Advertisement

Mother: ಅಮ್ಮಾ… ನಿನ್ನ ಎದೆಯಾಳದಲ್ಲಿ…

04:48 PM Jun 05, 2024 | Team Udayavani |

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆಮಾತಿನಂತೆ ಪ್ರತಿಯೊಂದು ಮಗುವಿಗೂ ತಾಯಿಯೇ ಬಂಧು. ಆಕೆಯ ಗರ್ಭದಲ್ಲಿ 9 ತಿಂಗಳು ಬೆಚ್ಚಗೆ ಅವಿತು ಭಾವಸ್ಪರ್ಶ ಪಡೆದು, ಹೊರಜಗತ್ತಿಗೆ ಬಂದು ಆಕೆಯ ತಾಯ್ತನದ ಸಂಭ್ರಮಕ್ಕೆ ಸಾಕ್ಷಿಯಾಗುವ ಮಗುವಿಗೆ ಆಕೆಯೇ ದೇವರು. ಇದಕ್ಕೆ ನನ್ನ ತಾಯಿಯೂ ಹೊರತಾಗಿಲ್ಲ.

Advertisement

ತನ್ನೆಲ್ಲ ಕಷ್ಟಗಳನ್ನು ಹೆಗಲಿಗೇರಿಸಿಕೊಂಡು, ತಲೆಯ ಮೇಲೆ ಭಾರ ಹೊತ್ತು, ಗರ್ಭದಲ್ಲಿ ತನ್ನ ಕನಸಿನ ಕುಡಿಹೊತ್ತು ಹೆರಿಗೆಯಾಗುವ ಕೊನೆ ದಿನಗಳವರೆಗೂ ಹೊಟ್ಟೆಗಾಗಿ, ತುತ್ತಿಗಾಗಿ ದುಡಿದ ನನ್ನ ತಾಯಿ ಫ‌ಲವತ್ತಾದ ಕಪ್ಪುನೆಲ. ಆಕೆಯ ಬಗ್ಗೆ ಬರೆಯಲು ಹೋದರೆ ಭಾಷೆಯೇ ಬಡವಿ ಎನಿಸುತ್ತದೆ. ಒಂದು ಪದದಲ್ಲಿ ವರ್ಣಿಸಲು ಹೋದರೆ ಆಕೆಯ ಪಾತ್ರದೆದುರು ಆ ಪದವೇ ಸೋತು ಬಿಡುತ್ತದೆ. ಯಾವುದೇ ಕವಿತೆ, ವಾಕ್ಯಗಳಿಗೆ ನಿಲುಕಲು ಸಾಧ್ಯವಾಗದ ಮಹೋನ್ನತ ವ್ಯಕ್ತಿತ್ವ ನನ್ನಮ್ಮನದು.

ನನ್ನಮ್ಮ ನಮ್ಮ ತುತ್ತಿಗಾಗಿ ಬೇರೆಯವರ  ಮನೆ ಕೆಲಸಕ್ಕೆ ಪ್ರತೀ ದಿನ ಹೋಗುತ್ತಿದ್ದಳು.ಬಸುರಿ, ಬಾಣಂತನ ಎಂದು ಅತೀ ಕಡಿಮೆ ದಿನ ಅವಳು ಮಲಗಿದ್ದು. ಅವರ ಮನೆಯಲ್ಲಿ ಕೊಟ್ಟ ಎರಡು ದೋಸೆಗಳನ್ನು ಬಾಳೆಲೆ ಸಮೇತ ಸೆರಗಿನಲ್ಲಿಟ್ಟುಕೊಂಡು, ಅದರ ಘಮದಲ್ಲಿ ತನ್ನ  ಹೊಟ್ಟೆ ತುಂಬಿಸಿಕೊಂಡು ಮಕ್ಕಳ ಹೊಟ್ಟೆಗೆ ಆ ದೋಸೆ ತುಂಬುತ್ತಿದ್ದಳು. ಮಧ್ಯಾಹ್ನದ ಊಟದ ತನಕ ಉರಿಬಿಸಿಲಿನಲ್ಲಿ ಬೇಯುತ್ತಿದ್ದ ನನ್ನಮ್ಮ ಬದುಕನ್ನು ಎಷ್ಟು ಪ್ರೀತಿಸಿದಳು. ಹಾಗೆ ನಮಗೂ ಬದುಕನ್ನು ಪ್ರೀತಿಸಲು ಕಲಿಸಿದಳು ಬವಣೆಗಳನ್ನು ಮೆಟ್ಟಿ ನಿಂತು. ಇದು ಒಂದೆರಡು ವರುಷಗಳ ತನಕವಲ್ಲ. ಹತ್ತಿರ ಹತ್ತಿರ ನಾನು ಡಿ.ಎಡ್‌. ಓದುವವರೆಗೂ ನಡೆಯುತ್ತಿತ್ತು.

