ಬೆಂಗಳೂರು: ಲಾಕ್‌ಡೌನ್ ನಂತರ ಹೊಸ ಚಿತ್ರವಾಗಿ ಚಿತ್ರಮಂದಿರದಲ್ಲಿ ತೆರೆಕಂಡ “ಆಕ್ಟ್ 1978′ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಎಂಟು ತಿಂಗಳ ನಂತರ ಹೊಸ ಚಿತ್ರವೊಂದು ಚಿತ್ರಮಂದಿರದಲ್ಲಿ ತೆರೆಕಂಡಿರುವುದರಿಂದ ಶುಕ್ರವಾರ ಸಿನಿಮಾ ಪ್ರೇಮಿಗಳು ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಂಡು ಖುಷಿಪಟ್ಟರು. ಆ ಸಂಭ್ರಮ ಸೋಶಿಯಲ್ ಮೀಡಿಯಾ, ವಾಟ್ ಆ್ಯಪ್‌ಗಳಲ್ಲೂ ಕಾಣಿಸಿತ್ತು. ಅನೇಕರು ತಮ್ಮ ಟಿಕೆಟ್ ನೊಂದಿಗೆ ಹಾಗೂ ಟೈಟಲ್ ಕಾರ್ಡ್‌ನ ಫೋಟೋವನ್ನು ಶೇರ್‌ಮಾಡುವ ಜೊತೆಗೆ ಸಿನಿಮಾದ ಒನ್‌ಲೈನ್ ವಿಮರ್ಶೆ ಮಾಡಿ ಸಂಭ್ರಮಿಸಿದ್ದು ಕಂಡು ಬಂತು.
100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ: “ಆಕ್ಟ್ 1978′ ಚಿತ್ರವೂ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಿದೆ.60 ಸಿಂಗಲ್ ಸ್ಕ್ರೀನ್ ಹಾಗೂ 40 ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶ ನವಾಗುತ್ತಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶ ಕಾಣುತ್ತಿದೆ. ಶುಕ್ರವಾರ ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಬೆಳಗಿನ ಪ್ರದರ್ಶನ ಹೌಸ್‌ಫುಲ್ ಆಗುವ ಮೂಲಕ ಚಿತ್ರ ಹೊಸ ಭರವಸೆ ಮೂಡಿಸಿತು. ಫ್ಯಾಮಿಲಿ ಆಡಿಯನ್ಸ್ ಕೂಡಾ ಸಿನಿಮಾದತ್ತ ಮುಖ ಮಾಡಿ, ಸಿನಿಮಾವನ್ನು ಕಣ್ತುಂಬಿಕೊಂಡರು. ಚಿತ್ರ ಪ್ರದರ್ಶನವಾಗುತ್ತಿರುವ ಎಲ್ಲ ಚಿತ್ರಮಂದಿರ ಗಳಲ್ಲೂಶೇ 30 ರಿಂದ 35 ಭಾಗದಷ್ಟು ಪ್ರೇಕ್ಷಕರು ತುಂಬಿದ್ದು ಸಿನಿಮಾ ಮಂದಿಯ ಭರವಸೆ ಹೆಚ್ಚಿಸಿತು.
ಇದನ್ನೂ ಓದಿ : Act 1978 : ಹೋರಾಟದ ಹಾದಿಯಲ್ಲಿ ಕಣ್ಣೀರ ಕಹಾನಿ
ಪ್ರೀಮಿಯರ್ ಶೋಗೆ ಜನವೋ ಜನ: ಗುರುವಾರವೀರೇಶ್ ಚಿತ್ರಮಂದಿರದಲ್ಲಿ ನಡೆದ ಚಿತ್ರದ ಪ್ರೀಮಿಯರ್ ಶೋಗೆ ಸಿನಿಮಾ ಪ್ರೇಮಿಗಳು ಆಗಮಿಸಿ, ಬಿಡುಗಡೆಯ ಒಂದು ದಿನ ಮುಂಚೆನೇ ಸಿನಿಮಾ ಕಣ್ತುಂಬಿಕೊಂಡರು. ಎಂಟು ತಿಂಗಳ ನಂತರ ತೆರೆ ಕಾಣುತ್ತಿರುವ ಚಿತ್ರವಾದ್ದರಿಂದ ಇಡೀ ಚಿತ್ರ ಮಂದಿರವನ್ನು ಕಲರ್‌ಫುಲ್ ಆಗಿ ಅಲಂಕರಿಸಲಾಗಿತ್ತು. ಇದು ಸಿನಿಮಾ ಪ್ರೇಮಿಗಳ ಉತ್ಸಾಹವನ್ನು ಹೆಚ್ಚಿಸಿತು. ಇನ್ನು, ಚಿತ್ರಕ್ಕೆ ಕನ್ನಡ ಚಿತ್ರರಂಗದ ನಟ, ನಟಿಯರು ಕೂಡಾ ಶುಭ ಕೋರುವ ಮೂಲಕ ಬೆಂಬಲಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಸುದೀಪ್ ಸಿನಿಮಾದಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಉಳಿದಂತೆ ರಕ್ಷಿತ್ ಶೆಟ್ಟಿ, ಶಿವರಾಜ್‌ಕುಮಾರ್, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಪವನ್ ಒಡೆಯರ್ ಸೇರಿದಂತೆ ಅನೇಕರು ಚಿತ್ರಕ್ಕೆ ಶುಭಕೋರಿದ್ದಾರೆ. ನಟ ದುನಿಯಾ ವಿಜಯ್ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಮುಂದಾಗಿದ್ದಾರೆ.
ಚಿತ್ರವನ್ನು ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿಧಾನವಾಗಿ ಪ್ರೇಕ್ಷಕರು ಕೂಡಾ ಚಿತ್ರಮಂದಿರದತ್ತ ಬರುತ್ತಿದ್ದಾರೆ. ಮುಂದೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.
– ದೇವರಾಜ್ ಆರ್, ನಿರ್ಮಾಪಕ, ಆಕ್ಟ್ 1978
ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ವೀಕೆಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ನಿರೀಕ್ಷಿಸುತ್ತಿದ್ದೇವೆ.
– ಕಾರ್ತಿಕ್ ಗೌಡ, ಕೆಆರ್‌ಜಿ ಸ್ಟುಡಿಯೋ