Advertisement

ಗುತ್ತಿಗೆ ಕಂಪೆನಿ ಕಪ್ಪುಪಟ್ಟಿಗೆ: ಸಂಸದೆ ಶೋಭಾ ಸೂಚನೆ

03:25 AM Jul 03, 2018 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ವಿಳಂಬ ಮಾಡುತ್ತಿರುವ ನವಯುಗ ಗುತ್ತಿಗೆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ರಾ.ಹೆ. ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂಪೆನಿ ಕಾಮಗಾರಿ ಪೂರ್ಣಗೊಳಿಸದೆ ಗಡುವನ್ನು ವಿಸ್ತರಿಸುತ್ತಿದೆ. ಹಾಗಾಗಿ ಅಧಿಕಾರಿಗಳು ನವಯುಗ ಕಂಪೆನಿ ಪರವಾಗಿ ನಿಲ್ಲದೆ, ಅದನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಸಹಾಯಕ್ಕಾಗಿ ದಿಲ್ಲಿಗೆ  ಬರಬಹುದೆಂದು ಅವರು ತಿಳಿಸಿದರು.

Advertisement

ಆಧಾರ್‌ ಲಿಂಕ್‌ ಸಮಸ್ಯೆ
ಗ್ರಾ.ಪಂ.ಗಳಲ್ಲಿ ಭೀಮ್‌ ಆಧಾರ್‌ ಪೇ ತಂತ್ರಾಂಶ ಆಳವಡಿಸಿ ನಗದು ರಹಿತ ವ್ಯವಹಾರ ಪ್ರಾರಂಭಿಸಲು ಸಮಸ್ಯೆ ಎದುರಾಗಿದೆ. ಪಿಡಿಒ, ಗ್ರಾ.ಪಂ. ಅಧ್ಯಕ್ಷರ ಜಂಟಿ ಖಾತೆಗೆ ಆಧಾರ್‌ ಲಿಂಕ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು. ಇದಕ್ಕೆ ಜಿಲ್ಲಾ ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಪ್ರತಿಕ್ರಿಯಿಸಿ, 5,000 ಜನಸಂಖ್ಯೆಗಿಂತ ಮೇಲ್ಪಟ್ಟ ಗ್ರಾಮಗಳಲ್ಲಿರುವ ಬ್ಯಾಂಕಿನ ವ್ಯವಹಾರ ಪ್ರತಿನಿಧಿ (ಬಿಸಿನೆಸ್‌ ಕರೆಸ್ಪಾಂಡೆಂಟ್ಸ್‌) ಮೂಲಕ ಬ್ಯಾಂಕ್‌ ಖಾತೆ ತೆರೆದು ಅದರಿಂದ ತೆರಿಗೆ ಸಂಗ್ರಹಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ರೈಲ್ವೇ ಇಲಾಖೆ ಪ್ರಗತಿ ಕುರಿತಂತೆ, 11.33 ಕೋ.ರೂ. ವೆಚ್ಚದಲ್ಲಿ ಇನ್ನಂಜೆ ನೂತನ ರೈಲು ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, 2019ರ ಮಾರ್ಚ್‌ಗೆ ಮುಗಿಯಲಿದೆ. 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಕೃಷ್ಣ ಹೆಗಡೆ ತರಬೇತಿ ಕೇಂದ್ರದ ಕಾಮಗಾರಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ. 317 ಕೋ.ರೂ. ವೆಚ್ಚದಲ್ಲಿ ವೆರ್ಣ – ತೋಕೂರು ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಇಲಾಖೆಯ ಕಟ್ಟಡ ವಿಸ್ತರಣೆಗೆ 4 ಕೋ.ರೂ. ಅಗತ್ಯವಿದೆ ಎಂದು ಕೊಂಕಣ ರೈಲ್ವೇ ಅಧಿಕಾರಿಗಳು ತಿಳಿಸಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿದ್ದರು.

ಮಾತೃಪೂರ್ಣ: ಖಾತೆಗೆ ಹಣ ಜಮೆ ಮಾಡಿ
ಉಡುಪಿ:
ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಸಾಧನೆಯಾಗಿಲ್ಲ, ಆದುದರಿಂದ ಯೋಜನೆಯ ಫ‌ಲಾನುಭವಿಗಳಿಗೆ ಊಟದ ಬದಲು ಅವರ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು ನಿಗದಿತ ಮೊತ್ತ ಜಮೆ ಮಾಡುವ ಬಗ್ಗೆ ಸರಕಾರಕ್ಕೆ ವರದಿ ನೀಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆ ಜಿಲ್ಲೆಯಲ್ಲಿ ಶೇ. 50ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು, ಕರಾವಳಿ, ಮಲೆನಾಡು ಭಾಗದಲ್ಲಿ ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ತೆರಳಿ ಊಟ ಮಾಡುವುದು ಅಸಾಧ್ಯ. ಕೇಂದ್ರದ ಮಾತೃ ವಂದನಾ ಯೋಜನೆಯಂತೆ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ಹಣ ಜಮೆ ಮಾಡುವುದು ಸೂಕ್ತ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next