ನನಗಿನ್ನೂ ನೆನಪಿದೆ ಅಮ್ಮ ಹೇಳಿದ ಮಾತು, ನಾವು ಹೀಗೆ ಬೇರೆಯವರ ಮನೆ ಚಾಕರಿ ಮಾಡಿದಂತೆ ನೀವು ಮಾಡಬಾರದು. ಓದಿ ನಿಮ್ಮ ಕಾಲಮೇಲೆ ನಿಂತುಕೊಳ್ಳಬೇಕು, ಬದುಕು ಕಟ್ಟಿಕೊಳ್ಳಬೇಕು ಎಂದು.  ನನ್ನಮ್ಮ ಅಂದೇ ದೂರದೃಷ್ಟಿ ಹೊಂದಿದ್ದಳು.ಅಪಮಾನ ಉಂಡು ಬೆಳೆದಿದ್ದಳು, ತಿರಸ್ಕಾರದ ಮಾತುಗಳಿಗೆ ಕಣ್ಣೀರಾಗಿದ್ದಳು, ಕೊಂಕು ಮಾತುಗಳಿಗೆ ಕಿವುಡಾಗಿದ್ದಳು ತಾನೂ ಹೆಣ್ಣಾಗಿ ಹುಟ್ಟಿದ್ದಕ್ಕೆ, ತನಗೆ ಹುಟ್ಟಿದ್ದ ಎರಡೂ ಹೆಣ್ಣುಮಕ್ಕಳೆಂಬುದಕ್ಕೆ..ಆದರೆ ಆಕೆ ನಂಬಿದ್ದು ಅಪ್ಪನನ್ನು ಮತ್ತು ಅವಳ ರಟ್ಟೆಬಲಗಳನ್ನು, ದುಡಿದು ಬದುಕಿ ತೋರಿಸಬೇಕು ಎಂಬ ಛಲವನ್ನು.

ದೊಡ್ಡ ಸಂಸಾರದಲ್ಲಿ ಹುಟ್ಟಿದ ಬಡವಿ ನನ್ನಮ್ಮ ತವರು ಮನೆಗಾಗಿ ಬಹುಬೇಗ ದುಡಿಯಲು ಹೊರಟು ನಿಂತಳು.ಶಾಲೆಯ ಮೆಟ್ಟಿಲು ಹತ್ತದೆ ಹೆಂಚಿನ ಕಾರ್ಖಾನೆಯ ಮೆಟ್ಟಿಲು ತುಳಿದು ಹೊರಬಾರದ ಭಾರ ಹೊತ್ತು ಹಣ್ಣಾಗಿದ್ದಳು, ಬಾಗಿದ್ದಳು. ಬಾಗಿ ಬಸವಳಿದ್ದ ನನ್ನಮ್ಮ ಮದುವೆಯಾಗಿ ಗಂಡನೊಂದಿಗೆ ಸಂಸಾರದ ನೊಗ ಹೊತ್ತಳು. ಅಪ್ಪನಿಗೆ ಜತೆಯಾದಳು, ಮತ್ತೆ ಸವೆದಳು ಸವೆದೂ ಸವೆದೂ ಕತೆಯಾದಳು.

