ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ಈಗಿನ ಟ್ರೆಂಡ್ ಪ್ರಕಾರ 136 ಕ್ಷೇತ್ರಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸುವ ಮೂಲಕ ಸತತ 4ನೇ ಬಾರಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.
ಇದನ್ನೂ ಓದಿ:ಕುದುರೆ ವ್ಯಾಪಾರ ಭೀತಿ: ಅಭ್ಯರ್ಥಿಗಳ ರಕ್ಷಣೆಗೆ ತೆಲಂಗಾಣಕ್ಕೆ ತೆರಳಿದ ಟ್ರಬಲ್ ಶೂಟರ್ ಡಿಕೆಶಿ
230 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 93 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 2003ರಿಂದ ಅಧಿಕಾರದಲ್ಲಿದ್ದು, 2005ರಿಂದ 2008ರವರೆಗೆ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದರು. ನಂತರ 2008 ರಿಂದ 2018ರವರೆಗೂ ಸಿಎಂ ಆಗಿದ್ದರು.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದು, ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದರು. ಆದರೆ ಕಾಂಗ್ರೆಸ್ 2018ರ ಡಿಸೆಂಬರ್ 17ರಿಂದ 2020ರ ಮಾರ್ಚ್ 23ರವರೆಗೆ ಮಾತ್ರ ಅಧಿಕಾರದಲ್ಲಿತ್ತು. ಅದಕ್ಕೆ ಕಾರಣ ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯ ಎದ್ದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಜತೆ ಕೈಜೋಡಿಸುವ ಮೂಲಕ ಶಿವರಾಜ್ ಸಿಂಗ್ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವಂತಾಗಿತ್ತು.
2023ರ ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಶಿವರಾಜ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ಅಭಿವೃದ್ಧಿ ಯೋಜನೆಗಳಿಂದಾಗಿ ಮಧ್ಯಪ್ರದೇಶದ ಮತದಾರರು ಬಿಜೆಪಿಯನ್ನು ಮತ್ತೊಮ್ಮೆ ಆಯ್ಕೆ ಮಾಡಲಿದ್ದಾರೆ ಎಂದು ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತಗಟ್ಟೆ ಸಮೀಕ್ಷೆಯಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲಿದೆ ಎಂಬುದಾಗಿ ಹೇಳಿಲ್ಲವಾಗಿತ್ತು. ಇದೀಗ ಮತಗಟ್ಟೆ ಸಮೀಕ್ಷೆಯ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರುವತ್ತ ದಾಪುಗಾಲಿಟ್ಟಿದ್ದು, ಏತನ್ಮಧ್ಯೆ ಆಡಳಿತ ಚುಕ್ಕಾಣಿ ಹಿಡಿಯುವ ಕಾಂಗ್ರೆಸ್ ಕನಸು ಭಗ್ನಗೊಂಡಂತಾಗಿದೆ.