ಬೆಂಗಳೂರು: ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನದ ಪ್ರಬಲ ಅಕಾಂಕ್ಷಿಯಾಗಿದ್ದ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು ತಮಗೆ ಸಚಿವ ಸ್ಥಾನ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ರಾಜ್ಯ ನಾಯಕರು ಸ್ಪಷ್ಟವಾಗಿ ಮತ್ತು ಒಟ್ಟಾಗಿ ಹೇಳಿದ್ದರೆ ಉತ್ತರ ಕರ್ನಾಟಕ ಭಾಗದ ಒಬ್ಬರು ಕೇಂದ್ರ ಸಂಪುಟದಲ್ಲಿ ಸಚಿವರಾಗಿರುತ್ತಿದ್ದರು. ಆದರೆ, ಅವರು ಆ ಪ್ರಯತ್ನ ಮಾಡಲೇ ಇಲ್ಲ. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ನಾನು ಸಚಿವನಾಗದೇ ಇರುವುದು ನನ್ನ ದುರಾದೃಷ್ಟ ಎಂದಷ್ಟೇ ಹೇಳುತ್ತೇನೆ ಸುರೇಶ್ ಅಂಗಡಿ ಹೇಳಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ವೀರಶೈವ-ಲಿಂಗಾಯತ ವಿವಾದ ಉಂಟಾಗಿದ್ದು, ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರಗೊಳ್ಳುತ್ತಿದೆ. ಇನ್ನೊಂದೆಡೆ ವೀರಶೈವ-ಲಿಂಗಾಯತ ಒಟ್ಟಾಗಿ ಇರಬೇಕು ಎಂಬ ಹೋರಾಟವೂ ಶುರುವಾಗಿದೆ. ಈ ಮಧ್ಯೆ ರಾಜ್ಯದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ಪರ ಇರುವುದರಿಂದ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಕೇಂದ್ರ ಸಂಪುಟ ಪುನಾರಚನೆ ವೇಳೆ ಈ ಸಮುದಾಯದ ಒಬ್ಬರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯದಿಂದ ಬೆಳಗಾವಿ ಸಂಸದ ಸುರೇಶ್ ಅಂಗಡಿ ಮತ್ತು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರ ಅವರ ಹೆಸರುಗಳು ಕೇಳಿಬರುತ್ತಿತ್ತಾದರೂ ಸುರೇಶ್ ಅಂಗಡಿ ಹೆಸರು ಮುಂಚೂಣಿಯಲ್ಲಿತ್ತು. ಅದೇ ರೀತಿ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಬಹುದು ಎಂಬ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರ ಹೆಸರೂ ಕೇಳಿಬಂದಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಈ ಮೂರೂ ಹೆಸರುಗಳನ್ನು ಪರಿಗಣಿಸದೆ ಅನಂತಕಮಾರ್ ಹೆಗಡೆ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.
ತಮಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೈತಪ್ಪಿದ ಕುರಿತಂತೆ “ಉದಯವಾಣಿ’ಯೊಂದಿಗೆ ಮಾತನಾಡಿದ ಸುರೇಶ್ ಅಂಗಡಿ, ಅದು ನನ್ನ ದುರಾದೃಷ್ಟ ಅಷ್ಟೆ ಎಂದು ಹೇಳಿದ್ದಾರೆ. ಜತೆಗೆ ಬಿಜೆಪಿಯ ರಾಜ್ಯ ನಾಯಕರು ಪ್ರಯತ್ನಿಸಿದ್ದರೆ ಉತ್ತರ ಕರ್ನಾಟಕದ ಒಬ್ಬರಿಗೆ ಸಚಿವ ಸ್ಥಾನ ಸಿಗುತ್ತಿತ್ತು. ಆದರೆ, ಅವರು ಸರಿಯಾಗಿ ಪ್ರಯತ್ನಿಸಲೇ ಇಲ್ಲ ಎಂದು ತಿಳಿಸಿದರು.
ಅನಂತ್‌ಕುಮಾರ್ ಹೆಗಡೆ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ. ಆದರೆ, ಪಕ್ಷದ ರಾಜ್ಯ ನಾಯಕರು ಒಟ್ಟಾಗಿ ಪ್ರಯತ್ನ ಮಾಡಿದ್ದರೆ ಉತ್ತರ ಕರ್ನಾಟಕ ಭಾಗಕ್ಕೂ ಒಂದು ಸಚಿವ ಸ್ಥಾನ ಸಿಗುತ್ತಿತ್ತು. ಆ ಭಾಗದಿಂದ ಸಾಕಷ್ಟು ಸಂಸದರಿದ್ದಾರೆ. ಅವರಲ್ಲಿ ಯಾರು ಅರ್ಹರೋ ಅವರನ್ನು ಕೇಂದ್ರ ಸಂಪುಟಕ್ಕೆ ಪರಿಗಣಿಸುತ್ತಿದ್ದರು. ಆದರೆ, ರಾಜ್ಯ ನಾಯಕರು ಆ ನಿಟ್ಟಿನಲ್ಲಿ ಗಟ್ಟಿ ದನಿಯಲ್ಲಿ ಒಗ್ಗಟ್ಟಿನಿಂದ ವರಿಷ್ಠರ ಗಮನಕ್ಕೆ ತರುವುದಕ್ಕೆ ಪ್ರಯತ್ನಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ, ಧರ್ಮಗಳನ್ನು ಬದಿಗಿಟ್ಟು ನನ್ನ ಕ್ಷೇತ್ರದ ಮತದಾರರು ಮೂರು ಬಾರಿ ನನ್ನನ್ನು ಸಂಸತ್ತಿಗೆ ಆರಿಸಿ ಕಳುಹಿಸಿದ್ದಾರೆ. ಅದರಲ್ಲೂ ಶೇ. 50ರಷ್ಟು ಮರಾಠಿ ಭಾಷಿಕರಿರುವ ಪ್ರದೇಶದಿಂದ ನಾನು ಆಯ್ಕೆಯಾಗಿದ್ದೇನೆ ಎಂದೂ ಅವರು ಹೇಳಿದರು.