Advertisement

ಹಸಿ ಕಸ ನಿರ್ವಹಣೆಗೆ ಮನೆ-ಮನೆಗೆ ಮಣ್ಣಿನ ಮಡಕೆ

03:30 AM Jun 30, 2018 | Karthik A |

ಮಹಾನಗರ: ನಗರ ಪ್ರದೇಶದ ಮನೆಗಳಲ್ಲಿ ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದ್ದರೆ, ಇನ್ನೊಂದೆಡೆ, ನಗರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಒಣ, ಹಸಿ ಕಸವಾಗಿ ವಿಂಗಡಿಸಬೇಕೆಂಬ ಪಾಲಿಕೆ ನಿಯಮವಿದ್ದರೂ ಯಾರು ಕೂಡ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹೀಗಿರುವಾಗ, ನಗರದಲ್ಲಿ ಈಗಾಗಲೇ ಸ್ವಚ್ಛತಾ ಅಭಿಯಾನದ ಮೂಲಕ ಸಾಕಷ್ಟು ಜಾಗೃತಿ ಮೂಡಿಸಿರುವ ರಾಮಕೃಷ್ಣ ಮಿಷನ್‌ ನವರು ಇದೀಗ ಹಸಿ ಕಸ ವಿಲೇವಾರಿಗೆ ಮುಂದಾಗಿದ್ದಾರೆ.

Advertisement

ಒಣ ಕಸಗಳನ್ನು ತುಂಬಾ ದಿನಗಳವರೆಗೆ ಮನೆಯಲ್ಲಿ ಇಡಬಹುದು. ಆದರೆ, ಹಸಿ ಕಸವನ್ನು ಎರಡು ದಿನಗಳಿಗಿಂತ ಹೆಚ್ಚು ಕಾಲ ಮನೆಯಲ್ಲಿ ಇರಿಸಿಕೊಳ್ಳುವುದು ಅಸಾಧ್ಯ. ಹಾಗಾಗಿ ಮಿಷನ್‌ ನವರು ಹಸಿ ಕಸಗಳ ನಿರ್ವಹಣೆಗಾಗಿ ಮಣ್ಣಿನ ಮಡಕೆ ಕಾಂಪೋಸ್ಟ್‌ ವಿಧಾನವನ್ನು ಕಾರ್ಯರೂಪಕ್ಕೆ ತರಲು ಯೋಜನೆ ರೂಪಿಸುತ್ತಿದೆ. ಪ್ರಾಯೋಗಿಕವಾಗಿ ಸುಮಾರು 1,000 ಮಡಕೆಗಳನ್ನು ನಗರದ ವಿವಿಧ ಭಾಗದ ಜನರಿಗೆ ನೀಡಿದ್ದು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಬಳಿಕ ಮುಂದುವರಿಯುವ ಬಗ್ಗೆ ಮಿಷನ್‌ ಚಿಂತನೆ ನಡೆಸಿದೆ.
ಮನೆಗಳಲ್ಲಿನ ಹಸಿ ಕಸದಿಂದ ಕಾಂಪೋಸ್ಟ್‌ ತಯಾರಿಸುವ ಪ್ರಯತ್ನ ಒಂದು ವರ್ಷದಿಂದ ನಡೆಯುತ್ತಿದೆ. ಹಸಿ ಕಸದ ವಿಲೇವಾರಿ ಸಮಸ್ಯೆಯನ್ನು ಭಾಗಶಃ ಪರಿಹರಿಸಬಹುದು ಎಂಬುದು ರಾಮಕೃಷ್ಣ ಮಿಷನ್‌ ಉದ್ದೇಶ.

ಮಣ್ಣಿನ ಮಡಕೆ ಕಾಂಪೋಸ್ಟ್‌ ಹೇಗೆ ?


ಮಣ್ಣಿನ ಮೂರು ಮಡಕೆಗಳನ್ನು ಕೊಡಲಾಗುತ್ತದೆ. ಅದರ ಕೆಳ ಭಾಗದ ಮಡಕೆಯ ಮೇಲೆ ಎರಡು ಮಡಕೆಗಳನ್ನು ಇಡಲಾಗುತ್ತದೆ. ಮೇಲಿನ ಎರಡು ಮಡಕೆಯ ಕೆಳಭಾಗದಲ್ಲೂ ಪೇಪರ್‌ ಇಟ್ಟು ಮುಚ್ಚಬೇಕು. ಮೇಲಿನ ಮಡಕೆಯಲ್ಲಿ ನೀರು ರಹಿತ ಹಸಿ ಕಸಗಳನ್ನು ಹಾಕಲಾಗುತ್ತದೆ. ಅದರ ಮೇಲೆ ತೆಂಗಿನ ನಾರು ಹಾಕಬಹುದು ಅಥವಾ ಮಡಕೆಯೊಂದಿಗೆ ನೀಡಿದ ಕಾಂಪೋಸ್ಟ್‌ ಪೌಡರ್‌ನ್ನು ಹಾಕಬಹುದು. ಮೇಲಿನ ಮಡಕೆ ತುಂಬಿದಾಗ ಅದನ್ನು ತೆಗೆದು ಕೊನೆಯ ಮಡಕೆಗೆ ಹಾಕಬಹುದು. ಮತ್ತೆ ಎರಡನೇ ಮಡಕೆ ಮೇಲೆ ಇಟ್ಟು ಅದಕ್ಕೆ ಹಸಿ ಕಸಗಳನ್ನು ಹಾಕಲಾಗುತ್ತದೆ. ಹೀಗೆ ಮನೆಯ ಹಸಿ ತ್ಯಾಜ್ಯದಿಂದಲೇ ಗೊಬ್ಬರ ತಯಾರಿ ಸುವ ವಿಧಾನವನ್ನು ರಾಮಕೃಷ್ಣ ಮಿಷನ್‌ ಮಾಡಲು ಆರಂಭಿಸಿದೆ.

