Advertisement

ಮುಡಾ ಕಚೇರಿಗೆ ಇ.ಡಿ. ದಾಳಿ: ಸರಕಾರ-ವಿಪಕ್ಷ ವಾಗ್ಧಾಳಿ

12:43 AM Oct 19, 2024 | Team Udayavani |

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಿವೇಶನ ಹಂಚಿಕೆ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದಿಢೀರ್‌ ದಾಳಿ ನಡೆಸಿರುವುದಕ್ಕೆ ಸರಕಾರ ಹಾಗೂ ವಿಪಕ್ಷದವರು ವಾಗ್ಧಾಳಿ ನಡೆಸಿದ್ದಾರೆ.

Advertisement

ಮುಡಾ ಪ್ರಕರಣದಲ್ಲಿ ಹಣಕಾಸು ವ್ಯವಹಾರ ಇಲ್ಲವಾದರೂ ಇ.ಡಿ. ಯವರು ಮಾಹಿತಿ ಸಂಗ್ರಹಿಸುತ್ತಿರಬಹುದು. ಅದನ್ನು ದಾಳಿ ಎಂದು ಹೇಗೆ ಹೇಳುತ್ತೀರಿ? ಅವರು ದಾಖಲೆ ಕೇಳಬಹುದು, ಇವರು ಕೊಡಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮುಡಾದಲ್ಲಿ ಸುಮಾರು 3-4 ಸಾವಿರ ಕೋಟಿ ರೂ. ಅಕ್ರಮ ಆಗಿದೆ. ಇಷ್ಟು ಹಣ ಸರಕಾರದ ಖಜಾನೆಗೆ ಬಂದರೆ ಒಳ್ಳೆಯದಲ್ಲವೇ ?
ಮುಡಾದಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ ದೂರು ಕೊಟ್ಟಿಲ್ಲ, ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ನಾನು ಬೇಕಾದರೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬರುತ್ತೇನೆ. ಒಂದೇ ಒಂದು ಮುಡಾದ ಸಣ್ಣ ಪೇಪರ್‌ ತೆಗೆದುಕೊಂಡು ಬಂದಿದ್ದರೂದೇವರು ನನಗೆ ಕೊಡಬಾರದ ಶಿಕ್ಷೆ ಕೊಡಲಿ. ಸುಳ್ಳು ಹೇಳಿ, ಹೇಳಿದವರು ಹಾಳಾಗಿ ಹೋಗುತ್ತಾರೆ ಎಂದು ನಗರಾಭಿವೃದ್ಧೀ ಸಚಿವ ಬೈರತಿ ಸುರೇಶ್‌ ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಚ್‌.ಡಿ. ಕುಮಾರಸ್ವಾಮಿ, ಮೈಸೂರು ನಗರವನ್ನು 30-40 ವರ್ಷಗಳಿಂದ ಗುತ್ತಿಗೆ ತೆಗೆದುಕೊಂಡಿದ್ದವರು ಸಿದ್ದರಾಮಯ್ಯ ಹಾಗೂ ಅವರ ಪಟಾಲಂ. ಸಚಿವ ಬೈರತಿ ಸುರೇಶ್‌ ಹೆಲಿಕಾಪ್ಟರ್‌ನಲ್ಲಿ ತರಾತುರಿಯಲ್ಲಿ ಯಾಕೆ ಹೋದರು? ಎಂದು ಪ್ರಶ್ನಿಸಿದರು.

ಮುಡಾದ ಕೆಸರೆ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಕೆಸರು ಮೆತ್ತಿಕೊಂಡಿದ್ದಾರೆ. ಅವರ ಪಾಪದ ಕೊಡ ತುಂಬಿದೆ. ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

