Advertisement
ಗುರುವಾರ ಸಂಜೆ ವಿಧಾನಸೌಧದಲ್ಲಿ ಕರೆದಿದ್ದ ಶಾಸಕಾಂಗ ಸಭೆಗೆ ಹಾಜರಾದ ಶಾಸಕರ ಸಮ್ಮುಖದಲ್ಲಿ ಸಿದ್ದರಾಮಯ್ಯ ತಮ್ಮ ವಿರುದ್ಧದ ಪ್ರಕರಣಗಳ ಬಗ್ಗೆ ಆತ್ಮನಿವೇದನೆ ಮಾಡಿಕೊಂಡರು. ಸಭೆಯ ಆರಂಭದಲ್ಲಿಯೇ ಮುಡಾ ನಿವೇಶನ ಹಂಚಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣಗಳ ಬಗ್ಗೆ ಸ್ಪಷ್ಟನೆಗಳನ್ನು ನೀಡಿದ ಅವರು, ಎರಡೂ ಪ್ರಕರಣಗಳಲ್ಲಿ ತಮ್ಮದಾಗಲಿ, ಕುಟುಂಬದ್ದಾಗಲಿ, ಸರಕಾರದ್ದಾಗಲಿ ತಪ್ಪಿಲ್ಲ ಎಂಬುದನ್ನು ಪುನರುಚ್ಚರಿಸಿದರು.
Related Articles
ಪಕ್ಷದ ಶಾಸಕರಿಗೆ ಪ್ರಕರಣದ ಬಗ್ಗೆ ವಿವರಣೆ ನೀಡಿದ ಸಿಎಂ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ದೂರುದಾರರಾದ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದರು. ಹೇಗಾದರೂ ಮಾಡಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವನ್ನು ತೆಗೆಯುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ. ಅದಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬೆಂಬಲವೂ ಇದೆ.
Advertisement
ದೂರು ಕೊಟ್ಟಿರುವ ಸ್ನೇಹಿಮಯಿ ಕೃಷ್ಣ ರೌಡಿಶೀಟರ್, ಅಬ್ರಹಾಂ ಒಬ್ಬ ಬ್ಲ್ಯಾಕ್‌ಮೇಲರ್, ಪ್ರದೀಪ್ ಎಂಬಾತ ಜೆಡಿಎಸ್‌ನವನು. ಎಲ್ಲರೂ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು ಎನ್ನಲಾಗಿದೆ. ನಿವೇಶನ ಹಂಚಿಕೆ ಆದಾಗ ಮುಡಾ ಅಧ್ಯಕ್ಷರಾಗಿದ್ದವರು ಬಿಜೆಪಿಯವರು. ಅಂದು ಸರಕಾರ ಇದ್ದದ್ದೂ ಬಿಜೆಪಿಯದ್ದೇ. ಆಗ ಏಕೆ ಇವೆಲ್ಲ ಹಗರಣ ಆಗಲಿಲ್ಲ? ನನ್ನಿಂದಾಗಲೀ ನನ್ನ ಕುಟುಂಬದವರಿಂದಾಗಲೀ ಯಾವ ತಪ್ಪೂ ಆಗಿಲ್ಲ. ಇದರಲ್ಲಿ ನನ್ನ ಪತ್ನಿ, ಪುತ್ರ, ಭಾವಮೈದುನರ ಪಾತ್ರ ಇಲ್ಲ ಎಂದರು ಎನ್ನಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಎಲ್ಲ ನಡೆದಿಲ್ಲ. 84 ಕೋಟಿ ರೂ. ವರ್ಗಾವಣೆ ಆಗಿತ್ತು. ಈ ಪೈಕಿ 54 ಕೋಟಿ ರೂ.ಗಳನ್ನು ವಾಪಸ್ ತಂದಿದ್ದೇವೆ. ಎಸ್‌ಐಟಿ ರಚನೆ ಮಾಡಿ ತನಿಖೆಗೆ ಒಪ್ಪಿಸಿದ್ದೇವೆ. ನಾವಂತೂ ಎಲ್ಲಿಯೂ ಲೋಪ ಎಸಗಿಲ್ಲ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವನ್ನು ಎಳೆದು ತಂದು ನನ್ನನ್ನು, ಶಿವಕುಮಾರ್ ಅವರನ್ನು ಸಿಲುಕಿಸುವ ಪ್ರಯತ್ನ ನಡೆ ಯುತ್ತಿದೆ ಎಂದು ಮಾಹಿತಿ ಕೊಟ್ಟರು.
