Advertisement

ಮಾತೃಪೂರ್ಣ ಯೋಜನೆ ಪ್ರಗತಿ ಪರಿಶೀಲನ ಸಭೆ

11:33 AM Dec 23, 2017 | Team Udayavani |

ಪುತ್ತೂರು: ಮಾತೃಪೂರ್ಣ ಯೋಜನೆಯಲ್ಲಿ ನಮ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ ಅಂಗನವಾಡಿಗಳಲ್ಲಿ ಊಟ ನೀಡುವ ಬದಲು ಸಂಚಾರಿ ಊಟ ವಿತರಣೆಗೆ ಯೋಜನೆ ರೂಪಿಸಲು ಸರಕಾರವನ್ನು ವಿನಂತಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ.

Advertisement

ರಾಜ್ಯ ಸರಕಾರದ ಮಹತ್ವಪೂರ್ಣ ಯೋಜನೆಯಾಗಿರುವ ಮಾತೃಪೂರ್ಣ ಯೋಜನೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಲಭಿಸದಿರುವ ಹಿನ್ನೆಲೆಯಲ್ಲಿ ಸಂಚಾರಿ ಊಟ ವಿತರಣೆಗೆ ಸರಕಾರವನ್ನು ಒತ್ತಾಯಿಸಲು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಯೋಜನೆಯ ಪ್ರಗತಿ ಪರೀಶೀಲನ ಸಭೆಯಲ್ಲಿ ನಿರ್ಧರಿಸಲಾಯಿತು.

ಅಂಗನವಾಡಿ ಮೇಲ್ವಿಚಾರಕಿ ಹಾಗೂ ಇತರ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ದ.ಕ. ಉಡುಪಿ ಜಿಲ್ಲೆಯಲ್ಲಿ ಚದುರಾಗಿ ಮನೆಗಳಿರುವ ಹಾಗೂ ಇನ್ನಿತರ ಕಾರಣಗಳಿಂದ ಗರ್ಭಿಣಿ, ಬಾಣಂತಿಯರು ಅಂಗನವಾಡಿಗೆ ಆಗಮಿಸಿ ಊಟ ಸೇವಿಸುತ್ತಿಲ್ಲ ಎಂಬುದನ್ನು ತಾನು ಈಗಾಗಲೇ ಸರಕಾರದ ಗಮನಕ್ಕೆ ತಂದಿದ್ದೇನೆ ಎಂದರು.

ಸಂಚಾರಿ ಊಟಕ್ಕೆ ಚಿಂತನೆ
ಉಳಿದ ಜಿಲ್ಲೆಗಳಲ್ಲಿ ಇದೊಂದು ಮಹಾಭಾಗ್ಯವಾಗಿ ರೂಪುಗೊಂಡಿದ್ದು, ಯೋಜನೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಆದರೆ ಇಲ್ಲಿನ ಫಲಾನುಭವಿಗಳು ಅಂಗನವಾಡಿಗೆ ಬರಲು 2-3 ಕಿ.ಮೀ. ನಡೆಯಬೇಕಾಗಿದೆ. ಅಲ್ಲದೆ ಗರ್ಭಿಣಿಯರು, ಬಾಣಂತಿಯರು ಕೆಲವೊಂದು ಕಟ್ಟುಪಾಡುಗಳಿಂದಾಗಿ ಮಧ್ಯಾಹ್ನದ ವೇಳೆಯಲ್ಲಿ ಮತ್ತು ಗುಡ್ಡ ಪ್ರದೇಶಗಳಲ್ಲಿ ಹೋಗದಿರುವ ಕಾರಣ ಯೋಜನೆಗೆ ತೊಡಕಾಗಿದೆ. ಅದಕ್ಕಾಗಿ ಫಲಾನುಭವಿಗಳ ಬಳಿಗೆ ಸಂಚಾರಿ ಊಟ ಸಾಗಿಸುವ ಕುರಿತು ಸರಕಾರವನ್ನು ವಿನಂತಿಸುವ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ತಾ|ನಲ್ಲಿ 370 ಅಂಗನವಾಡಿಗಳಿದ್ದು, ಮಾತೃಪೂರ್ಣ ಯೋಜನೆಯ ಆರಂಭದ 20 ದಿನಗಳ ಕಾಲ ಶೇ. 90 ಫಲಾನುಭವಿಗಳು ಅಂಗನವಾಡಿಗೆ ಆಗಮಿಸಿ ಊಟ ಸೇವಿಸುತ್ತಿದ್ದರು. ಬಳಿಕ ಕುಂಠಿತವಾಗಿದೆ. ಇಲಾಖೆಯಿಂದ ಯೋಜನೆಯ ಕುರಿತು ಸಾಕಷ್ಟು ಮಾಹಿತಿ ನೀಡಲಾಗಿದೆ. ಮಾಹಿತಿಯ ಕೊರತೆಯಿಲ್ಲ. ಆದರೆ ಊಟ ಬೇಡ ಎಂದು ಯಾರೂ ಹೇಳುತ್ತಿಲ್ಲ. ಆದರೆ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪುತ್ತೂರು ಸಿಡಿಪಿಒ ಶಾಂತಿ ಹೆಗಡೆ ತಿಳಿಸಿದರು.

