ಹುಬ್ಬಳ್ಳಿ: ಪ್ರಕರಣದ ಆರೋಪದ ಕುರಿತು ತನಿಖೆ ವಿಚಾರದಲ್ಲಿ ಕಾಂಗ್ರೆಸ್ ಗೊಂದು, ಬಿಜೆಪಿ ಗೊಂದು ಕಾನೂನು ಇದೆಯೇ? ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿಗರು ಆರೋಪಕ್ಕೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣದಲ್ಲಿ ಸಿಎಂ ರಾಜಿನಾಮೆ ನೀಡಿ ವಿಚಾರಣೆ ಎದುರಿಸಲಿ ಎಂಬುದು ಬಿಜೆಪಿಗರ ಒತ್ತಾಯವಾದರೆ, ಚುನಾವಣ ಬಾಂಡ್ ಹಗರಣದಲ್ಲಿ ಪ್ರಧಾನಿ ರಾಜೀನಾಮೆ ನೀಡಬೇಕಲ್ಲ ಎಂದು ಪ್ರಶ್ನಿಸಿದರು.
16,000 ಕೋಟಿ ಚುನಾವಣಾ ಬಾಂಡ್ ಹರಣದಲ್ಲಿ ಆರೋಪವಲ್ಲ. ಸುಪ್ರೀಂ ಕೋರ್ಟ್ ತನ್ನ ನಿಲುವು ವ್ಯಕ್ತಪಡಿಸಿದೆ.ಇಷ್ಟಾದರು ಪ್ರಧಾನಿ ರಾಜೀನಾಮೆ ನೀಡಿಲ್ಲ. ಇನ್ನು ಮುಡಾ ಹೆಸರಲ್ಲಿ ಸಿಎಂ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗರಿಗೇನಿದೆ.
ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಬಗ್ಗೆ ಬಿಜೆಪಿಗರಿಗೆ ಶಂಕೆ ಯಾಕೆ ವ್ಯಕ್ತವಾಗುತ್ತಿದೆ ಗೊತ್ತಿಲ್ಲ. ಸಾವಿರಾರು ಕೋಟಿ ರೂ. ಗಣಿ ಹಗರಣವನ್ನು ಯಶಸ್ವಿ ತನಿಖೆ ನಡೆಸಿದ್ದು ನಮ್ಮ ಲೋಕಾಯುಕ್ತ ಅಲ್ಲವೆ. ಲೋಕಾಯುಕ್ತ ಅಧಿಕಾರಿಗಳ ಮೇಲೆ ಸಿಎಂ ಪ್ರಭಾವ ಬೀರುತ್ತಾರೆ ಎನ್ನುವುದಾದರೆ ಕೇಂದ್ರ ಸಚಿವರ ವಿರುದ್ಧದ ಹಗರಣದ ಬಗ್ಗೆ ಯಾರು ತನಿಖೆ ನಡೆಸಬೇಕು ಎಂದು ಪ್ರಶ್ನಿಸಿದರು.
ವಕ್ಫ್ ಕುರಿತಾಗಿ ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ. ಉಪ ಚುನಾವಣೆ ಕಾರಣಕ್ಕೆ ಅದನ್ನು ದೊಡ್ಡದಾಗಿಸಲು ಮುಂದಾಗಿದೆ. ವಕ್ಫ್ ಪ್ರಕರಣದಲ್ಲಿ ಯಾವ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಸಂಸದೀಯ ಜಂಟಿ ಸಮಿತಿ ಬರುತ್ತಿದೆಯೋ ಗೊತ್ತಿಲ್ಲ.ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.