Advertisement

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

02:14 AM Apr 18, 2021 | Team Udayavani |

ಅಮಾಸೆಬೈಲು: ದಶಕಗಳೇ ಕಳೆದರೂ ಈ ರಸ್ತೆಗಳಿಗೆ ಮಾತ್ರ ಇನ್ನೂ ಡಾಮರು ಭಾಗ್ಯ ಒಲಿದು ಬಂದಿಲ್ಲ. ಊರವರು ಪ್ರತೀ ವರ್ಷ ಮಣ್ಣಿನ ರಸ್ತೆ ದುರಸ್ತಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಪ್ರತೀ ವರ್ಷದ ಮಳೆಗಾಲದಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಪರಿತಪಿಸುವುದು ಮಾತ್ರ ತಪ್ಪಿಲ್ಲ. ನಮ್ಮೂರಿನ ರಸ್ತೆ ಅಭಿವೃದ್ಧಿಯಾಗಬೇಕಾದರೆ ಇನ್ನೆಷ್ಟು ವರ್ಷ ಕಾಯ ಬೇಕು ಎನ್ನುವುದು ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಕೆಲಾ ಗ್ರಾಮಸ್ಥರ ಪ್ರಶ್ನೆಯಾಗಿದೆ.

Advertisement

ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಕೆಲಾ – ಕ್ಯಾಕೋಡು ಕಡೆಗೆ ಸಂಚರಿಸುವ 2 ಕಿ.ಮೀ. ಉದ್ದದ ಮಣ್ಣಿನ ರಸ್ತೆ, ಕೆಲಾ ಅಂಗಡಿ ಬಳಿಯಿಂದ ಸಂಪಿಗೆಮನೆ, ಕೆಲಾ ಕರ್ಪಾಡಿ, ಕೆಲಾ ಕುಪ್ಪನಾಡಿ ಕಡೆಗೆ ಸಂಚರಿಸುವ 5 ಕಿ.ಮೀ. ಉದ್ದದ ಮಣ್ಣಿನ ರಸ್ತೆಗೆ ಇನ್ನೂ ಡಾಮರು ಕಾಮ ಗಾರಿ ಆಗಿಲ್ಲ. ಮಣ್ಣಿನ ರಸ್ತೆಯಿಂದಾಗಿ ಕೆಲಾ ಭಾಗದ ಗ್ರಾಮಸ್ಥರು ನಿತ್ಯ ಸಂಕಷ್ಟ ಪಡುವಂತಾಗಿದೆ.

2 ಕಿ.ಮೀ. ಮಣ್ಣಿನ ರಸ್ತೆ
ಕೆಲಾ ಮುಖ್ಯ ರಸ್ತೆಯಿಂದ ಹಾದು ಹೋಗುವ ಕೆಲಾ ದೊಡ್ಮನೆ, ಕೆಲಾ ಕ್ಯಾಕೋಡು, ಕೆಲಾ ದೇವಸ್ಥಾನ ಹಾಗೂ ತೊಂಬಟ್ಟು ಕಡೆಯ ರಸ್ತೆ ಕೂಡುವರೆಗಿನ ಸುಮಾರು 2 ಕಿ.ಮೀ. ರಸ್ತೆಯು ಮಣ್ಣಿನ ರಸ್ತೆಯಾಗಿಯೇ ಉಳಿ ದಿದೆ. ಈ ಭಾಗದಲ್ಲಿ ಸುಮಾರು 20-25ಕ್ಕೂ ಹೆಚ್ಚು ಕುಟುಂಬ ಗಳು ನೆಲೆಸಿದ್ದು, ಹದಗೆಟ್ಟ ರಸ್ತೆಯಿಂದಾಗಿ ನಿತ್ಯ ಪ್ರಯಾಸ ಪಡುತ್ತಿದ್ದಾರೆ. ಅದರಲ್ಲೂ ಮಳೆಗಾಲದಲ್ಲಂತೂ ಈ ಮಣ್ಣಿನ ಮಾರ್ಗದಲ್ಲಿ ಸಂಚಾರವೇ ದುಸ್ತರವಾಗಿದೆ.

