ಅವನೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ. ಹೆಸರು ರಾಮಾಚಾರಿ ಅಲಿಯಾಸ್ ಚಾರಿ. ಇನ್ನೇನು ಕೊನೆ ವರ್ಷದ ಕೊನೆಗೆ ಸಬ್ಜೆಕ್ಟ್ ಎಕ್ಸಾಂ ಬರೆಯಲು ಹೋಗಬೇಕು ಎನ್ನುವಷ್ಟರಲ್ಲಿ, ಮಾರ್ಗ ಮಧ್ಯೆ ಅವನಿಗೊಬ್ಬಳು ಮಾರ್ಗರೇಟ್ ಅಲಿಯಾಸ್ ಮಾರ್ಗಿ ಸಿಗುತ್ತಾಳೆ. ಅಲ್ಲಿಂದ ಅವನ ಜೀವನದ ಮಾರ್ಗವೇ ಬದಲಾಗುತ್ತದೆ.
ಎಕ್ಸಾಂ ಬರೆಯಲು ಹೊರಟ ಹುಡುಗನ ದಿಕ್ಕು-ದೆಸೆ ಎರಡೂ ಬದಲಾಗಿದ್ದರಿಂದ, ಲೈಫ್ ಟ್ರ್ಯಾಕ್‌ನಲ್ಲಿ ರನ್ನಿಂಗ್ ರೇಸ್ ಶುರುವಾಗುತ್ತದೆ. ಓಟದ ನಡುವೆ ಅಲ್ಲಲ್ಲಿ ಎದುರಾಳಿಗಳ ಜೊತೆ ಒಂದಷ್ಟು ಕಾದಾಟ. ಕೊನೆಗೆ ರನ್ನಿಂಗ್ ಮುಗಿಯುವ ಹೊತ್ತಿಗೆ ಸಿನಿಮಾದ ಕ್ಲೈಮ್ಯಾಕ್ಸ್ ಬಂದಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ರನ್-2′ ಚಿತ್ರದ ಕಥೆಯ ಎಳೆ.
ಬಾಡಿ ಬಿಲ್ಡಿಂಗ್‌ನಲ್ಲಿ ಹೆಸರು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪವನ್ ಶೆಟ್ಟಿ, ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ, ಲವರ್ ಬಾಯ್ ಆಗಿ ಆ್ಯಕ್ಷನ್ ಹೀರೋ ಆಗಿ ಮೂರು ಗೆಟಪ್ ಪವನ್ ಶೆಟ್ಟಿ ಅವರಿಗಿದೆ. ಪವನ್ ಬಾಡಿ ಬಿಲ್ಡಿಂಗ್ ತೆರೆಮೇಲೆ ನೋಡುಗರ ಗಮನ ಸೆಳೆಯುತ್ತದೆ.
ಇದನ್ನೂ ಓದಿ :ಜಾಕ್‌ಪಾಟ್ ನಿರೀಕ್ಷೆಯಲ್ಲಿ ಚಂದು
ನಾಯಕಿ ತಾರಾ ಶುಕ್ಲಾ ಅಭಿನಯದಲ್ಲಿ ಸಾಕಷ್ಟು ಪಳಗಬೇಕಿದೆ.ಕುರಿರಂಗ ತಮ್ಮಕಾಮಿಡಿ ಮೂಲಕ ಅಲ್ಲಲ್ಲಿ ನೋಡುಗರಿಗೆ ನಗು ತರಿಸಲು ಪ್ರಯತ್ನಿಸುತ್ತಾರೆ. ಹೆಸರೇ “ರನ್’ ಅಂತಿರುವುದರಿಂದ, ಸಿನಿಮಾದ ಕಥೆ, ಸನ್ನಿವೇಶಗಳ ಜೊತೆಗೆ ಒಂದು ಕಡೆಯಿಂದ ಮತ್ತೂಂದು ಕಡೆಗೆ ಓಡುತ್ತಲೇ ಇರುತ್ತದೆ. ಈ ಓಟದಲ್ಲಿ ಹಾಡು,ಕಾಮಿಡಿ, ಫೈಟ್ಸ್ ಹೀಗೆ ಒಂದಷ್ಟು ಕಮರ್ಶಿಯಲ್ ಅಂಶಗಳನ್ನು ಸೇರಿಸಿ, ನಿರ್ದೇಶಕ ಸಂಜಯ್ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಪ್ರಯತ್ನ ಮಾಡಿದ್ದಾರೆ.
ಛಾಯಾಗ್ರಹಣ ಮತ್ತು ಬ್ಯಾಕ್‌ಗ್ರೌಂಡ್ ಸೌಂಡ್ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು.ಕೆಲ ತಾಂತ್ರಿಕ ಅಂಶಗಳ ಕಡೆಗೆ ತೀರಾ ಗಮನಕೊಡದೆ, ನೋಡುವುದಾದರೆ ಮಾಸ್ ಕಂ ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಸಿನಿಪ್ರಿಯರಿಗೆ “ರನ್-2′ ಇಷ್ಟವಾಗಬಹುದು.
-ಕಾರ್ತಿಕ್