ಮುಂಬೈ: ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ನಿಂದ ಅಂಬಾಟಿ ರಾಯುಡುವನ್ನು ಕೈಬಿಟ್ಟಿದ್ದು ಹಲವು ಚರ್ಚೆಗೆ ಕಾರಣವಾಗಿತ್ತು. ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಗೆ ರಾಯುಡು ಬದಲು ವಿಜಯ್ ಶಂಕರ್ ರನ್ನು ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಎಂಎಸ್ ಕೆ ಪ್ರಸಾದ್ ಕೊನೆಗೂ ಮಾತನಾಡಿದ್ದಾರೆ.
ಆಯ್ಕೆ ಸಮಿತಿ ಜವಾಬ್ದಾರಿಯಿಂದ ಈಗಷ್ಟೇ ಕೆಳಗಿಳಿಯುತ್ತಿರುವ ಎಂಎಸ್ ಕೆ ಪ್ರಸಾದ್, ವಿಶ್ವಕಪ್ ಗೆ ಅಂಬಾಟಿ ರಾಯುಡು ಸ್ಥಾನ ಪಡೆಯದೇ ಇದ್ದಿದ್ದು ನನಗೂ ಬೇಸರ ತರಿಸಿತ್ತು ಎಂದಿದ್ದಾರೆ.
2016ರ ಜಿಂಬಾಬ್ವೆ ಸರಣಿಯ ಬಳಿಕ ರಾಯುಡುವನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಸಮಿತಿ ಉತ್ಸುಕವಾಗಿತ್ತು. ಟೆಸ್ಟ್ ಮಾದರಿಯತ್ತ ಹೆಚ್ಚಿನ ಗಮನ ಹರಿಸಲು ನಾವು ಆತನಿಗೆ ಸೂಚಿಸಿದ್ದೇವು ಎಂದಿದ್ದಾರೆ.
ಐಪಿಎಲ್ ನಲ್ಲಿ ಆತನ ಪ್ರದರ್ಶನ ನೋಡಿ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಇದು ಕೆಲವರಿಗೆ ಸಹಿಷ್ಣುವಾಗಿರಲಿಲ್ಲ. ರಾಯುಡುವಿಗೆ ಫಿಟ್ನೆಸ್ ಗೆ ಹೆಚ್ಚಿನ ಗಮನ ನೀಡಲು ಹೇಳಿ ಎನ್ ಸಿಎ ನಲ್ಲಿ ತರಬೇತಿ ನೀಡಲಾಗಿತ್ತು. ಒಂದು ಮಟ್ಟಿಗೆ ಆತ ಸಫಲನಾಗಿದ್ದ ಎಂದಿದ್ದಾರೆ.
ಆದರೆ ದುರದೃಷ್ಟವೆಂಬಂತೆ ಅಂಬಾಟಿ ರಾಯುಡುವನ್ನು ವಿಶ್ವಕಪ್ ಗೆ ಆಯ್ಕೆ ಮಾಡಲಾಗಿಲ್ಲ. ಇದರ ಬಗ್ಗೆ ನನಗೂ ವಿಷಾದವಿದೆ ಎಂದು ಹೈದರಾಬಾದ್ ಮೂಲದವರಾದ ಎಂಎಸ್ ಕೆ ಪ್ರಸಾದ್ ಅಭಿಪ್ರಾಯಪಟ್ಟರು.
ಭಾರತದ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ರಾಯುಡು ನ್ಯೂಜಿಲ್ಯಾಂಡ್ ಸರಣಿ ಮತ್ತು ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ವಿಶ್ವಕಪ್ ತಂಡದಿಂದ ಕೈಬಿಡಲಾಗಿತ್ತು. ಇದಿರಂದ ಕೋಪಗೊಂಡಿದ್ದ ರಾಯುಡು ಕ್ರಿಕೆಟ್ ಜೀವನಕ್ಕೆ ರಾಜೀನಾಮೆ ನೀಡಿದ್ದರು. ನಂತರ ವಾಪಾಸ್ ಪಡೆದು ಐಪಿಎಲ್ ಆಡುವುದಾಗಿ ಹೇಳಿದ್ದಾರೆ.