ಭ್ರಷ್ಟಾಚಾರ, ಅನ್ಯಾಯ, ಬೇಜವಾಬ್ದಾರಿತನ, ಅತ್ಯಾಚಾರ, ಸುಲಿಗೆ ಇದೆಲ್ಲದರ ಬಲಿಪಶುವಾಗುವುದೇ ಆರ್ಥಿಕವಾಗಿ ಹಿಂದುಳಿದವರು. ನಾವು ಪ್ರತೀ ದಿನ ಒಂದಲ್ಲ ಒಂದು ಇಂತಹ ಪ್ರಕರಣಗಳನ್ನು ನೋಡುತ್ತಿರುತ್ತೇವೆ. ಈ ಸಮಾಜದಲ್ಲಿ ಇರುವಂತಹ ಪೆಡಂಭೂತಗಳಾದ ಅಧಿಕಾರಿಶಾಹಿ ಮತ್ತು ಭ್ರಷ್ಟಾಚಾರದಿಂದ ಬೇಸತ್ತ ಒಬ್ಬ ಸಾಮಾನ್ಯ ಹೆಣ್ಣು ಮಗಳು ಏನು ಮಾಡುತ್ತಾಳೆ ಎನ್ನುವುದೇ ಆ್ಯಕ್ಟ್ 1978 ಚಿತ್ರದ ಮುಖ್ಯ ಸಾರ.
ಇತ್ತೀಚೆಗಷ್ಟೇ ಒಟಿಟಿ ಪ್ಲ್ರಾಟ್‌ಫಾರಂನಲ್ಲಿ ಬಿಡುಗಡೆಯಾಗ ಆ್ಯಕ್ಟ್ 1978 ಚಿತ್ರದಲ್ಲಿ ವಿಭಿನ್ನ, ರೋಮಾಂಚನ ಮತ್ತು ಕುತೂಹಲಕಾರಿ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಅತ್ಯಂತ ನೈಜ್ಯವೆನಿಸುವ ರೀತಿಯಲ್ಲೇ ಹೆಣೆದುಕೊಟ್ಟಿದ್ದಾರೆ ನಿರ್ದೇಶಕ ಮಂಸೋರೆ.
ಗರ್ಭಿಣಿ ಮಹಿಳೆ ಸರಕಾರಿ ಕಚೇರಿಯನ್ನು ಹೈಜಾಕ್ ಮಾಡುವುದು ಈ ಚಿತ್ರದ ಸಂಪೂರ್ಣ ಕಥೆ. ಒಬ್ಬ ಸಾಮಾನ್ಯ ಬಡ ರೈತ ಕುಟುಂಬದ ಪ್ರತಿಭಾನ್ವಿತ ಹುಡುಗಿ ಗೀತಾ. ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗಿ ಪಟ್ಟಣಕ್ಕೆ ಬರುತ್ತಾಳೆ. ಮಗಳ ಪಟ್ಟಣದ ಬದುಕು ಸುಗಮವಾಗಿರಬೇಕು ಎಂದು ಬಯಸಿದ ತಂದೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ತೆಂಗಿನ ಮರದ ಮೇಲಿನಿಂದ ಬಿದ್ದು ಪ್ರಾಣ ಬಿಡುತ್ತಾನೆ.
ಒಂದು ಕಡೆ ತಂದೆಯ ಸಾವು, ಮತ್ತೂಂದು ಕಡೆ ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಗಂಡ. ತಂದೆಗೆ ಸೇರಬೇಕಿದ್ದ ಹಣದಿಂದ ಗಂಡನನ್ನಾದರೂ ಉಳಿಸುವ ಯೋಚನೆಯಿಂದ ಗೀತಾ ಸರಕಾರಿ ಕಚೇರಿಯ ಮೆಟ್ಟಿಲೇರುತ್ತಾಳೆ. ಆದರೆ ಅಲ್ಲಿ ಹೋದ ಮೇಲೆ ಸಿಗುವುದು ನಿರಾಸೆ. ಕಚೇರಿಗಳಿಗೆ ಅಲೆದಲೆದು ಕಂಗೆಟ್ಟು, ಬಸವಳಿದ ಗೀತಾ ಸಮಾಜಘಾತುಕ ಕೃತ್ಯಕ್ಕೆ ಕೈ ಹಾಕುತ್ತಾಳೆ.