Advertisement

ತಾಲೂಕಿನಲ್ಲಿ ಶೇ.7
ಪ್ರಗತಿ ಮಾಹಿತಿ ನೀಡಿದ ಮೇಲ್ವಿಚಾರಕಿ, ಉಪ್ಪಿನಂಗಡಿಯಲ್ಲಿ ಶೇ. 18 ಪ್ರಗತಿ ಸಾಧಿಸಲಾಗಿದೆ. ಇಲ್ಲಿ ಗುಂಪು ಮನೆಗಳಿರುವ
ಹಿನ್ನೆಲೆಯಲ್ಲಿ ಪ್ರಗತಿ ಮಟ್ಟ ಸ್ವಲ್ಪ ಹೆಚ್ಚಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಒಟ್ಟು ಶೇ. 7 ಪ್ರಗತಿಯಾಗಿದೆ ಎಂದು ಸಿಡಿಪಿಒ ತಿಳಿಸಿದರು.

ರಾಜಕೀಯ ಬೇಡ
ಸರಕಾರವು ಮಹಿಳೆಯರಿಗೆ ಪೌಷ್ಟಿಕಾಂಶವನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಿದೆ. ಆದರೆ ಇದರಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಗರ್ಭಿಣಿ ಮತ್ತು ಬಾಣಂತಿಯರ ವಿಚಾರದಲ್ಲಿ ಯಾವುದೇ ರಾಜಕೀಯ ಸರಿಯಲ್ಲ ಎಂದು ಶಾಸಕಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಉಸ್ಮಾನ್‌, ವಿಟ್ಲ ವಿಭಾಗದ ಸಿಡಿಪಿಒ ಸುಧಾ ಜೋಶಿ, ಉಪತಹಶೀಲ್ದಾರ್‌ ಶ್ರೀಧರ್‌, ತಾ. ಪಂ. ಮ್ಯಾನೇಜರ್‌ ಕಮಲಾಕ್ಷಿ ಉಪಸ್ಥಿತರಿದ್ದರು.

ಹಣ ಸಾಕಾಗುವುದಿಲ್ಲ
ಕೆಲವು ಕಡೆಗಳಲ್ಲಿ ಗಂಡಸರು ಕೇಂದ್ರಕ್ಕೆ ಬರಲು ಮಹಿಳೆಯರನ್ನು ಬಿಡುತ್ತಿಲ್ಲ. ಪ್ರತಿದಿನ ಬೇಳೆ ಸಾರು ಮತ್ತು ಮೊಟ್ಟೆ ಸೇವಿಸುವುದರಿಂದ ಗ್ಯಾಸ್ಟ್ರಿಕ್‌ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ಬಿಳಿ ಅಕ್ಕಿಯ ಅನ್ನ ಕೆಲವರಿಗೆ ಹಿಡಿಸುವುದಿಲ್ಲ. ಅಪನಂಬಿಕೆಗಳಿಂದಾಗಿ ಇನ್ನು ಕೆಲವರು ಆಗಮಿಸುತ್ತಿಲ್ಲ. ಇಲಾಖೆಯಿಂದ ಊಟಕ್ಕೆ 21 ರೂ. ಸಿಗುತ್ತಿದೆ. ಇದರಲ್ಲಿ ನಮಗೆ ತೆಂಗಿನ ಕಾಯಿ, ಕೊತ್ತಂಬರಿ ಮತ್ತಿತರ ವಸ್ತುಗಳನ್ನು ಖರೀದಿಸಲು ಸಾಕಾಗುವುದಿಲ್ಲ ಎಂದು ಪ್ರಗತಿ ಪರಿಶೀಲನೆಯ ವೇಳೆಯಲ್ಲಿ ಮೇಲ್ವಿಚಾರಕರು ಶಾಸಕರಿಗೆ ಮನವರಿಕೆ ಮಾಡಿದರು. 

ಫಲಾನುಭವಿಗಳಿಗೆ ಆಗಿರುವ ಮಾನಸಿಕ ಗೊಂದಲವನ್ನು ನಿವಾರಿಸಬೇಕು. ಅಲ್ಲದೆ ನೈಜ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಪರಿಹರಿಸಿಕೊಡುವ ಪ್ರಯತ್ನವನ್ನು ಇಲಾಖೆ ಮಾಡಬೇಕು ಎಂದು ಸೂಚನೆ ನೀಡಿದ ಶಾಸಕರು, ತೆಂಗಿನಕಾಯಿ ಹಾಕದೆ ಸಾಂಬಾರು ಮಾಡಿದರೆ ಅದು ರುಚಿಸುವುದಿಲ್ಲ. ಅಲ್ಲದೆ ಇಲ್ಲಿನ ಜನರಿಗೆ ಬಿಳಿ ಅಕ್ಕಿ ಅನ್ನವೂ ಹಿಡಿಸುವುದಿಲ್ಲ. ಇದರಿಂದಾಗಿ ತೆಂಗಿನಕಾಯಿ, ಕುಚ್ಚಲು ಅಕ್ಕಿ ಒದಗಿಸುವ ಕುರಿತು ಸರಕಾರವನ್ನು ಕೇಳಿಕೊಳ್ಳಲು ನಿರ್ಣಯ ಕೈಗೊಳ್ಳೋಣ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next