ಕ್ಯಾಪ್ಟನ್ ರಾಜಾರಾಮ್ (ರಾಘವೇಂದ್ರ ರಾಜಕುಮಾರ್) ಗಡಿಯಲ್ಲಿ ಶತ್ರುಗಳ ವಿರುದ್ದ ಹೋರಾಡಿ ನಿವೃತ್ತನಾದ ಯೋಧ. ನಿವೃತ್ತಿಯ ನಂತರ ಸಮಾಜದಲ್ಲಿರುವ ದೇಶ ದ್ರೋಹಿಗಳ ವಿರುದ್ದ ಕ್ಯಾಪ್ಟನ್ ರಾಜಾರಾಮ್ ಹೋರಾಟ ಮುಂದು ವರೆಯುತ್ತಿರುತ್ತದೆ. ಆಗ ಕ್ಯಾಪ್ಟನ್ ರಾಜಾರಾಮ್ ಕಣ್ಣಿಗೆ ಬೀಳುವುದು ಸಮಾಜದಲ್ಲಿ ಯುವಜನತೆಯನ್ನು ಹಾಳು ಮಾಡುತ್ತಿರುವ ಡ್ರಗ್ಸ್ ಮಾಫಿಯಾ. ಈ ಡ್ರಗ್ಸ್ ಜಾಲವನ್ನು ಭೇದಿಸಿ ಹೆಡೆಮುರಿ ಕಟ್ಟಲು ಕ್ಯಾ. ರಾಜಾರಾಮ್ ಕೂತಲ್ಲಿಯೇ ನಿಗೂಢ ತಂತ್ರವೊಂದನ್ನು ಹೆಣೆಯುತ್ತಾನೆ. ಅಲ್ಲಿಂದ ಚದುರಂಗದಾಟ ಶುರುವಾಗುತ್ತದೆ.
ಒಬ್ಬ ಯೋಧ ಸಮಾಜದ ವ್ಯವಸ್ಥೆಯೊಳಗಿದ್ದುಕೊಂಡೇ, ತನ್ನ ತಂತ್ರಗಳ ಮೂಲಕ ಶತ್ರುಗಳನ್ನು ಹೇಗೆ ಸದೆಬಡಿದು, ಸ್ವಸ್ಥ ಸಮಾಜ ನಿರ್ಮಿಸುತ್ತಾನೆ ಅನ್ನೋದು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಗೊತ್ತಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ರಾಜತಂತ್ರ’ ಚಿತ್ರದ ಕಥಾಹಂದರ. ದೇಶಭಕ್ತ ಯೋಧ, ಡ್ರಗ್ಸ್ ಮಾಫಿಯಾ, ಭ್ರಷ್ಟ ರಾಜಕೀಯ ವ್ಯವಸ್ಥೆ, ಅಂತಿಮವಾಗಿ ಒಂದು ಸಂದೇಶ ಈ ಎಲ್ಲ ಅಂಶ ಗಳನ್ನು ಇಟ್ಟುಕೊಂಡು, “ರಾಜತಂತ್ರ’ ಚಿತ್ರವನ್ನು ತೆರೆಗೆ ತರಲಾಗಿದೆ.
ಇದನ್ನೂ ಓದಿ :ಏಪ್ರಿಲ್ 1ಕ್ಕೆ ಯುವರತ್ನ ರಿಲೀಸ್
ಚಿತ್ರದ ಹೆಸರಿಗೆ ತಕ್ಕಂತೆ ಚಿತ್ರಕಥೆಯಲ್ಲಿ ಬರುವ ಒಂದಷ್ಟು “ತಂತ್ರ’ ಪ್ರಯೋಗಗಳು ಕಥೆಯ ಓಟಕ್ಕೆ ಅಲ್ಲಲ್ಲಿ ಒಂದಷ್ಟು ತಿರುವುಗಳನ್ನು ನೀಡುತ್ತದೆ. ಚಿತ್ರದ ನಿರೂಪಣೆ ಮತ್ತು ಅದನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಡುವುದರ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು.ಇನ್ನು ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಿವೃತ್ತ ಕ್ಯಾಪ್ಟನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಡಿಮೆ ಸಂಭಾಷಣೆಯಿದ್ದರೂ, ಹರಿತವಾದ ಮಾತುಗಳು, ಗಂಭೀರ ಮ್ಯಾನರಿಸಂನಿಂದ ರಾಘಣ್ಣ ಪಾತ್ರ ಚಿತ್ರದಲ್ಲಿ ಗಮನ ಸೆಳೆಯುತ್ತದೆ.
ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಭವ್ಯಾ, ಭ್ರಷ್ಟ ರಾಜಕಾರಣಿಯಾಗಿ ದೊಡ್ಡಣ್ಣ, ಖಳ ನಟನಾಗಿ ನೀನಾಸಂ ಅಶ್ವತ್ ಅಭಿನಯ ಅಚ್ಚುಕಟ್ಟಾಗಿದೆ. ಉಳಿದಂತೆ ಚಿತ್ರದ ತಾರಾಬಳಗ ದೊಡ್ಡದಾಗಿದ್ದರೂ, ಇತರ ಪಾತ್ರಗಳು ಅಷ್ಟಾಗಿ ನೋಡುಗರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಚಿತ್ರದ ಛಾಯಾಗ್ರಹಣ, ಸಂಕಲನ, ಕಲರಿಂಗ್, ಹಿನ್ನೆಲೆ ಸಂಗೀತ ಹೀಗೆ ಒಂದಷ್ಟು ತಾಂತ್ರಿಕ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಸಾಧ್ಯತೆಗಳಿದ್ದವು. ಒಟ್ಟಾರೆ ಕೆಲ ಸಣ್ಣ-ಪುಟ್ಟ ಲೋಪಗಳನ್ನು ಬದಿಗಿಟ್ಟು ನೋಡುವುದಾದರೆ, “ರಾಜತಂತ್ರ’ ವರ್ಷದ ಆರಂಭದಲ್ಲಿ ಒಂದೊಳ್ಳೆ ಪ್ರಯತ್ನವಾಗಿ ತೆರೆಮೇಲೆ ಕಾಣುತ್ತದೆ. ಗಂಭೀರ ವಿಷಯವನ್ನು, ಅಷ್ಟೇ ಗಂಭೀರವಾಗಿ ಕುಳಿತು ತೆರೆಮೇಲೆ ನೋಡಲು ಬಯಸುವ ಪ್ರೇಕ್ಷಕರಿಗೆ “ರಾಜತಂತ್ರ’ ಇಷ್ಟವಾಗಬಹುದು.
ಚಿತ್ರ: ರಾಜತಂತ್ರ
ನಿರ್ಮಾಣ: ವಿಶ್ವಂ ಡಿಜಿಟಲ್ ಮೀಡಿಯಾ
ನಿರ್ದೇಶನ: ಪಿ.ವಿ.ಆರ್.ಸ್ವಾಮಿ
ತಾರಾಗಣ: ರಾಘವೇಂದ್ರ ರಾಜಕುಮಾರ್, ಭವ್ಯಾ, ದೊಡ್ಡಣ್ಣ, ಶ್ರೀನಿವಾಸಮೂರ್ತಿ, ಶಂಕರ್ ಅಶ್ವತ್, ನೀನಾಸಂ ಅಶ್ವತ್, ಮುನಿರಾಜು, ರಂಜನ್ ಹಾಸನ್ ಮತ್ತಿತರರು.
-ಜಿ.ಎಸ್ ಕಾರ್ತಿಕ ಸುಧನ್