ಹೆಸರೇ ಹೇಳುವಂತೆ “ಮನಸಾಗಿದೆ’ ಒಂದು ಅಪ್ಪಟ ಲವ್ ಸ್ಟೋರಿ ಸಿನಿಮಾ. ಮೊದಲು ಮನಸಾದ ಹುಡುಗಿಗಾಗಿ ಒಂದೂವರೆ ವರ್ಷ ಕಾದು,ಹುಡುಕಿಕೊಂಡು ಬರುವ ಹುಡುಗನಿಗೆ ಸನ್ನಿವೇಶವೊಂದು ಆಕೆಯಿಂದ ದೂರವಾಗುವಂತೆ ಮಾಡುತ್ತದೆ. ಮೊದಲ ಹುಡುಗಿಯ ನೆನಪಿನಲ್ಲಿರುವ ನಾಯಕನಿಗೆ, ಇದೇ ವೇಳೆ ಅನಿರೀಕ್ಷಿತವಾಗಿ ಎದುರಾಗುವಸನ್ನಿವೇಶವೊಂದು ಮತ್ತೂಂದು ಹುಡುಗಿಯ ಮೇಲೆ ಮನಸಾಗುಂತೆ ಮಾಡುತ್ತದೆ.
ಹೀಗೆ ಇಬ್ಬರು ಹುಡುಗಿಯನಡುವೆ ಪ್ರೇಮದ ಸುಳಿಯಲ್ಲಿ ಸಿಲುಕಿಕೊಳ್ಳುವ ನಾಯಕ, ಕೊನೆಗೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಅನ್ನೋದು “ಮನಸಾಗಿದೆ’ ಚಿತ್ರದ ಕ್ಲೈಮ್ಯಾಕ್ಸ್.
ಇಲ್ಲಿ ಲವ್‌ಸ್ಟೋರಿಯ ಜೊತೆಗೆ ಒಂದಷ್ಟು ಕಾಮಿಡಿ, ಮೆಲೋಡಿಹಾಡುಗಳು, ಭರ್ಜರಿ ಆ್ಯಕ್ಷನ್ಸ್ ಹೀಗೆ ಎಲ್ಲವೂ ಉಂಟು. ಒಂದು ಎಂಟರ್ ಟೈನ್ಮೆಂಟ್ ಸಿನಿಮಾದಲ್ಲಿ ಏನೇನೂಇರಬೇಕೋ ಅದೆಲ್ಲವನ್ನೂಜೋಡಿಸಿ “ಮನಸಾಗಿದೆ’ ಚಿತ್ರವನ್ನುತೆರೆಮೇಲೆ ಕಟ್ಟಿಕೊಟ್ಟಿದೆ ಚಿತ್ರತಂಡ. ನವ ನಾಯಕ ನಟನಾಗಿ ಅಭಯ್ ಮೊದಲ ಚಿತ್ರದಲ್ಲೇ ಉತ್ತಮ ಅಭಿನಯ ನೀಡಿದ್ದಾರೆ.
ಆ್ಯಕ್ಷನ್, ಡ್ಯಾನ್ಸ್ ಎಲ್ಲದರಲ್ಲೂ ಅಭಯ್ ಹಾಕಿರುವ ಪರಿಶ್ರಮ ತೆರೆ ಮೇಲೆ ಕಾಣುತ್ತದೆ. ಡೈಲಾಗ್‌ಡೆಲಿವರಿ ಮತ್ತು ಭಾವನಾತ್ಮಕದೃಶ್ಯಗಳ ನಿರ್ವಹಣೆಯಲ್ಲಿ ಇನ್ನಷ್ಟು ಗಮನನೀಡಿದರೆ, ಅಭಯ್‌ಗೆಭವಿಷ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕ ನಟನಾಗುವ ಎಲ್ಲ ಲಕ್ಷಣಗಳಿವೆ. ನಾಯಕಿ ಅಥಿರಾ ಕೂಡ ಕೂಡ ಅಂದಕ್ಕೊಪ್ಪುವ ರೀತಿಯಲ್ಲಿ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ಉಳಿದಂತೆ ಮೇಘಶ್ರೀ, ಭವ್ಯಶ್ರೀ ರೈ ಮೊದಲಾದವರ ಪಾತ್ರಗಳು ತೆರೆಮೇಲೆ ಹೆಚ್ಚುಹೊತ್ತು ಇಲ್ಲದಿರುವುದರಿಂದ, ಅವುಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ಇನ್ನು “ಮನಸಾಗಿದೆ’ ಚಿತ್ರದ ತಾಂತ್ರಿಕ ಕೆಲಸಗಳ ಬಗ್ಗೆ ಹೇಳುವುದಾದರೆ, ಮಾನಸ ಹೊಳ್ಳ ಸಂಗೀತಸಂಯೋಜನೆಯ ಚಿತ್ರದ ಒಂದೆರಡು ಮೆಲೋಡಿ ಹಾಡುಗಳು ಥಿಯೇಟರ್ ಹೊರಗೂಗುನುಗುವಂತಿದೆ. ಚಿತ್ರದ ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಲೊಕೇಶನ್ ಗಳನ್ನು, ಹಸಿರಿನ ಸಿರಿ ಕ್ಯಾಮರಾ ಫ್ರೇಮ್‌ನಲ್ಲಿ ಸುಂದರವಾಗಿ ಮೂಡಿಬಂದಿದೆ. ಚಿತ್ರದ ಸಂಕಲನ ಮತ್ತು ಕಲರಿಂಗ್ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಹರಿಸಿದ್ದರೆ, ದೃಶ್ಯಗಳು ತೆರೆಮೇಲೆ ಇನ್ನಷ್ಟುಪರಿಣಾಮಕಾರಿಯಾಗಿ ಕಣ್ಣಲ್ಲಿ ಉಳಿಯುವ ಸಾಧ್ಯತೆಗಳಿದ್ದವು.
ಚಿತ್ರ: ಮನಸಾಗಿದೆ
ರೇಟಿಂಗ್: ***
ನಿರ್ದೇಶನ: ಶ್ರೀನಿವಾಸ ಶಿಡ್ಲಘಟ್ಟ
ನಿರ್ಮಾಣ: ಎಸ್. ಚಂದ್ರಶೇಖರ್
ತಾರಾಗಣ: ಅಭಯ್, ಅಥಿರಾ, ಮೇಘಶ್ರೀ, ಭವ್ಯಶ್ರೀ ರೈ, ತೇಜಸ್ ಮತ್ತಿತರರು
-ಜಿ. ಎಸ್. ಕೆ ಸುಧನ್