ಮೈಸೂರು: ತಮ್ಮ ಹೆಸರಿನಲ್ಲಿದ್ದ ಜಮೀನಿಗೆ ಬದಲಿಯಾಗಿ 14 ನಿವೇಶನ ಪಡೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಅಷ್ಟೂ ನಿವೇಶನಗಳನ್ನು ವಾಪಸ್ ನೀಡುವುದಾಗಿ ಮುಡಾಕ್ಕೆ ಪತ್ರ ಬರೆದ 24 ತಾಸುಗಳ ಒಳಗೆ ಆ ನಿವೇಶನಗಳ ಕ್ರಯಪತ್ರ ರದ್ದಾಗಿದೆ. ಮುಡಾದಲ್ಲಿ ಬದಲಿ ನಿವೇಶನ ಪಡೆದು ಮತ್ತೆ ವಾಪಸ್ ನೀಡಿರುವ ಮೊದಲ ಪ್ರಕರಣ ಇದಾಗಿದೆ.
ಸಿಎಂ ಮತ್ತು ಕುಟುಂಬ ಸದಸ್ಯರ ವಿರುದ್ಧ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಸೋಮವಾರ ಸಂಜೆ ಸಿಎಂ ಅವರ ಪುತ್ರ ಯತೀಂದ್ರ ಅವರು ಮುಡಾ ಕಚೇರಿಗೆ ತೆರಳಿ ತಮ್ಮ ತಾಯಿಗೆ ನೀಡಲಾಗಿರುವ 14 ನಿವೇಶನ ಗಳನ್ನು ವಾಪಸ್ ನೀಡುವ ಪತ್ರವನ್ನು ಸಲ್ಲಿಸಿದ್ದರು.
ಬಳಿಕ ಮುಡಾ ಆಯುಕ್ತರು ಕಾನೂನು ಶಾಖೆಯ ಸಲಹೆಯಂತೆ ಪಾರ್ವತಿಯವರಿಗೆ ನೀಡಲಾಗಿರುವ 14 ಸೈಟ್‌ಗಳ ಕ್ರಯ ಪತ್ರ ರದ್ದುಪಡಿಸುವಂತೆ ಉಪನೋಂದಣಾಧಿಕಾರಿಗಳ ಕಚೇರಿಗೆ ಮಂಗಳವಾರ ಬೆಳಗ್ಗೆ ಪತ್ರ ಬರೆದಿದ್ದರು. 24 ತಾಸುಗಳ ಒಳಗೆ 14 ನಿವೇಶನಗಳ ಖಾತೆ ರದ್ದಾಗಿರುವುದು ವಿಶೇಷವಾಗಿದೆ.
ಸಲಹೆ ಪಡೆದು ನಿರ್ಧಾರ: ಈ ಸಂಬಂಧ “ಉದಯವಾಣಿ’ ಜತೆಗೆ ಮಾತನಾಡಿರುವ ಮುಡಾ ಆಯುಕ್ತ ರಘುನಂದನ್, ಡಾ| ಯತೀಂದ್ರ ಸೋಮವಾರ ನಮ್ಮ ಕಚೇರಿಗೆ ಆಗಮಿಸಿ 14 ಸೈಟ್‌ಗಳನ್ನು ಹಿಂದಿರು ಗಿಸುವ ಬಗ್ಗೆ ಪತ್ರ ನೀಡಿದ್ದರು. ಬಳಿಕ ನಿವೇಶನ ಹಿಂದಿರುಗಿಸಿದರೆ ವಾಪಸ್ ತೆಗೆದುಕೊಳ್ಳಬಹುದೇ ಎನ್ನುವ ಬಗ್ಗೆ ಕಾನೂನು ಸಲಹೆಗಾರರೊಂದಿಗೆ ಚರ್ಚಿ ಸಿದ್ದೆ. ಕಾನೂನಿನಲ್ಲಿ ವಾಪಸ್ ಪಡೆಯಲು ಅವಕಾಶವಿದೆ ಎಂದು ಹೇಳಿದ್ದರಿಂದ ಉಪನೋಂದಣಾಧಿಕಾರಿಗಳಿಗೆ ವಿವಾದಿತ 14 ನಿವೇಶನಗಳ ಖಾತೆ ರದ್ದು ಮಾಡುವಂತೆ ಪತ್ರ ಬರೆದು ತಿಳಿಸಿದ್ದೆ. ಅದರಂತೆ ಅವರು ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದಿದ್ದಾರೆ.
ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಪ್ರತಿಕ್ರಿಯಿಸಿ, 1991ರ ನಿಯಮ 8ರಲ್ಲಿ ಸ್ವ ಇಚ್ಛೆಯಿಂದ ನಿವೇಶನ ವಾಪಸ್ ಕೊಡಬಹುದು. ಹಾಗೆಯೇ ನಾವು ಆ ಸೈಟ್‌ಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ನಮ್ಮ ಬಳಿ ಭೂ ಮಾಲಕರು
ಬಂದಿಲ್ಲ, ಅವರ ಸ್ಥಳಕ್ಕೆ ಹೋಗಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ ಎಂದು ತಿಳಿಸಿದರು.
ಯಾರು ಕೊಟ್ಟರೂ ಪಡೆಯುತ್ತೇವೆ: ಬದಲಿ ನಿವೇಶನ ಪಡೆದು ಮತ್ತೆ ವಾಪಸ್ ನೀಡಿರುವುದು ಮುಡಾದಲ್ಲಿ ಮೊದಲ ಪ್ರಕರಣವಾಗಿದೆ. ಮುಂದೆ ಯಾರೇ ವಾಪಸ್ ಕೊಟ್ಟರೂ ಇಷ್ಟೇ ವೇಗವಾಗಿ ಪಡೆಯುತ್ತೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪಾರ್ವತಿಯವರು ವಾಪಸ್ ಮಾಡಿರುವ 14 ನಿವೇಶನಗಳನ್ನು ಬೇರೆಯವರಿಗೆ ಹಂಚಿಕೆ ಮಾಡಬಹುದೇ ಅಥವಾ ತನಿಖೆ ಮುಗಿಯುವವರೆಗೆ ಕಾಯಬೇಕೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ. ಜತೆಗೆ ಈ ಪ್ರಕ್ರಿಯೆ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುತ್ತೇವೆ.
– ರಘುನಂದನ್,
ಮುಡಾ ಆಯುಕ್ತರು