ಮೈಸೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, 3ನೇ ಮತ್ತು 4ನೇ ಆರೋಪಿಗಳ ವಿಚಾರಣೆ ನಡೆಸಿದರು.
ಸತತ 8 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಗುರುವಾರ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಪ್ರಕರಣದ 3ನೇ ಆರೋಪಿ ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು 4ನೇ ಆರೋಪಿ ಜಮೀನು ಮಾಲಕ ದೇವರಾಜು ಅವರ ವಿಚಾರಣೆಯನ್ನು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ನಡೆಸಿದರು.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿರುವ ದೂರಿನಂತೆ ಜಮೀನು ಮಾಲಕ ದೇವರಾಜು ಅವರಿಗೆ ಸೇರಿದ ಕೆಸರೆಯ ಜಾಗವನ್ನು ಯಾವಾಗ ಖರೀದಿ ಮಾಡಲಾಗಿತ್ತು. ತಂದೆಯ ಹೆಸರಿನಿಂದ ಇವರ ಹೆಸರಿಗೆ ಯಾವಾಗ ಬಂತು. ತಮ್ಮ ಹೆಸರಿಗೆ ಬಂದ ಜಮೀನನ್ನು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಯಾವಾಗ ಮಾರಾಟ ಮಾಡಲಾಯಿತು. ಹೀಗೆ ಹಲವು ಪ್ರಶ್ನೆಗಳನ್ನು ದೇವರಾಜು ಅವರನ್ನು ಕೇಳಿ ವಿಚಾರಣೆ ನಡೆಸಿದರೆ, ಇದಕ್ಕೆ ಪೂರಕವಾಗಿ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಖರೀದಿ ಮಾಡಿದ್ದು ಯಾವಾಗ, ಸೋದರಿ ಪಾರ್ವತಿ ಅವರಿಗೆ ದಾನ ನೀಡಿದ್ದು, ಮುಡಾ ಸ್ವಾಧೀನಪಡಿಸಿಕೊಂಡಿದ್ದು ಯಾವಾಗ ಮೊದಲಾದ ಮಾಹಿತಿಯನ್ನು ವಿಚಾರಣೆ ವೇಳೆ ದಾಖಲು ಮಾಡಲಾಗಿದೆ.
ಕಳೆದ ಸೆ. 27ರಂದು ಸಿಎಂ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದ ಲೋಕಾಯುಕ್ತ ಎಸ್ಪಿ ಉದೇಶ್ ಅವರು ದೂರುದಾರ, ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್ ನೀಡಿ ಅವರ ವಿಚಾರಣೆ ನಡೆಸಿದ್ದರು. ಬಳಿಕ ಕೆಸರೆಯಲ್ಲಿ ಮಾರಾಟವಾಗಿದ್ದ ಭೂಮಿ ಮತ್ತು ವಿಜಯನಗರದಲ್ಲಿ ಸಿಎಂ ಪತ್ನಿ ಪಾರ್ವತಿಗೆ ಮಂಜೂರಾಗಿದ್ದ ನಿವೇಶನಗಳ ಬಳಿ ತೆರಳಿ ದೂರುದಾರರ ಸಮ್ಮುಖದಲ್ಲಿ ಮಹಜರು ನಡೆಸಿದ್ದರು.