ಸ್ಥೂಲಕಾಯದ ವ್ಯಕ್ತಿಗಳು ಸಮಾಜದಲ್ಲಿ ಪ್ರತಿದಿನ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದೆಷ್ಟೋ ಬಾರಿ ವರವಾಗಬೇಕಾದ ದೇಹವೇ ಸ್ಥೂಲ ಕಾಯದವರಿಗೆ ಶಾಪವಾಗಿ ಪರಿಣಮಿಸಿರುತ್ತದೆ. ಆದರೆ ಇಂಥ ಸ್ಥೂಲಕಾಯದವರು ಕೂಡ, ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವರವೆಂದು ಭಾವಿಸಿ ಕೆಲಸದ ಕಡೆಗೆ ಗಮನ ಕೊಟ್ಟರೆ ಅವರು ಕೂಡ ಸಮಾಜದಲ್ಲಿ ಗುರುತಿಸುವಂತೆ ಬೆಳೆಯಬಹುದು. ಇಂಥದ್ದೊಂದು ಸಂದೇಶವನ್ನು ಇಟ್ಟುಕೊಂಡು ಮನರಂಜನಾತ್ಮಕವಾಗಿ ಈ ವಾರ ತೆರೆಗೆ ಬರುತ್ತಿರುವ ಸಿನಿಮಾ “ಎಂಆರ್‌ಪಿ’.
ಅಂದಹಾಗೆ, ಈ ಸಿನಿಮಾದ ಹೆಸರು “ಎಂಆರ್‌ಪಿ’ ಅಂತ ಇಟ್ಟಿರುವುದಕ್ಕೂ ಕಾರಣವಿದೆ. ಸಿನಿಮಾದಲ್ಲಿ “ಎಂಆರ್‌ಪಿ’ ಅಂದರೆ, “ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್’ ಎಂಬುದು ಅದರ ವಿಸ್ತೃತ ರೂಪ ಎಂಬುದು ಚಿತ್ರತಂಡದ ವಿವರಣೆ. ಈ ಹಿಂದೆ “ನನ್ ಮಗಳೇ ಹೀರೋಯಿನ್’ ಚಿತ್ರವನ್ನು ನಿರ್ದೇಶಿಸಿದ್ದ ಬಾಹುಬಲಿ “ಎಂಆರ್‌ಪಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಸುಮಾರು ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ, ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ, ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾಫ್ಟ್ವೇರ್ ಇಂಜಿನಿಯರ್ ಆಗಿ ವಾಸ್ತವಕ್ಕೆ ಕನ್ನಡಿ ಹಿಡಿಯುವ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. “ಎಂಆರ್‌ಪಿ’ ಅಂದರೆ, ಎಲ್ಲರಿಗೂ ಬಾರ್ ನೆನಪಾಗುತ್ತೆ. ಆದರೆ ಇಲ್ಲಿ, “ಎಂಆರ್‌ಪಿ” ಅಂದರೆ ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್ ಎಂದರ್ಥ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ. ಅವರ ಬಾಡಿಗೆ ಅವರವರೇ ಜವಾಬ್ದಾರಿ ಆಗುತ್ತಾರೆ ವಿನಃ, ಬೇರೆ ಯಾರೂ ಆಗಲ್ಲ. ತಮ್ಮ ಬಾಡಿಯ ಜವಾಬ್ದಾರಿ ಏನೆಂಬುದು ಅವರಿಗಷ್ಟೇ ಗೊತ್ತಿರುತ್ತೆ. ಇಲ್ಲಿರುವ ಹೀರೋ ಕೂಡ ತುಂಬಾ ಜವಾಬ್ದಾರಿ ಇರುವ ವ್ಯಕ್ತಿ. ಅದು ಹೇಗೆ ಎಂಬುದನ್ನು ಕಾಮಿಡಿ ರೂಪದಲ್ಲಿ ತೋರಿಸಲಾಗಿದೆ ಎಂಬುದು ಚಿತ್ರತಂಡದ ಮಾತು.
ಇನ್ನು “ಎಂಆರ್‌ಪಿ’ ಚಿತ್ರವನ್ನು ನಿರ್ದೇಶಕ ಎಂ. ಡಿ ಶ್ರೀಧರ್, ಛಾಯಾಗ್ರಹಕ ಕೃಷ್ಣ ಕುಮಾರ್ (ಕೆ.ಕೆ), ಮೋಹನ್ ಕುಮಾರ್ ಹಾಗೂ ರಂಗಸ್ವಾಮಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹರ್ಷವರ್ಧನ ಸಂಗೀತ ಸಂಯೋಜಿಸುತ್ತಿದ್ದು, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಸಂಕಲನವಿದೆ. ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ “ಎಂಆರ್‌ಪಿ’ ಚಿತ್ರದಲ್ಲಿ ಹರಿ ಅವರಿಗೆ ಚೈತ್ರಾ ರೆಡ್ಡಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ವಿಜಯ್ ಚೆಂಡೂರ್, ಬಲ ರಾಜವಾಡಿ, ಸುಧಾ ಬೆಳವಾಡಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇಡೀ ಸಿನಿಮಾದಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಟ್ಟು, ಹ್ಯೂಮರಸ್ ಆಗಿ ಕಥೆಯನ್ನು ಹೇಳಲಾಗಿದೆ.
ಜಿ. ಎಸ್. ಕಾರ್ತಿಕ ಸುಧನ್