Advertisement

ಚಿತ್ರಮಂದಿರಗಳ ಪೂರ್ಣ ಪ್ರವೇಶಕ್ಕೆ ಇದು ಸಕಾಲ

10:55 PM Sep 13, 2021 | Team Udayavani |

ಶಾಲೆ ಆರಂಭವಾಗಿದೆ, ಬಸ್ಸುಗಳಲ್ಲಿ ಜನ ಹೌಸ್‌ಫ‌ುಲ್‌ ಪ್ರಯಾಣ ಮಾಡುತ್ತಿದ್ದಾರೆ. ಮಾರ್ಕೆಟ್‌, ರಸ್ತೆ, ಬೀದಿ ಎಲ್ಲಿ ನೋಡಿದರೂ ಜನ ತುಂಬಿ ತುಳುಕುತ್ತಿದ್ದಾರೆ. ಆದರೆ, ಚಿತ್ರಮಂದಿರಗಳು ಮಾತ್ರ ಖಾಲಿ ಇವೆ. ಇದಕ್ಕೆ ಕಾರಣ ಸರಕಾರ ಇನ್ನೂ ಚಿತ್ರಮಂದಿರಗಳಿಗೆ ಪೂರ್ಣ ಪ್ರವೇಶಾತಿಗೆ ಅನುಮತಿ ನೀಡದಿರುವುದು. ಶೀಘ್ರದಲ್ಲಿ ಸರಕಾರ ಪೂರ್ಣ ಪ್ರವೇಶಾತಿಗೆ ಅನುಮತಿ ನೀಡದಿದ್ದಲ್ಲಿ, ಕನ್ನಡ ಚಿತ್ರರಂಗ ಮತ್ತೆ ಸಂಕಷ್ಟಕ್ಕೆ ಒಳಗಾಗಲಿದೆ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕರೂ ಕೊನೆಯ ಹಂತದ ಚಿತ್ರೀಕರಣದಲ್ಲಿರುವ ಸಿನೆಮಾಗಳ ನಿರ್ಮಾಪಕರು ಚಿತ್ರೀಕರಣ ಮುಂದುವರೆಸಲು ಆಸಕ್ತಿ ತೋರುತ್ತಿಲ್ಲ. ಇದರ ನೇರ ಪರಿಣಾಮ ಸಿನೆಮಾ ಕಾರ್ಮಿಕರಿಂದ ಹಿಡಿದು ಕಲಾವಿದರು, ತಂತ್ರಜ್ಞರು, ಪೋಸ್ಟರ್‌ ಅಂಟಿಸುವ ವರ್ಗದವರೆಗೂ ತಟ್ಟುತ್ತದೆ. ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನೆಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಸ್ಟಾರ್‌ ಸಿನೆಮಾಗಳ ದೊಡ್ಡ ಪಟ್ಟಿಯೇ ಇದೆ. ಆದರೆ ಅವೆಲ್ಲವೂ ಚಿತ್ರಮಂದಿರಗಳ ಪೂರ್ಣ ಪ್ರಮಾಣದ ಪ್ರವೇಶಾತಿಗೆ ಕಾಯುತ್ತಿವೆ.