ಗೊಬ್ಬರಕ್ಕೆ ಕೆಜಿಗೆ 25 ರೂ.
ಮನೆಯ ಹಸಿ ತ್ಯಾಜ್ಯಗಳನ್ನು ಗೊಬ್ಬರವಾಗಿಸುವ ಮಿಷನ್‌ ನ ನೂತನ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಕೆಲವು ಮನೆಗಳಲ್ಲಿ ಇದರ ಪ್ರಯೋಗ ನಡೆಯುತ್ತಿದೆ. ಮೈಸೂರಿನಿಂದ ರಖಂ ದರದಲ್ಲಿ 1,000 ಮಡಕೆಗಳನ್ನು ಈಗಾಗಲೇ ಮಠ ತರಿಸಿಕೊಂಡಿದ್ದು, ಹಸಿ ತ್ಯಾಜ್ಯಗಳಿಂದ ಉಂಟಾಗುವ ಗೊಬ್ಬರವನ್ನು ಮನೆಯ ಗಾರ್ಡನ್‌ ಗೆ ಬಳಸಬಹುದು. ತ್ಯಾಜ್ಯಗಳಿಂದ ಉಂಟಾದ ಗೊಬ್ಬರಕ್ಕೆ ಕೆಜಿಗೆ 25 ರೂ. ಇದೆ. ಭವಿಷ್ಯದಲ್ಲಿ ಆ ಹಣ ಪಾವತಿಸಿ ಗೊಬ್ಬರ ಸಂಗ್ರಹಿಸಲು ಮಠ ಸಿದ್ಧವಿದೆ. ಈ ಯೋಜನೆಯನ್ನು ಪ್ರತಿ ಮನೆಗಳಲ್ಲೂ ಬಳಸುವುದರಿಂದ ಮಣ್ಣಿನ ಮಡಕೆ ಮಾಡುವವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಮಠದ ಏಕಗಮ್ಯಾನಂದ ಸ್ವಾಮೀಜಿ ತಿಳಿಸುತ್ತಾರೆ.

ಪಾಲಿಕೆ ವ್ಯಯಿಸುವ ಕೋಟಿ ರೂ. ಉಳಿತಾಯ
ಈಗ ಪಾಲಿಕೆ ಕಸ ವಿಲೇವಾರಿಗೆ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದ್ದು, ಮಣ್ಣಿನ ಮಡಕೆ ಕಾಂಪೋಸ್ಟ್‌ ವಿಧಾನವನ್ನು ನಗರದಲ್ಲಿ ಬಳಸಿದರೆ ಸ್ವಲ್ಪ ಹಣ ಉಳಿತಾಯ ಮಾಡಬಹುದು. ಒಣ ಕಸಗಳನ್ನು ಮರು ಬಳಕೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಅದರೊಂದಿಗೆ ಸ್ಯಾನಿಟರಿ ತ್ಯಾಜ್ಯದ ಕುರಿತಾಗಿಯೂ ಚಿಂತಿಸಲಾಗುತ್ತದೆ.
– ಏಕಗಮ್ಯಾನಂದ ಸ್ವಾಮೀಜಿ, ರಾಮಕೃಷ್ಣ ಮಠ, ಮಂಗಳೂರು

Advertisement

ಕಳೆದ ಮಾರ್ಚ್‌ನಿಂದ ಬಳಕೆ
ಕಳೆದ ಮಾರ್ಚ್‌ನಲ್ಲಿ ರಾಮಕೃಷ್ಣ ಮಠದಲ್ಲಿ ಆಯೋಜಿಸಿದ ಹಸಿ ತ್ಯಾಜ್ಯಗಳಿಂದ ಗೊಬ್ಬರದ ಕುರಿತಾದ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಮಡಕೆ ಖರೀದಿಸಿ ಬಳಸುತ್ತಿದ್ದೆ. ಇದರಿಂದ ತಯಾರಾದ ಗೊಬ್ಬರವನ್ನು ಮನೆಯ ಹೂವಿನ ಗಿಡಗಳಿಗೆ ಹಾಕುತ್ತಿದ್ದೇನೆ. ಪಾಲಿಕೆ ತ್ಯಾಜ್ಯದ ವಾಹನಗಳಿಗೆ ವಾರಕ್ಕೊಮ್ಮೆ ಒಣ ಕಸಗಳನ್ನು ಹಾಕುತ್ತಿದ್ದೇನೆ.
– ವಿಜಯಲಕ್ಷ್ಮೀ, ಶಿಕ್ಷಕಿ, ಮಡಕೆ ಬಳಕೆದಾರರು

— ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next