ತನಗಾದ ಅನ್ಯಾಯಕ್ಕೆ ಪ್ರತಿಕಾರವಾಗಿ ಸರಕಾರಿ ಕಚೇರಿಯನ್ನೇ ತನ್ನ ವಶಕ್ಕೆ ಪಡೆದು ಅಲ್ಲಿನ ಅಧಿಕಾರಿಗಳಿಗೆಲ್ಲ ಪಾಠ ಕಲಿಸುವ ಗರ್ಭಿಣಿ ಗೀತಾಳ ಅಭಿನಯ ಮನೋಜ್ಞವಾಗಿದೆ. ನಿರ್ದೇಶಕರು ಬಹಳ ಸೂಕ್ಷ್ಮವಾಗಿ ವಿಷಯಗಳ ವಿಶ್ಲೇಷಣೆಯನ್ನಿಲ್ಲಿ ಮಾಡಿದ್ದಾರೆ.
ಅಸಹಾಯಕ ಹೆಣ್ಣು ಮಗಳಾಗಿ ಯಜ್ಞಾ ಶೆಟ್ಟಿ ಗಮನ ಸೆಳೆದರೆ, ಬಿ. ಸುರೇಶ್ ಅವರ ಮೂಕ ಅಭಿನಯ ಮನ ಕಲಕುವಂತಿದೆ. ಎಚ್.ಜಿ. ದತ್ತಾತ್ರೇಯ, ಶ್ರುತಿ, ಅಚ್ಯುತ್ ರಾವ್, ಸುಧಾ ಬೆಳವಾಡಿ, ಅವಿನಾಶ್, ಸಂಚಾರಿ ವಿಜಯ್, ಪ್ರಮೋದ್ ಶೆಟ್ಟಿ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಇನ್ನುಳ್ಳಿದ ಕಲಾವಿದರ ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿರುವುದರಿಂದ ಅವರೂ ದೀರ್ಘಕಾಲ ನೆನಪಿನಲ್ಲಿ ಉಳಿಯುವರು.
ಒಂದು ಸಿನೆಮಾ ಹಾಡು ಮತ್ತು ಫೈಟ್ ಇದ್ದರೆ ಮಾತ್ರ ಗೆಲ್ಲುತ್ತೆ ಎನ್ನುವುದನ್ನು ಸುಳ್ಳು ಮಾಡಿಸಿದೆ ಈ ಚಿತ್ರ. ಯಾಕೆಂದರೆ ಈ ಚಿತ್ರದಲ್ಲಿ ಒಂದೇ ಒಂದು ಹಾಡು ಇಲ್ಲ. ಫೈಟ್ ಇಲ್ಲ. ಆದರೂ ಈ ಚಿತ್ರ ದೀರ್ಘಕಾಲ ಪ್ರೇಕ್ಷಕರ ಮನದಲ್ಲಿ ಉಳಿಯುವಂತೆ ಮಾಡುತ್ತದೆ. ಕಥೆ, ಅದಕ್ಕೆ ತಕ್ಕುದಾದ ಹಿನ್ನಲೆ ಸಂಗೀತ, ದೃಶ್ಯಾವಳಿಗಳು ಮನ ಸೆಳೆಯುತ್ತವೆ. ಒಟ್ಟಿನಲ್ಲಿ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಅತ್ಯುತ್ತಮ ಚಿತ್ರ ಇದಾಗಿದೆ ಎಂದರೆ ತಪ್ಪಾಗಲಾರದು.
– ಪವಿತ್ರಾ ವೀರಪ್ಪ, ಲಂಡನ್