Advertisement

ಮಣ್ಣಿನ ಸವಕಳಿಯಿಂದ ಸಂಚಾರಕ್ಕೆ ಸಂಚಕಾರ

02:59 PM Jun 16, 2023 | Team Udayavani |

ಬೆಳ್ತಂಗಡಿ: ನಿಡಿಗಲ್‌ನಿಂದ ಪಜಿರಡ್ಕ ಮೂಲಕ ಕನ್ಯಾಡಿಯನ್ನು ಸಂಪರ್ಕಿಸುವ ಕಲ್ಮಂಜ ಗ್ರಾಮದ ಗುಮಟಬೈಲು ಎಂಬಲ್ಲಿ ಕಾಂಕ್ರೀಟ್‌ ರಸ್ತೆ ಕುಸಿಯುವ ಭೀತಿ ಎದುರಾಗಿದೆ.

Advertisement

ರಸ್ತೆಯು ಎತ್ತರದಲ್ಲಿದ್ದು ಅದರ ತಳ ಭಾಗದ ಮಣ್ಣು ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಕರಗಿ ರಸ್ತೆಯಲ್ಲಿ ಭಾರೀ ಉದ್ದಕ್ಕೆ ಹಾಗೂ ಅಗಲಕ್ಕೆ ಕುಸಿದಿದೆ. ಇದರಿಂದ ಅಷ್ಟು ಸ್ಥಳದ ಕಾಂಕ್ರೀಟ್‌ ರಸ್ತೆಯ ಬುಡ ಭಾಗದಲ್ಲಿ ಆಧಾರ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಸುರಿವಾಗ ಈ ರಸ್ತೆಯ ಭಾಗ ಸಂಪೂರ್ಣ ಕುಸಿದು ಬೀಳುವ ಸಾಧ್ಯತೆ ಅಧಿಕವಾಗಿದೆ. ಪ್ರಸ್ತುತ ಘನವಾಹನಗಳು ಸಂಚರಿಸಿದರೆ ರಸ್ತೆ ಕುಸಿದು ಸಂಚಾರಕ್ಕೆ ತೊಡಕಾಗಲಿದೆ.

ರಸ್ತೆಯ ಇಕ್ಕೆಡೆಗಳಲ್ಲಿ ಚರಂಡಿ ನಿರ್ಮಿಸಲು ಜಾಗವಿಲ್ಲದ ಕಾರಣ ಇಲ್ಲಿ ಮಳೆ ನೀರು ರಸ್ತೆ ಮೂಲಕವೇ ಹರಿದು ಕುಸಿತ ಉಂಟಾದ ಜಾಗದ ಮೂಲಕವೇ ಮುಂದುವರಿಯುತ್ತದೆ. ಇದು ಹೆಚ್ಚಿನ ಮಣ್ಣಿನ ಸವಕಳಿಗೆ ಕಾರಣವಾಗುತ್ತಿದೆ.

ತ್ವರಿತ ಕಾಮಗಾರಿ ಅಗತ್ಯ
ಈಗಾಗಲೇ ಕುಸಿದಿರುವ ರಸ್ತೆ ಜಾಗದಲ್ಲಿ ಲಘು ಪ್ರಮಾಣದ ವಾಹನಗಳು ಸಂಚರಿಸಬಹುದಾಗಿದೆ. ಈ ರಸ್ತೆ ಪೂರ್ಣ ಕುಸಿದರೆ ನಿಡಗಲ್‌-ಪಜಿರಡ್ಕ ದೇವಸ್ಥಾನಕ್ಕೆ ಹಾಗೂ ಇಲ್ಲಿನ ಮನೆಗಳಿಗೆ ತೆರಳಲು ಸಂಪರ್ಕ ಕಡಿತವಾಗಲಿದೆ. ಈ ಪರಿಸರದ ನೂರಾರು ಮನೆಗಳಿಗೆ ಈ ರಸ್ತೆಯ ಅನಿವಾರ್ಯವಿದೆ. ಒಟ್ಟು 7 ಕಿ.ಮೀ. ವ್ಯಾಪ್ತಿಯ ಈ ರಸ್ತೆಯ ಈ ಭಾಗದ ಕಾಮಗಾರಿ ಕಳೆದ ಎರಡು ವರ್ಷಗಳ ಹಿಂದೆ ನಡೆಸಲಾಗಿತ್ತು. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ತತ್‌ಕ್ಷಣ ಗಮನಹರಿಸಿ ಇಲ್ಲಿ ತ್ವರಿತ ಕಾಮಗಾರಿ ನಡೆಸುವ ಅಗತ್ಯವಿದೆ.

ಕಳೆಂಜ ಗ್ರಾಮದ ಕುಡುಪಾರು
ಅಸಂದಡಿ ರಸ್ತೆ ಬದಿ ಕುಸಿತ
ಬೆಳ್ತಂಗಡಿ: ಕಳೆಂಜ ಗ್ರಾಮದ ಕುಡುಪಾರು ಅಸಂದಡಿ ರಸ್ತೆಯ ಬದಿಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯೊಂದು ಮಳೆಗೆ ಭಾಗಶಃ ಕುಸಿದಿದೆ. ರಸ್ತೆ ಬದಿಯಲ್ಲಿ ತಡೆಗೋಡೆ ಕುಸಿದಿರುವುದರಿಂದ ರಸ್ತೆಯೂ ಕುಸಿಯುವ ಭೀತಿ ಎದುರಾಗಿದೆ. ಈ ಸ್ಥಳದಲ್ಲಿ ಆಗಾಗ ಮಣ್ಣು ಕುಸಿತವಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾ.ಪಂ.ನಿಂದ ತಡೆಗೋಡೆಯನ್ನು ಮೂರು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಆದರೆ ಈಗ ತಡೆಗೋಡೆಯೂ ಕುಸಿದಿದೆ. ಗ್ರಾ.ಪಂ. ಅಧಿಕಾರಿಗಳು ತಡೆಗೋಡೆ ಕುಸಿದಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next