಿ ಬೀದಿಯಲ್ಲಿ ಕಳೆದು ಕೊಳ್ಳುತ್ತಿದ್ದೀರಿ ಎಂದು ಮೈಸೂರಿನಲ್ಲಿ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಮುಡಾ ಕಚೇರಿ ಮುಂಭಾಗ ಟೆಂಟ್ ಹಾಕಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ನಿಮ್ಮ ಶಿಷ್ಯರು ಸಲಹೆ ಕೊಡುತ್ತಿದ್ದಾರೆ. ನ್ಯಾಯಾಂಗ ತನಿಖೆಯಿಂದ ಯಾವ ಪ್ರಯೋಜನವಿಲ್ಲ. ಈ ಹಗರಣ ಸಿಬಿಐ ಗೆ ಕೊಡಿ. ಸಾವಿರಾರು ಕೋಟಿ ರೂ ಹಗರಣ ಇದು ಎಂದರು.
ಸಿಎಂ ತಮಗೆ 62 ಕೋಟಿ ರೂ ಬರಬೇಕು ಅಂತಾರೆ. ನನಗೆ ಅರ್ಥವಾಗುತ್ತಿಲ್ಲ. ಇದು ಯಾವ ಥರ ಲೆಕ್ಕಚಾರ? ಹಣಕಾಸು ಸಚಿವರಾದರು ಹೀಗೆ ಮಾತನಾಡಿದರೆ ಹೇಗೆ? ಯಾಕೆ ಸಿದ್ದರಾಮಯ್ಯ ಮಣ್ಣಿನ ಹಿಂದೆ ಹೋಗುತ್ತಿದ್ದಾರೆ? ಸಮಾಜವಾದಿ ಮನಸ್ಸಿನ ಸಿದ್ದರಾಮಯ್ಯ ಯಾಕೆ ಈ ರೀತಿ ಮಣ್ಣಿನ ಹಿಂದೆ ಹೋಗುವ ರೀತಿ ಬದಲಾವಣೆಯಾದರು? ನೀವು ನಿಮ್ಮ ಅವಧಿಯಲ್ಲಿ ಒಂದು ಸೈಟ್ ಆದರೂ ಜನ ಸಾಮಾನ್ಯರಿಗೆ ಕೊಡಿಸಿದ್ದಿರಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಪತ್ನಿ ಖರೀದಿಸಿರುವ ದೇವನೂರು ಬಡಾವಣೆ ಜಾಗ ದಲಿತರಿಗೆ ಸೇರಿದ್ದು. ಜವರ ಎಂಬ ವ್ಯಕ್ತಿಗೆ ಸೇರಿದ ಜಮೀನು ಇದು. ಡಿನೋಟಿನೋಫೈ ಆದ ಜಾಗವನ್ನು ಸಿಎಂ ಪತ್ನಿ ಅಣ್ಣ ಖರೀದಿ ಮಾಡಿದ್ದರು. ದಾನ ಪತ್ರವಾಗಿ 2010 ರಲ್ಲಿ ಸಿಎಂ ಪತ್ನಿ ಹೆಸರಿಗೆ ಬಂದಿದೆ ಎಂದರು.
ಭೈರತಿ ಸುರೇಶ್ ವಿರುದ್ದ ವಾಗ್ದಾಳಿ ನಡೆಸಿದ ಎಚ್. ವಿಶ್ವನಾಥ್, ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ. ಹೆಲಿಕಾಪ್ಟರ್ ನಲ್ಲಿ ಬಂದು ಪೊಲೀಸ್ ಭದ್ರತೆ ಯಲ್ಲಿ ಸಭೆ ಮಾಡಿ ಹೋಗ್ತಾನೆ. ಯಾವನ್ನಲೆ ನೀನು! ನೀನು ದಡ್ಡನೋ ಬುದ್ದಿವಂತನಾ? ನಾನು ಏಳು ಸೈಟ್ ಕೇಳಿದ್ದೇನೆ ಅಂತೀಯಲ್ಲ. ಇವನೂ ಯಾವನೂ ರೀ ಭೈರತಿ. ನಾನು ಪ್ರಾಮಾಣಿಕ ಎಂಧು ವಿಧಾನಸೌಧದ ಒಳಗೆ ಹೇಳಿದ್ದಿನಿ. ಚೇಂಜ್ ಆಫ್ ಲ್ಯಾಂಡ್ ಗೆ ಐದು ಲಕ್ಷ ಫಿಕ್ಸ್ ಮಾಡಿದ್ದಾನೆ ಭೈರತಿ ಸುರೇಶ್ ಎಂದು ಆರೋಪಿಸಿದರು.