ಎಲ್ಲರೂ ಸಿದ್ದರಾಮಯ್ಯ ಬೆನ್ನಿಗಿದ್ದೇವೆ: ಡಿಕೆಶಿಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಡಿಸಿಎಂ ಶಿವಕುಮಾರ್, ಪಕ್ಷದ ಎಲ್ಲ ಶಾಸಕರು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದೇವೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಭಾಗವಹಿಸಿದ್ದರು. ಸ್ಪೀಕರ್ ಆದೇಶದಂತೆ 6 ಶಾಸಕರು ದಿಲ್ಲಿಯಲ್ಲಿ ನಡೆಯುತ್ತಿರುವ ತರಬೇತಿಗೆ ತೆರಳಿದ್ದು, ಉಳಿದ ಎಲ್ಲರೂ ಭಾಗವಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು. ನಮ್ಮ ಮುಖ್ಯಮಂತ್ರಿ ಹಾಗೂ ಸರಕಾರದ ವಿರುದ್ಧ ಸಂಚು ನಡೆಯುತ್ತಿದ್ದು, ನಮಗೆ ಜನಬೆಂಬಲವಿದೆ. ನಾವು ಇದಕ್ಕೆ ಜಗ್ಗುವುದಿಲ್ಲ. ಸಂವಿಧಾನ ರಕ್ಷಣೆ ಮಾಡುವ ಕೆಲಸಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು. ರಾಜ್ಯಪಾಲರ ರಾಜೀನಾಮೆಗೆ ಒತ್ತಡ
ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಕೈಹಾಕಿರುವ ಕೇಂದ್ರ ಮತ್ತು ರಾಜ್ಯಪಾಲರ ಕಾರ್ಯವೈಖರಿ ವಿರುದ್ಧ ಸಚಿವರು ಮತ್ತು ಕಾಂಗ್ರೆಸ್ ಮುಖಂಡರು ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಕರ್ನಾಟಕದ ರಾಜ್ಯಪಾಲರು ಕೇಂದ್ರದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದು ರಾಷ್ಟ್ರಪತಿಗಳು ತತ್‌ಕ್ಷಣವೇ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮಟ್ಟಹಾಕಲು ಕುತಂತ್ರ ರಾಜಭವನದ ಮೂಲಕ ನಡೆದಿದೆ. ಪಕ್ಷಪಾತವಾಗಿ ನಡೆಯುತ್ತಿರುವ ರಾಜ್ಯಪಾಲರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ ಎಂದರು. ರಾಜಕೀಯ ಲಾಭಕ್ಕಾಗಿ ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಮುಡಾ – ಆಯೋಗಕ್ಕೆ ಮಾಹಿತಿ ನೀಡಿ: ಪರಂ
ಬೆಂಗಳೂರು: ಮುಡಾ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಬದಲು ನಿವೃತ್ತ ನ್ಯಾ| ಪಿ.ಎನ್. ದೇಸಾಯಿ ಆಯೋಗಕ್ಕೆ ಮಾಹಿತಿ ನೀಡಲಿ ಎಂದು ಗೃಹಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ವಿಪಕ್ಷದವರು ಪದೇಪದೆ ಅನೇಕ ಹೇಳಿಕೆ ಗಳನ್ನು ನೀಡುತ್ತಿದ್ದಾರೆ. ಮುಡಾ ವಿಷಯದಲ್ಲಿ ಈಗಾಗಲೇ ನ್ಯಾಯಾಂಗ ತನಿಖೆ ಆರಂಭಿಸಿದೆ. ಏನೇ ಮಾಹಿತಿ, ದಾಖಲೆ ಇದ್ದರೂ ಅಲ್ಲಿ ಸಲ್ಲಿಸಲಿ ಎಂದರು.