ದಾವಣಗೆರೆ: ವಕ್ಫ್ ಬೋರ್ಡ್ (Waqf Board) ರದ್ದುಗೊಳಿಸಬೇಕು ಎಂದು ಕೋರಿ ತಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಈ ವಿಚಾರವಾಗಿ ಎಲ್ಲರೂ ಪಕ್ಷಾತೀತವಾಗಿ ಪ್ರಧಾನಿಯವರಿಗೆ ಪತ್ರ ಬರೆಯಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (M.P.Renukacharya) ಆಗ್ರಹಿಸಿದರು.
ಶುಕ್ರವಾರ (ನ.01) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ನಾಳೆ ನಮ್ಮ -ನಿಮ್ಮ ಮನೆ, ಜಮೀನು ಕಬಳಿಸಲು ಬರುವ ಸಾಧ್ಯತೆಯಿದೆ. ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಹ ಆಗದು. ಇದಕ್ಕೆ ಪ್ರತ್ಯೇಕ ನ್ಯಾಯಾಧೀಕರಣವಿದೆ. ಆದ್ದರಿಂದ ನಮಗೆ ಮಾರಕವಾಗಿರುವ ವಕ್ಫ್ ಬೋರ್ಡ್ ರದ್ದುಗೊಳಿಸಲು ಎಲ್ಲ ಪಕ್ಷದವರೂ ಪತ್ರ ಚಳವಳಿ ನಡೆಸಬೇಕು ಎಂದರು.
ಜಮೀರ್ ಅಹ್ಮದ್ ಒಬ್ಬ ಮತಾಂಧ. ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಅವರು ಇದೇ ರೀತಿ ತಮ್ಮ ಉದ್ಧಟತನ ಮೆರೆದರೆ ಹುಷಾರ್! ಜಮೀರ್ ಅವರನ್ನೇ ಪಾಕಿಸ್ತಾನಕ್ಕೆ ಕಳುಹಿಸಬೇಕಾಗುತ್ತದೆ. ಮತಾಂಧ ಜಮೀರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಜನರೇ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲಿದ್ದಾರೆ ಎಂದರು.
ಸರ್ಕಾರದ ಪತನ ದಿನ ದೂರವಿಲ್ಲ
ವಕ್ಫ್ ಬೋರ್ಡ್ ಹೆಸರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆಸ್ತಿಗಳನ್ನು ಕಬಳಿಸಲಾಗಿದೆ. ಇದರಲ್ಲಿ ಹಿಂದುಗಳ ಸ್ಮಶಾನ, ಮಠ, ದೇವಸ್ಥಾನ, ಕೃಷಿ ಜಮೀನುಗಳೂ ಇವೆ. ದೇವಸ್ಥಾನಕ್ಕೆ, ಮಠಕ್ಕೆ ಒಂದು ಗುಂಟೆ ಜಾಗ ಕೊಡಿಸಲು ಆಗದ ಅಽಕಾರಿಗಳು, ನೂರಾರು ಎಕರೆ ಭೂಮಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಮಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹಿಂದು ವಿರೋಧಿ ಸರ್ಕಾರವಾಗಿದ್ದು ಪತನವಾಗುವ ಕಾಲ ದೂರವಿಲ್ಲ. ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಹಾಗೂ ಸರ್ಕಾರವೂ ಪತನವಾಗುತ್ತದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಾಕಾರರು. ಬಣ್ಣ ಹಚ್ಚದೆ ನಾಟಕ ಮಾಡುತ್ತಿದ್ದು ಶಕ್ತಿ ಯೋಜನೆ ಪರಿಷ್ಕರಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿಯವರು ಪರಿಷ್ಕರಣೆ ಇಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ ಮಲ್ಲಿಕಾರ್ಜುನ್ ಖರ್ಗೆಯವರು ಮಹಾರಾಷ್ಟ್ರ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಿದ್ದು ಚುನಾವಣೆಗಾಗಿ ಮಾಡುತ್ತಿರುವ ಕಾಂಗ್ರೆಸ್ನ ನಾಟಕ ಬಹಳ ದಿನ ನಡೆಯುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.