ದಾವಣಗೆರೆ: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಸಿದ್ದರಾಮಯ್ಯ ಅವರು ತಕ್ಷಣ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.
ಸುದ್ದಿಗೋಷ್ಠಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪಾರದರ್ಶಕವಾದ ಆಡಳಿತ ನೀಡಿದ್ದರೆ ಇಂಥ ಸ್ಥಿತಿ ಬರುತ್ತಿರಲ್ಲ. ಆರೋಪ ಬಂದಿರುವ ಈ ಸಂದರ್ಭದಲ್ಲಿ ಅವರು ಕುರ್ಚಿಗೆ ಅಂಟಿಕೊಳ್ಳದೆ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.
ರಾಜ್ಯಪಾಲರು ಕಾನೂನು ತಜ್ಞರ ಜತೆ ಚರ್ಚೆ ಮಾಡಿ ಕಾನೂನಾತ್ಮಕವಾಗಿಯೇ ಅನುಮತಿ ಕೊಟ್ಟಿದ್ದಾರೆ. ಇದರಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ ಏನೂ ಇಲ್ಲ. ರಾಜ್ಯಪಾಲರ ಕ್ರಮ ಇದು ರಾಜಕೀಯ ಪ್ರೇರಿತವಲ್ಲ. ಕಾನೂನಾತ್ಮಕ ಕ್ರಮ. ಯಡಿಯೂರಪ್ಪ ಅವರ ಮೇಲೆ ಖಾಸಗಿ ವ್ಯಕ್ತಿಗಳು ದೂರು ಕೊಟ್ಟಾಗ ಆಗಿನ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಆಗ ರಾಜಭವನ ಸ್ವಚ್ಛಗಿತ್ತಾ? ತನ್ನ ಆಡಳಿತಾವಧಿಯಲ್ಲಿ ರಾಜಭವನವನ್ನು ಕಚೇರಿ ಮಾಡಿಕೊಂಡಿದ್ದು ಕಾಂಗ್ರೆಸ್. ಹಿಂದೆ ತಮ್ಮ ಮೇಲೆ ಆರೋಪ ಬಂದಾಗ ಯಡಿಯೂರಪ್ಪ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಸಹ ಅದೇ ಮಾರ್ಗ ಅನುಸರಿಸಲಿ ಎಂದರು.
ಕಾಂಗ್ರೆಸ್ ಗೆ ಮತ್ತೊಂದು ಹೆಸರೇ ಬ್ರಹ್ಮಾಂಡ ಭ್ರಷ್ಟಾಚಾರ. ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳನ್ನು ಮಾಡುತ್ತಲೇ ಬಂದಿದ್ದು ಇಡೀ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಗಿನಡಿಯಲ್ಲೇ ಭ್ರಷ್ಟಾಚಾರ ನಡೆದಿದೆ. ರಾಜಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವ ವಿರುದ್ಧ ನ್ಯಾಯಾಲಯಕ್ಕೆ ಬೇಕಾದರೆ ಹೋಗಲಿ. ಆದರೆ, ನ್ಯಾಯಾಲಯದ ತೀರ್ಮಾನ ಆಗುವವರೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ನ್ಯಾಯಾಲಯದಲ್ಲಿ ಜಯ ಸಿಕ್ಕ ಮೇಲೆ ಬೇಕಾದರೆ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ರೇಣುಕಾಚಾರ್ಯ ಹೇಳಿದರು.
ಕಾಂಗ್ರೆಸ್ ಹಗರಣಗಳ ವಿರುದ್ಧ ಮತ್ತೆ ಪಾದಯಾತ್ರೆಗೆ ಪಕ್ಷದ ರಾಷ್ಟ್ರೀಯ ಮುಖಂಡರ ಅನುಮತಿ ಕೇಳಿದ್ದು, ಅನುಮತಿ ಸಿಕ್ಕರೆ ವಾಲ್ಮೀಕಿ ನಿಗಮ, ದಲಿತರ ಹಣ ದುರುಪಯೋಗದ ವಿರುದ್ಧ ಪಾದಯಾತ್ರೆ ಮಾಡಲಾಗುವುದು ಎಂದರು.