ಬರ್ವಾನಿ: ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸರಕಾರಿ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಯಾತ್ರೆಯಲ್ಲಿ ಭಾಗವಹಿಸಿದ ಮರುದಿನ ನವೆಂಬರ್ 25 ರಂದು ರಾಜ್ಯದ ಬುಡಕಟ್ಟು ವ್ಯವಹಾರಗಳ ಇಲಾಖೆಯ ಅಡಿಯಲ್ಲಿರುವ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಶ್ ಕನ್ನೋಜೆ ಅವರನ್ನು ಅಮಾನತುಗೊಳಿಸಲಾಗಿತ್ತು. ಅವರ ಅಮಾನತು ಆದೇಶವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.
“ಸೇವಾ ನೀತಿ ನಿಯಮಗಳ ಉಲ್ಲಂಘನೆ ಮತ್ತು ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕಾಗಿ ಕನ್ನೋಜೆ ಅವರನ್ನು ಅಮಾನತುಗೊಳಿಸಲಾಗಿದೆ. ಅವರು ಪ್ರಮುಖ ಕೆಲಸವನ್ನು ಉಲ್ಲೇಖಿಸಿ ರಜೆ ಕೋರಿದ್ದರು, ಆದರೆ ಅವರು ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತ ಎನ್ಎಸ್ ರಘುವಂಶಿ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಕೆ. ಮಿಶ್ರಾ ಟ್ವೀಟ್‌ನಲ್ಲಿ, ಶಿವರಾಜ್ ಸಿಂಗ್ ಚೌಹಾಣ್ ಸರಕಾರವು ಆರ್‌ಎಸ್‌ಎಸ್ ಶಾಖೆಗಳಲ್ಲಿ ಭಾಗವಹಿಸಲು ನೌಕರರಿಗೆ ಅವಕಾಶ ನೀಡಿದೆ, ಆದರೆ ರಾಹುಲ್ ಗಾಂಧಿಯವರಿಗೆ ರಾಜಕೀಯೇತರ ಮೆರವಣಿಗೆಯಲ್ಲಿ ‘ತಿರ್-ಕಾಮನ್’ (ಬಿಲ್ಲು ಮತ್ತು ಬಾಣ) ಉಡುಗೊರೆ ನೀಡಿದ ಬುಡಕಟ್ಟು ಜನಾಂಗದ ರಾಜೇಶ್ ಕನ್ನೋಜೆ ಅವರನ್ನು ಅಮಾನತು ಮಾಡಿದೆ ಎಂದು ಆಕ್ರೋಶ ಹೊರ ಹಾಕಿದೆ.
ನ.23ರಂದು ಮಧ್ಯಪ್ರದೇಶಕ್ಕೆ ಆಗಮಿಸಿರುವ ಯಾತ್ರೆ ಭಾನುವಾರ ರಾಜಸ್ಥಾನ ಪ್ರವೇಶಿಸಲಿದೆ.