ಸಾಗರ: ಕಾವೇರಿ ನೀರು ಹಂಚಿಕೆ ಸಂಬಂಧ ರಾಜ್ಯದ ಸಂಸದರು ಯಾವ ರೀತಿ ಬದ್ಧತೆ ಪ್ರದರ್ಶನ ಮಾಡಿದ್ದಾರೆಂಬುದು ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿಗಳಿಗೆ ಗೊತ್ತಿದೆ. ನಾಲ್ಕು ಗೋಡೆ ನಡುವೆ ನಡೆದ ಸಭೆಯಲ್ಲಿ ರಾಜ್ಯದ ಸಂಸದರನ್ನು ಹೊಗಳಿ, ಮಾಧ್ಯಮದವರ ಎದುರು ತೆಗಳುವುದು ಎಷ್ಟು ಸರಿ ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಶ್ನಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವ ಶೇಖಾವತ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾವೇರಿ ಜಲವಿವಾದಕ್ಕೆ ಸಂಬಂಧಪಟ್ಟಂತೆ ಸಂಸದರು ತಮ್ಮ ಬದ್ಧತೆ ತೋರಿಸಿರುವ ಬಗ್ಗೆ ಇಬ್ಬರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ನೆನಪಿಸಿದರು.
ಐಎನ್‌ಡಿಐಎ ಒಕ್ಕೂಟದ ಸದಸ್ಯರಾಗಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರಾಜ್ಯಕ್ಕೆ ಬಂದಾಗ ಅವರನ್ನು ಮದುಮಗನಂತೆ ಸ್ವಾಗತಿಸಿ ಸನ್ಮಾನ ಮಾಡಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಅವರ ಮನವೊಲಿಸುವ ಕೆಲಸ ಮಾಡಬೇಕು. ಪ್ರಸ್ತುತ ರಾಜ್ಯದ ಮಳೆ ಸ್ಥಿತಿ, ಅಣೆಕಟ್ಟು ಖಾಲಿಯಾಗಿರುವುದು, ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಅವರ ಗಮನಕ್ಕೆ ತರಬೇಕಾಗಿತ್ತು ಎಂದು ಹೇಳಿದರು.
ಕಾವೇರಿ ಜಲಪ್ರಾಧಿಕಾರದ ಆದೇಶ ಬರುವ ಮೊದಲೇ ತಮಿಳುನಾಡಿಗೆ ನೀರು ಹರಿಸಿ ಈಗ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದು ಗೊತ್ತಿರುವ ಕಾಂಗ್ರೆಸ್‌ಗೆ ರಾಜ್ಯಕ್ಕಾಗಿ ತಮಿಳು ಮುಖ್ಯಮಂತ್ರಿಗಳ ಮನವೊಲಿಸುವುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಎಲ್ಲಿ ಸರ್ಕಾರ ಬಿದ್ದು ಹೋಗುತ್ತದೆಯೋ ಎನ್ನುವ ಭಯದಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಮೈತ್ರಿ ಫಲಿತಾಂಶ ಸಿಗಲಿದೆ: ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಶೇ.100 ಫಲಿತಾಂಶ ಕೊಡಲಿದೆ. ಮೈತ್ರಿ ಮೂಲಕ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ. ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದರು.
ಮೈತ್ರಿಯಿಂದ ಕೆಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರಿಗೆ ಇರುಸು ಮುರುಸು ಉಂಟಾಗಬಹುದು. ಆದರೆ ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಕೆಲವು ಸಂದರ್ಭದಲ್ಲಿ ತ್ಯಾಗ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.