Advertisement

ಈಗಾಗಲೇ ಸರಕಾರ ಶೇ.50 ಸೀಟು ಭರ್ತಿಯೊಂದಿಗೆ ಪ್ರದರ್ಶನಕ್ಕೆ ಅನುಮತಿ ಕೊಟ್ಟಿದೆ. ಆದರೆ ಇದು ಚಿತ್ರರಂಗಕ್ಕೆ ಪೂರಕವಾಗಿಲ್ಲ. ಈ ನಿಟ್ಟಿನಲ್ಲಿ ಸರಕಾರ ಚಿತ್ರರಂಗದ ಬೆಂಬಲಕ್ಕೆ ನಿಲ್ಲಬೇಕಿದೆ. ಸದ್ಯ ಬಹುತೇಕ ಬೇರೆ ಕ್ಷೇತ್ರಗಳಿಗೆ ಪೂರ್ಣ ಪ್ರಮಾಣದ ಅನುಮತಿ ಸಿಕ್ಕಿದೆ. ಆದರೆ ಸಿನೆಮಾ ಮಂದಿ ಮಾತ್ರ ಹೌಸ್‌ಫ‌ುಲ್‌ ಪ್ರದರ್ಶನದ ಕನಸಿನಲ್ಲೇ ದಿನ ದೂಡುವಂತಾಗಿದೆ. ಇದು ಸಿನೆಮಾ ಮಂದಿಯ ಬೇಸರಕ್ಕೂ ಕಾರಣವಾಗಿದೆ. ಹೀಗಾದರೆ ಕಳೆದ ಒಂದೂವರೆ ವರ್ಷದಿಂದ ದೊಡ್ಡ ಮಟ್ಟದ ನಷ್ಟ ಅನುಭವಿಸಿಕೊಂಡು ಬಂದಿರುವ ಕನ್ನಡ ಚಿತ್ರರಂಗದ  ಚೇತರಿಸಿಕೊಳ್ಳೋದು ಕಷ್ಟ.  ಸಿನೆಮಾ ಬಿಡುಗಡೆಗೆ ಪೂರ್ಣ ಪ್ರಮಾಣದಲ್ಲಿ ಅನುಮತಿ ಸಿಗದೇ ಇರುವುದು ನಿರ್ಮಾಪಕ, ನಿರ್ದೇಶಕರಿಗೆ ಎಷ್ಟು ತೊಂದರೆಯೋ ಅದಕ್ಕಿಂತ ಹೆಚ್ಚಿನ ಹೊಡೆತ ಚಿತ್ರಮಂದಿರಗಳ ಮೇಲೂ ಬಿದ್ದಿದೆ. ಸದ್ಯ ಶೇ.50 ಪ್ರವೇಶಾತಿಯಲ್ಲಿ ಸಿನೆಮಾಗಳ ಪ್ರದರ್ಶನಕ್ಕೆ ಅನುಮತಿ ಸಿಕ್ಕಿದ್ದರೂ, ಇಲ್ಲಿಯವರೆಗೆ ಕೇವಲ ನಾಲ್ಕೇ ನಾಲ್ಕು ಹೊಸ ಸಿನೆಮಾಗಳು ಬಿಡುಗಡೆಯಾಗಿವೆ. ಅದೇ ಕಾರಣದಿಂದ ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ ಒಂದು ರೀತಿಯ ಅಘೋಷಿತ ಲಾಕ್‌ಡೌನ್‌ ಇನ್ನೂ ಮುಂದುವರಿದಂತಿದೆ. ಸಿನೆಮಾಗಳ ಬಿಡುಗಡೆಯಿಲ್ಲದೆ ರಾಜ್ಯದ ಎಲ್ಲ ಥಿಯೇಟರ್‌ಗಳು ಬಿಕೋ ಎನ್ನುತ್ತಿವೆ. ಶೇ.50 ಪ್ರವೇಶಾತಿಯಲ್ಲಿ ಥಿಯೇಟರ್‌ ಬಾಗಿಲು ತೆಗೆದು ಕುಳಿತರೆ  ಬರುವ ಕಲೆಕ್ಷನ್‌ನಿಂದ  ಥಿಯೇಟರ್‌ಗಳ ನಿರ್ವಹಣ ವೆಚ್ಚವನ್ನೂ ಭರಿಸಲಾಗುವುದಿಲ್ಲ. ಇವೆಲ್ಲವನ್ನು ಸರಕಾರ ಮನಗಂಡು ಚಿತ್ರರಂಗದ ನೆರವಿಗೆ ಧಾವಿಸಬೇಕಿದೆ. ಚಿತ್ರಮಂದಿರಗಳಿಗೆ ಶೇ. 100 ಪ್ರವೇಶಕ್ಕೆ ಅನುಮತಿ ನೀಡುವುದು ಸರಕಾರ ಚಿತ್ರರಂಗಕ್ಕೆ ಮಾಡುವ ದೊಡ್ಡ ಸಹಾಯ ಎಂದು ನಟ ಶಿವ ರಾಜ್‌ಕುಮಾರ್‌ ಇತ್ತೀಚೆಗಷ್ಟೇ ಹೇಳಿದ್ದಾರೆ.

ಅದು ಸತ್ಯ ಕೂಡ. ಕಷ್ಟದಲ್ಲಿರುವ ಕಾರ್ಮಿಕರಿಗೆ ಒಂದಷ್ಟು ದಿನ ಸಹಾಯ ಮಾಡಬಹುದು. ಆದರೆ ಚಿತ್ರರಂಗ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡರೆ ತನ್ನಿಂತಾನೇ ಎಲ್ಲ ವ್ಯವಸ್ಥೆಗಳು ಸರಿ ಹೋಗುತ್ತವೆ. ಪ್ರತಿಯೊಬ್ಬರ ಜೀವನವನ್ನು ಅವರೇ ನಡೆಸಿಕೊಂಡು ಹೋಗುವಂತಾಗುತ್ತದೆ. ಸ್ಟಾರ್‌ಗಳ ಸಿನೆಮಾಗಳು ಕೂಡ ಬಿಡುಗಡೆಯಾಗುವ ಮೂಲಕ ಆರ್ಥಿಕವಾಗಿಯೂ ಚಿತ್ರರಂಗ ಪ್ರಬಲವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.