5 ಕಿ.ಮೀ. ಮಣ್ಣಿನ ರಸ್ತೆ
ಕೆಲಾ ಮುಖ್ಯ ರಸ್ತೆಯಿಂದ ಹಾದು ಹೋಗುವ ಕೆಲಾ ಅಂಗಡಿ ಬಳಿಯಿಂದ ಕೆಲಾ ಸಂಪಿಗೆ ಮನೆ, ಕೆಲಾ ಕರ್ಪಾಡಿ, ಕೆಲಾ ಕುಪ್ಪನಾಡಿ ಕಡೆಗೆ ಸಂಚರಿಸುವ ಸುಮಾರು 5 ಕಿ.ಮೀ. ಮಣ್ಣಿನ ರಸ್ತೆಯು ದಶಕಗಳಿಗೂ ಹೆಚ್ಚು ಕಾಲದಿಂದ ಅಭಿವೃದ್ಧಿಗೆ ಬೇಡಿಕೆಯಿದೆ. ಈ ಭಾಗದಲ್ಲಿ ಸುಮಾರು 25-30 ಕುಟುಂಬಗಳು ನೆಲೆಸಿದ್ದು, ಹೊಂಡ- ಗುಂಡಿಗಳ ಈ ಮಾರ್ಗದಲ್ಲಿ ನಿತ್ಯ ಸಂಕಷ್ಟಪಡುತ್ತಿದ್ದಾರೆ.

ಇನ್ನೆಷ್ಟು ವರ್ಷ ಬೇಕು?
ಪ್ರತಿ ಚುನಾವಣೆ ಸಂದರ್ಭದಲ್ಲಿ ಇಲ್ಲಿಗೆ ಪ್ರಚಾರಕ್ಕೆ ಜನಪ್ರತಿನಿಧಿಗಳು ಬರುತ್ತಾರೆ. ಆಗ ಈ ವರ್ಷ ನಿಮ್ಮ ಈ ರಸ್ತೆಗೆ ಡಾಮರು ಹಾಕಿ ಕೊಡುತ್ತೇವೆ ಅನ್ನುತ್ತಾರೆ. ಆದರೆ ಚುನಾವಣೆ ಮುಗಿದು, ಗೆದ್ದ ಬಳಿಕ ಇತ್ತ ಬರುವುದೇ ಇಲ್ಲ. ನಾವೇ ಅವರಲ್ಲಿಗೆ ಹೋಗಿ ಮನವಿ ಸಲ್ಲಿಸಿದರೂ, ಈ ಸಲ ಆಗಿಲ್ಲ. ಮುಂದಿನ ವರ್ಷ ನೋಡುವ ಅನ್ನುತ್ತಾರೆ. ಹೀಗೆ ಇನ್ನೆಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ,

Advertisement

ನಮ್ಮದು ಗ್ರಾಮೀಣ ಪ್ರದೇಶವಾಗಿದ್ದು, ಪೇಟೆಯಿಂದ ತುಂಬಾ ದೂರವಿದೆ. ನಮಗೆ ಆಸ್ಪತ್ರೆಯು ಹತ್ತಾರು ಕಿ.ಮೀ. ದೂರದಲ್ಲಿದೆ. ಯಾರಿಗಾದರೂ ಅನಾರೋಗ್ಯವಾದರೆ ಈ ರಸ್ತೆಯಲ್ಲಿ ಸಂಚರಿಸುವುದೇ ತ್ರಾಸದಾಯಕ ಎನ್ನುವುದಾಗಿ ಕೆಲಾ ಭಾಗದ ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಮುಂದಿನ ಹಂತದಲ್ಲಿ ಪ್ರಯತ್ನ
ಕೆಲಾ ಭಾಗದ ಕ್ಯಾಕೋಡು ಹಾಗೂ ಸಂಪಿಗೆ ಮನೆಯ ಮಣ್ಣಿನ ರಸ್ತೆಗಳೆರಡರ ಅಭಿವೃದ್ಧಿ ಬಗ್ಗೆ ಗಮನದಲ್ಲಿದ್ದು, ಆದರೆ ಸದ್ಯಕ್ಕೆ ಪಂಚಾಯತ್‌ನಲ್ಲಿ ಅಷ್ಟೊಂದು ಅನುದಾನ ಇಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಅದಕ್ಕಾಗಿ ಅನುದಾನವನ್ನು ಮೀಸಲಿರಿಸಲಾಗುವುದು.
– ಚಂದ್ರಶೇಖರ ಶೆಟ್ಟಿ ತಲ್ಮಕ್ಕಿ, ಅಧ್ಯಕ್ಷರು, ಅಮಾಸೆಬೈಲು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next