ಮಂಗಳೂರು: ಅಡಿಕೆ, ತೆಂಗು ಸಹಿತ ಹೆಚ್ಚಿನ ತೋಟಗಾರಿಕೆ ಉತ್ಪನ್ನ ಬೆಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಾಧುನಿಕ ಆಹಾರ ಸಂಸ್ಕರಣೆ ತಂತ್ರಜ್ಞಾನ ಅಳವಡಿಕೆಗೆ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯ ಮಶೀಲತೆ ಮತ್ತು ನಿರ್ವಹಣೆ (ಎನ್‌ಐಎಫ್‌ಟಿಇಎಂ)ಸಂಸ್ಥೆಯ ಕೇಂದ್ರ ಸ್ಥಾಪಿಸುವಂತೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಕೇಂದ್ರ ಆಹಾರ ಸಂಸ್ಕರಣೆ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಅವರಲ್ಲಿ ಮನವಿ ಮಾಡಿದ್ದಾರೆ.
ಸಚಿವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ದ ಸಂಸದರು, ದಕ್ಷಿಣ ಕನ್ನಡದಲ್ಲಿ ಆಹಾರ ಸಂಸ್ಕರಣೆ ಉದ್ಯಮ ಸ್ಥಾಪನೆಗೆ ಪೂರಕ ಅವಕಾಶ ಹಾಗೂ ಇಕೋ-ಸಿಸ್ಟಮ್ ಅಳವಡಿಕೆ ಬಗ್ಗೆ ಚರ್ಚಿಸಿದ್ದಾರೆ.
ಜಿಲ್ಲೆಯಲ್ಲಿ ಎನ್‌ಐಎಫ್‌ಟಿಇಎಂ ಸಂಯೋಜಿತ ಸೆಂಟರ್ ಸ್ಥಾಪಿಸುವುದರಿಂದ ಆಹಾರ ಸಂಸ್ಕರಣೆ ತಂತ್ರಜ್ಞಾನಗಳ ಬಗ್ಗೆ ಇಲ್ಲಿನ ರೈತರು ಹಾಗೂ ಉದ್ದಿಮೆದಾರರಿಗೆ ಮಾಹಿತಿ, ಕೌಶಲ ಅಭಿವೃದ್ಧಿಗೆ ಅನುಕೂಲ ವಾಗಲಿದೆ ಎಂದಿದ್ದಾರೆ.
ಸ್ಥಳೀಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಗಳಿಗೆ ಅನುಕೂಲವಾಗುವಂತೆ ಕೃಷಿ ಸಂಸ್ಕರಣೆ ಇನ್‌ಕುಬೇಷನ್ ಸೆಂಟರ್ ಸ್ಥಾಪಿಸಬೇಕು. ಇದರಿಂದ ಆಗ್ರೋ ಉದ್ಯಮಶೀಲತೆ ಬೆಳೆಸುವ ಜತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬಹುದು. ಜತೆಗೆ, ಕೋಲ್ಡ್ ಚೈನ್ ಲಾಜಿಸ್ಟಿಕ್ಸ್, ಕೌಶಲಾಧಾರಿತ ಕಾರ್ಮಿಕರ ಕೊರತೆ ಸಹಿತ ಆಹಾರ ಸಂಸ್ಕರಣೆ ಉದ್ಯಮ ವಲಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಸಂಸದರು ಮನವಿಯಲ್ಲಿ ಕೋರಿಕೊಂಡಿದ್ದಾರೆ.