ದಾವಣಗೆರೆ: ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಯುಪಿಎ ಸರ್ಕಾರಕ್ಕಿಂತಲೂ ಮೂರು ಪಟ್ಟು ಹೆಚ್ಚು ತೆರಿಗೆ ಮತ್ತು ಹಂಚಿಕೆಯಲ್ಲಿ ಪಾಲು ನೀಡಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಂಥ ಸ್ವಯಂಘೋಷಿತ ಹಣಕಾಸು ತಜ್ಞರಿಗೆ, ನಿರ್ದಿಷ್ಟ ಯೋಜನೆಗಳಿಗೆ ಬಿಡುಗಡೆಯಾದ ಹಣದ ಮೊತ್ತವನ್ನು ತಿಳಿದುಕೊಳ್ಳುವುದು ಕಷ್ಟವೇನಲ್ಲ. ಎಲ್ಲದಕ್ಕೂ ಕೇಂದ್ರ ಸರಕಾರನ್ನು ಏಕೆ ದೂರುತ್ತೀರಿ? ಇಂತಹ ಸಂಘರ್ಷ ಸರಿಯಲ್ಲ. ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ? ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರನ್ನು ಯಾಕೆ ಲಘುವಾಗಿ ನಡೆಸಿಕೊಳ್ಳುತ್ತೀರಿ? ಇಂತಹ ವರ್ತನೆಯಿಂದ ರಾಜ್ಯಕ್ಕೆ ಆಗುವ ಲಾಭವಾದರೂ ಏನು? ಸಂಘರ್ಷದಿಂದಲೇ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದರು.
ರಾಜ್ಯ ಸರಕಾರ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರದ ವಿರುದ್ಧ ಆರೋಪ ಮಾಡುವುದು ಸರಿಯೇ? ರಾಜ್ಯ ಸರಕಾರದಿಂದಲೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ತನ್ನ ರಾಜಕೀಯ ಪ್ರತಿಷ್ಠೆ ಹಾಗೂ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸರಕಾರ ರಾಜಕೀಯ ಹಿತಾಸಕ್ತಿಯ ಜತೆ ಚೆಲ್ಲಾಟ ಆಡುತ್ತಿದೆ. ರಾಜ್ಯಕ್ಕೆ ಒಳ್ಳೆಯದು ಆಗಬೇಕಾದರೆ ಪ್ರಧಾನಿಗಳಿಗೆ ಪ್ರಾಮಾಣಿಕವಾಗಿ ಮನವರಿಕೆ ಮಾಡಬೇಕು ಎಂದರು.
ಒಂದು ವೇಳೆ ಸಚಿವ ಪ್ರಿಯಾಂಕ ಖರ್ಗೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಕೆಐಎಡಿಬಿಯಿಂದ ಪಡೆದಿದ್ದ ಜಮೀನನ್ನು ವಾಪಸ್ ಕೊಟ್ಟಿದ್ದು ಯಾಕೆ? ಜಮೀನು ವಾಪಸ್ ಕೊಟ್ಟಿದ್ದರ ಹಿಂದೆ ರಾಜಕೀಯ ಲೆಕ್ಕಚಾರ ಇದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರು ಯಾವುದೇ ಕ್ಷಣದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಕ್ಷೀಪ್ರ ರಾಜಕೀಯ ಬೆಳವಣಿಗೆಗಳು ನಡೆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮೇಲೆ ಯಾವುದೇ ಕಳಂಕ ಇರಬಾರದೆಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೆಐಎಡಿಬಿಯಿಂದ ಕಾನೂನು ಬಾಹಿರವಾಗಿ ಪಡೆದಿದ್ದ ಜಮೀನನ್ನು ವಾಪಸ್ ಕೊಟ್ಟಿದ್ದಾರೆ. ಪ್ರಿಯಾಂಕ ಖರ್ಗೆ ಅವರು ದೊಡ್ಡ ದೊಡ್ಡ ಮಾತನಾಡುವುದನ್ನು ನಿಲ್ಲಿಸಿ ಇಲಾಖೆ ಕಡೆ ಗಮನಹರಿಸಲಿ ಎಂದ ಅವರು, ಆರ್ ಎಸ್ಎಸ್ ನವರಿಗೆ ನೀಡಿದ್ದ ಜಮೀನನ್ನು ಸರ್ಕಾರ ಹಿಂಪಡೆಯಬೇಕೆಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಬಂಡಾರಿ ಹೇಳಿರುವುದು ತೀವ್ರ ಖಂಡನೀಯ ಎಂದರು.