Advertisement
ರೂಪಕವು ಎಂಟಿವಿ ಅವರ ಮುದ್ರಿತ ಧ್ವನಿಯ ಮಾತುಗಳಿಂದಲೇ ಆರಂಭವಾಗುತ್ತದೆ. ಮುಂದೆ ಅವರ ಮೊದಲ ಕೃತಿ “ನಾಲುಕೆಟ್ಟ್’ (ಬಿ.ಕೆ. ತಿಮ್ಮಪ್ಪ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ) ಇದರ ಮುಖ್ಯಪಾತ್ರ ಅಪ್ಪುಣ್ಣಿಯು ತನ್ನ ಬಾಲ್ಯಗೆಳತಿ ಅಮ್ಮಿಣಿಯ ಜತೆಗೆ ಆಡುತ್ತ ಮಾತನಾಡುವ ದೃಶ್ಯ. ಚೌಕಟ್ಟಿನ ಮನೆಯ ನೋಟ. ತನ್ನ ತಂದೆಯನ್ನು ಕೊಂದ ಸೈದಾಲಿಕುಟ್ಟಿಯ ಮೇಲೆ ಸೇಡು ತೀರಿಸದೇ ಬಿಡುವುದಿಲ್ಲ ಎಂಬ ಅಪ್ಪುಣ್ಣಿಯ ರೋಷ-ದ್ವೇಷಗಳ ಜತೆಗೆ ಮುಂದುವರಿಯುತ್ತದೆ. ಮುಂದೆ ಬರುತ್ತಾನೆ “ಇರುಳಿನ ಆತ್ಮ’ದ (ಕನ್ನಡಕ್ಕೆ: ಕೆ.ಕೆ. ನಾಯರ್) ಮಾನಸಿಕ ಅಸ್ವಸ್ಥನಂತೆ ವರ್ತಿಸುವ ವೇಲಾಯುಧನ್. ಅವನನ್ನು ಹುಚ್ಚನೆಂದು ಕರೆದು ಅವನಿಗೆ ಹಿಗ್ಗಾಮುಗ್ಗಾ ಥಳಿಸುವ, ಅವನನ್ನು ಸಂಕೋಲೆಯಿಂದ ಬಂಧಿಸಿಡುವ ಅವನ ಮಾವನ ಅಮಾನವೀಯತೆ, ಅತ್ತೆಯ ಸುಂದರಿಯಾದ ಮಗಳು ತನ್ನನ್ನು ಪ್ರೀತಿಸುತ್ತಾಳೆಂದು ಭ್ರಮಿಸಿ ಅವಳಿಗಾಗಿ ಆಸೆ ಪಡುವ ವೇಲಾಯುಧನ್- ಮೊದಲಾದ ಮನಕದಡುವ ದೃಶ್ಯಗಳು. ಮುಂದೆ “ಕಾಲಂ’ ಕಾದಂಬರಿಯಲ್ಲಿ (ಅನು: ಬಿ.ಕೆ. ತಿಮ್ಮಪ್ಪ) ಕಾಲವು ತನ್ನ ಮೇಲೆ ಹೇರಿದ ಆಘಾತಗಳಿಂದ ಬದಿಗೆ ಸರಿದು ತಪ್ಪಿಸಿಕೊಂಡು ಎತ್ತರ ಕ್ಕೇರುವ ಪ್ರಯತ್ನದಲ್ಲಿ ತನ್ನನ್ನು ತಾನೇ ಕಳೆದುಕೊಂಡ ಸೇತು ಬದುಕಿನಲ್ಲಿ ಬಯಸಿದ್ದೊಂದನ್ನೂ ಪಡೆಯಲು ಸಾಧ್ಯವಾಗದೆ ಆ ನಿರಾಶೆಯು ಸಿಟ್ಟಾಗಿ, ದ್ವೇಷವಾಗಿ ಸದಾ ಹೊಗೆಯಾಡುತ್ತ ಇದ್ದ ಸ್ಥಿತಿಯಲ್ಲಿ ಆತ ಒಂದೊಮ್ಮೆ ಪ್ರೀತಿಸಿದ್ದ ಅವನ ಬಾಲ್ಯದ ಗೆಳತಿ ಸುಮಿತ್ರಾ ಅವನಿಗೆ ಹೇಳುವ ಮಾತುಗಳು; “ಸೇತೂ, ನೀನು ಯಾವಾಗಲೂ ಪ್ರೀತಿಸಿದ್ದು ಒಬ್ಬರನ್ನು ಮಾತ್ರ. ಅದು ಬೇರಾರೂ ಅಲ್ಲ, ಸ್ವತಃ ನೀನೇ.’ ಇದು ಸೇತುವಿನ ನೋವು-ನಿರಾಶೆಗಳ ಚಿತ್ರ. ಮುಂದೆ “ರಂಡಾಮೂಳಂ’ (ಕನ್ನಡ ರೂಪ: ಭೀಮಸೇನ, ಅನು.: ಸಿ.ರಾಘವನ್) ಕಾದಂಬರಿಯಲ್ಲಿ ಮಹಾಭಾರತದ ಭೀಮನ ಮಾನಸಿಕ ತೊಳಲಾಟದ ದೃಶ್ಯಗಳು. ಮುಂದೆ “ಮಂಜು’ ಕಾದಂಬರಿಯ (ಅನು: ಪಾರ್ವತಿ ಜಿ. ಐತಾಳ್) ನಾಯಕಿ ವಿಮಲಾ ಮಿಶ್ರ ಮತ್ತು ಅನಾಥ ಹುಡುಗ ಬುದ್ದೂ- ಇಬ್ಬರೂ ಕಾಯುವ ನಿರೀಕ್ಷೆಯ ಆತಂಕಭರಿತ ಕ್ಷಣಗಳ ಚಿತ್ರ. ಮುಂದೆ “ವಾರಾಣಸಿ’ ಕಾದಂಬರಿಯ (ಅನು: ಕೆ.ಕೆ. ನಾಯರ್) ರುದ್ರಭೂಮಿಯ ಹಿನ್ನೆಲೆಯಲ್ಲಿ ಸಂಶೋಧನೆಗೆಂದು ಬಂದ ಸುಧಾಕರ-ಸುಮಿತಾ ನಾಗಪಾಲರ ನಡುವೆ ಹುಟ್ಟಿಕೊಳ್ಳುವ ಆಕರ್ಷಣೆ ಮತ್ತು ಆ ಮೂಲಕ ಗಂಡು-ಹೆಣ್ಣುಗಳ ನಡುವಣ ಸಂಬಂಧ-ಸಂಘರ್ಷಗಳ ಸೂಕ್ಷ್ಮ ಚಿತ್ರಣ-ಹೀಗೆ ದೃಶ್ಯಸರಣಿ ಸಾಲಾಗಿ ಪ್ರಸ್ತುತಗೊಂಡಿತು.
Related Articles
Advertisement