ವಿಜಯಪುರ: ಜ್ಞಾನಾರ್ಜನೆಗೆ ಮಾತೃಭಾಷೆ ತುಂಬಾ ಅತ್ಯಗತ್ಯ. ಅನೇಕ ಶೈಕ್ಷಣಿಕ ಸಂಶೋಧನೆಗಳಿಂದ ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಕಲಿಕೆ ಸಾಧ್ಯ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲೀಕಾರ ಹೇಳಿದರು.
ಸೋಮವಾರ ನಗರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿ ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಎಸ್‌ಕೆವಿಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾತೃಭಾಷೆಗೆ ಪ್ರಥಮ ಪ್ರಾಧ್ಯಾನತೆ ನೀಡುವ ಉದ್ದೇಶದಿಂದಾಗಿ ವಿಶ್ವಸಂಸ್ಥೆ 1998 ಫೆಬ್ರವರಿ 21ರಂದು ವಿಶ್ವ ಮಾತೃಭಾಷಾ ದಿನ ಆಚರಿಸಲು ತಿರ್ಮಾನಿಸಿತು ಎಂದು ವಿವರಿಸಿದರು.
ಕಸಾಪ ಕೋಶಾಧ್ಯಕ್ಷ ಡಾ| ಸಂಗಮೇಶ್ವರ ಮೇತ್ರಿ ಮಾತನಾಡಿ, ಮನೆಯಲ್ಲಿ ಮಾತನಾಡುವ ಭಾಷೆ, ಅಲ್ಲಿ ಸೃಷ್ಟಿಯಾಗುವ ಜಾನಪದ ಸಾಹಿತ್ಯ ಚಟುವಟಿಕೆ ಆರಂಭ ಮಾಡುವುದೇ ಕುಟುಂಬದಿಂದ. ಮಾತೃ ಭಾಷೆಗೆ ಮಹತ್ವ ನೀಡಲು ಶಿಕ್ಷಣ ತಜ್ಞರು ಪ್ರಾಥಮಿಕ ಹಂತದಲ್ಲೇ ಮಾತೃ ಭಾಷೆಯಲ್ಲೇ ಮಗುವಿಗೆ ಶಿಕ್ಷಣ ನೀಡಬೇಕು ಎಂದಿದ್ದಾರೆ ಎಂದರು.
ಮಾತೃ ಭಾಷೆ ವಿಷಯವಾಗಿ ಅನೇಕ ಪ್ರಸ್ತಾವನೆ, ಹೋರಾಟ ಆರಂಭವಾದವು. ಜಾಗತಿಕ ಮಟ್ಟದಲ್ಲಿ ನಡೆದ ಇಂಥ ಹೋರಾಟದ ಭಾವಾಗಿ ಮೊದಲು ಪೂರ್ವ ಪಾಕಿಸ್ತಾನ ಎಂದು ಕರೆಸಿಕೊಳ್ಳಯ ಬಾಂಗ್ಲಾದೇಶದಲ್ಲಿ ಬಂಗಾಲಿ, ಹಿಂದಿ ಭಾಷೆ, ಪಶ್ಚಿಮ ಪಾಕಿಸ್ತಾನ ಉರ್ದು ಭಾಷೆಯನ್ನು ಪ್ರಥಮ ಭಾಷೆಯಾಗಿ ಹಾಗೂ ಅದೇ ಭಾಷೆಯಲ್ಲಿ ಶಿಕ್ಷಣ ನೀಡಲು ತೀರ್ಮಾನಿಸಿದವು ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಹೆಬ್ಬಿ ಮಾತನಾಡಿ, ಮಾತೃಭಾಷಾ ಪ್ರೀತಿಸಿ ಉಳಿದ ಭಾಷೆಗಳಿಗೆ ಗೌರವಿಸಬೇಕು. ಮನೆಯ ಮೊದಲು ಪಾಠ ಶಾಲೆ, ತಾಯಿ ಮೊದಲ ಗುರು. ಜನನಿಯಿಂದ ಪಾಠ ಕಲಿತ ಜನರು ಧನ್ಯರು ಎಂಬಂತೆ ಮಾತೃಭಾಷೆ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಅವಶ್ಯ ಎಂದರು
ಖೇಡ ಶಿಕ್ಷಣ ಸಮೂಹ ಸಂಸ್ಥೆಯ ಮುಖ್ಯಸ್ಥ ವಿನೋದ ಖೇಡ ಅಧ್ಯಕ್ಷತೆ ವಹಿಸಿದ್ದರು. ಆರ್.ಎ. ಸಿದ್ನಾಳ, ಎಸ್.ಬಿ. ಕೋಟ್ಯಾಳ, ಎಸ್.ಪಂಪಾಪತಿ, ಪಿ.ಪಿ. ಕ್ಷತ್ರಿ, ಆರ್.ವಿ. ಪಟ್ಟಣದ, ಎಸ್.ಐ. ಬಿರಾದಾರ, ಬಿ.ವಿ. ಬೋಮ್ಮನಹಳ್ಳಿ, ಸಿ.ಎಂ. ಹಂಚನಾಳ, ಎಂ.ಆರ್. ತಪಶೆಟ್ಟಿ ಇದ್ದರು.