Advertisement

ಅಮ್ಮ ಬಹುಬೇಗ ಭಾರಹೊತ್ತ ಪರಿಣಾಮ ಎಂಬಂತೆ ಗರ್ಭಕೋಶದ ಗಡ್ಡೆ ಹಾಗೂ ಜಾರುವಿಕೆಯಿಂದ ಬಳಲಿದಳು.ಶೌಚಾದಿ ಕ್ರಿಯೆಗಳಿಗೆ  ಕುಳಿತಾಗ ಗಡ್ಡೆ ಜಾರಿ ಕೆಳಗೆ ಬಂದ ಅನುಭವ ಹೇಳಿ ಒದ್ದಾಡುತ್ತಿದ್ದ ಅವಳ ಸಂಕಟ ಕಣ್ಣಾರೆ ನೋಡಿದ ನನಗೆ ಅಸಹಾಯಕತೆ ಬಿಟ್ಟರೆ ಬೇರೆ ವಿಧಿ ಇಲ್ಲ. ಅಪ್ಪ ನಿಗೆ ಅದಾಗಲೇ ಅವರ ತಂಗಿ ಮಕ್ಕಳು ಬೆಳೆದು ನಿಂತಿದ್ದಾರೆ. ಅವರ ಮದುವೆ ಜವಾಬ್ದಾರಿ ಹೆಗಲಮೇಲಿತ್ತು.

ಅಮ್ಮನ ನರನಾಡಿಗಳು ಅದಾಗಲೇ ನೋವಿನಿಂದ ಸತ್ತಿದ್ದವು. ಹೀಗೆ ಹಲವು ವರುಷಗಳ ಯಮಯಾತನೆ ಅನುಭವಿಸಿದ ನನ್ನಮ್ಮನಿಗೆ ಡಿ.ಎಡ್‌. ಮಾಡುವಾಗ ಆಪರೇಷನ್‌ ಮಾಡಿಸಿ ನೋವಿನ ಬದುಕಿನಿಂದ ಮುಕ್ತಗೊಳಿಸಿದೆ..ನೋವಿನಿಂದ ಮುಕ್ತ.. ಮುಕ್ತ… ಸಾಲದಿಂದಲ್ಲ..

ಇಂದು ನನ್ನ ಸಾಧನೆಯ ಹಿಂದೆ ಅಮ್ಮನ ಬೆವರಿದೆ, ನಿದ್ದೆಯಿಲ್ಲದ ರಾತ್ರಿಯಿದೆ, ಹಸಿದ ಹೊಟ್ಟೆಯ ತ್ಯಾಗವಿದೆ.

ಉಸಿರುಕೊಟ್ಟು ಜನ್ಮ ನೀಡಿದಳು,

ರಕ್ತ ಬಸಿದು ಹಾಲುಣಿಸಿದಳು

ಹೆಸರನ್ನಿಟ್ಟು ಜಗವ ತೋರಿದಳು

ಮುತ್ತುಕೊಟ್ಟು ತುತ್ತು ತಿನಿಸಿದಳು

ಸಾಕಿ ಸಲಹಿ ಬದುಕ ಕಲಿಸಿದಳು.. ನನ್ನಮ್ಮ

ಬದುಕಿನಲ್ಲಿ ಬಂದ ಕಷ್ಟಗಳನ್ನೆಲ್ಲಾ ತಾನುಂಡು ಮಕ್ಕಳಿಗೆ ಒಂದು ಬದುಕನ್ನು ರೂಪಿಸಲು ಅಪ್ಪನೊಂದಿಗೆ ಜೀವ ತೇಯ್ದ ನನ್ನಮ್ಮ ಎಂದೆಂದಿಗೂ ಫ‌ಲವತ್ತಾದ ಕಪ್ಪುನೆಲ.ಆಕೆಯ ತ್ಯಾಗ, ಪರೋಪಕಾರ, ತನಗಿಲ್ಲದಿದ್ದರೂ ಇನ್ನೊಬ್ಬರಿಗೆ ಕೈ ಎತ್ತಿ ನೀಡುವ ಗುಣ, ಸ್ವಾಭಿಮಾನಿ ಬದುಕು ಇಂದು ನನ್ನ ಬದುಕಿನ ಮೂಲಮಂತ್ರಗಳಾಗಿವೆ. ಬಡವರಾಗಿ ಹುಟ್ಟೋದು ತಪ್ಪಲ್ಲ,ಬದುಕನ್ನು ನಮಗೆ ಬೇಕಾದ ರೀತಿ ಕಟ್ಟಿಕೊಂಡು  ಸಾಧಿಸಿ ಬದುಕಬೇಕು ಎಂದು ಕಲಿಸಿದ, ಅದರಂತೆ ಬದುಕಿದ ನನ್ನಮ್ಮ ನಿಜವಾಗಲೂ ಗ್ರೇಟ್‌..

- ರೇಖಾಪ್ರಭಾಕರ್‌

ಶಂಕರನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next