ಹೊಸದಿಲ್ಲಿ: NEET ಪೇಪರ್ ಸೋರಿಕೆ ಆರೋಪದ ಮೇಲೆ ರಾಜಕೀಯ ಗದ್ದಲದ ವೇಳೆ, ಬಿಹಾರದ ಸಂಸದ ಪಪ್ಪು ಯಾದವ್ ಅವರು ಮಂಗಳವಾರ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವಾಗ “#Re-NEET” ಎಂದು ಬರೆದಿರುವ ಟೀ ಶರ್ಟ್ ಧರಿಸಿದ್ದರು.
ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ಯಲ್ಲಿನ ಅಕ್ರಮಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI) ವಹಿಸಿಕೊಂಡಿರುವುದನ್ನು ಬಿಹಾರದ ಪೂರ್ಣೆಯಾದ ಪಕ್ಷೇತರ ಸಂಸದ ಯಾದವ್ ಒಂದು ದಿನದ ಹಿಂದೆ ಪ್ರಶ್ನಿಸಿದ್ದರು.
“ಬಿಹಾರ ಪೊಲೀಸ್ ಆರ್ಥಿಕ ಅಪರಾಧಗಳ ಘಟಕವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಬಯಸಿದ್ದರಿಂದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಅದಕ್ಕಾಗಿಯೇ ಅವರು ಶೀಘ್ರವಾಗಿ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ನಾವು ಸಂಸತ್ತಿನಲ್ಲಿ ಜಂಟಿ ಸಂಸದೀಯ ಸಮಿತಿ (JPC) ತನಿಖೆ ನಡೆಸುವಂತೆ ವಿಷಯವನ್ನು ಪ್ರಸ್ತಾಪಿಸುತ್ತೇವೆ” ಎಂದು ಯಾದವ್ ಹೇಳಿದ್ದಾರೆ.
ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸುವ ವೇಳೆ ಹಲವು ಘೋಷಣೆಗಳನ್ನು ಕೂಗಿದರು. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಇಬ್ಬರ ನಡುವೆ ಸ್ವಲ್ಪ ವಾಗ್ವಾದ ನಡೆಯಿತು.
ತಡೆಯಲು ಮುಂದಾದ ವೇಳೆ ಪಪ್ಪು ಯಾದವ್ ಅವರು ಆಡಳಿತ ಪಕ್ಷದ ಸಂಸದರತ್ತ ನೋಡಿ, ‘ನಾನು 6 ಬಾರಿ ಸಂಸದ, ಅದರಲ್ಲಿ ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದೇನೆ, ನಿಮ್ಮಂತೆ ಯಾರ ಕೃಪಾಕಟಾಕ್ಷದಿಂದ ಬಂದಿಲ್ಲ. ನೀವು ನನಗೆ ಕಲಿಸುತ್ತೀರಾ ?” ಎಂದು ಕಿಡಿಯಾದರು.