ಮುಡಾ ಕಚೇರಿ ಮೇಲಿನ ಇ.ಡಿ. ದಾಳಿ ಸ್ವಾಗತಾರ್ಹ. ಆದರೆ ಅಲ್ಲಿ ದಾಖಲೆಗಳೇ ಇಲ್ಲ. ಮುಡಾ ಕಚೇರಿಗೆ ನಗರಾಭಿವೃದ್ಧಿ ಸಚಿವರನ್ನು ಕಳುಹಿಸಿ ಬೆಂಗಳೂರಿಗೆ ದಾಖಲೆಗಳನ್ನು ತರಿಸಿದ್ದಾರೆ. ಇ.ಡಿ. ಮೊದಲು ಇದನ್ನು ಹುಡುಕಬೇಕು.
-ಆರಗ ಜ್ಞಾನೇಂದ್ರ, ಶಾಸಕ

ಮುಡಾ ವಿಚಾರದಲ್ಲಿ ನ್ಯಾಯಾಲಯ ತನಿಖೆಗೆ ಸೂಚಿಸಿದೆ. ತನಿಖೆ ಬಳಿಕ ತಪ್ಪಿತಸ್ಥರು ಹೊರಗೆ ಬರುತ್ತಾರೆ. ಆಗ ನಮ್ಮ ಸಿಎಂ ತಪ್ಪಿತಸ್ಥರು ಎಂದಾದರೆ ನಾವೇ ರಾಜೀನಾಮೆ ಕೊಡಿಸುತ್ತೇವೆ. ಇ.ಡಿ. ಅಧಿಕಾರಿಗಳು ಸಿಎಂ, ಡಿಸಿಎಂ ಹೆಸರು ಹೇಳುವಂತೆ ನಾಗೇಂದ್ರ ಅವರ ಮೇಲೆ ಒತ್ತಡ ಹೇಳಿದ್ದಾರೆ. ಹಾಗೆಂದು ನಾಗೇಂದ್ರ ಅವರೇ ಹೇಳಿದ್ದಾರೆ.
– ಬೇಳೂರು ಗೋಪಾಲಕೃಷ್ಣ, ಶಾಸಕ

ಮುಡಾದಲ್ಲಿ ಇ.ಡಿ. ತನಿಖೆ ಮಾಡುವಂಥದ್ದು ಏನೂ ಇಲ್ಲ. ಆದರೆ ಉಪ ಚುನಾವಣೆಯಲ್ಲಿ ಮಾತನಾಡಲು ವಿಚಾರ ಬೇಕು ಅಂತ ಕಾರ್ಯಾಚರಣೆ ಮಾಡಿಸಲಾಗಿದೆ. ಈಗಾಗಲೇ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿದೆ. ಆದರೂ ಕೇಂದ್ರ ಇ.ಡಿ.ಯನ್ನು ತನಿಖೆಗೆ ಕಳುಹಿಸಿದೆ. ನಾವು ಇದಕ್ಕೆಲ್ಲ ಹೆದರುವುದಿಲ್ಲ.
– ಎಂ. ಲಕ್ಷ್ಮಣ್‌, ಕೆಪಿಸಿಸಿ ವಕ್ತಾರ

ಇಡಿ ದಾಳಿ ಹಿನ್ನೆಲೆ:
ಮುಡಾ ಸಾರ್ವಜನಿಕ ಕೆಲಸಗಳಿಗೆ ತಡೆ
ಮೈಸೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ತಂಡ ಶುಕ್ರವಾರ ದಿಢೀರ್‌ ದಾಳಿ ಮಾಡಿದ್ದು, ಮುಡಾ ಕಚೇರಿಯ ಮುಖ್ಯದ್ವಾರಕ್ಕೆ ಬೀಗ ಹಾಕಿ ಪರಿಶೀಲನೆ ನಡೆಸಿತು. ಮುಖ್ಯದ್ವಾರ ಬಂದ್‌ ಆಗಿರುವುದರಿಂದ ಸಾರ್ವಜನಿಕರ ಸೇವಾ ಕಾರ್ಯಗಳು ಸ್ಥಗಿತಗೊಂಡಿದ್ದವು. ದೂರದ ಊರುಗಳಿಂದ ಮುಡಾಕ್ಕೆ ಆಗಮಿಸಿದ ಸಾರ್ವಜನಿಕರು ಯಾವುದೇ ಮಾಹಿತಿ ಲಭ್ಯವಾಗದೇ ಪರಿತಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next