ತಿ.ನರಸೀಪುರ: ಮಹಿಳೆಯರು ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಮಾಡಿ ಹೆರಿಗೆ ಸಂದರ್ಭದಲ್ಲಿ ತಾಯಿ ಹಾಗೂ ಶಿಶು ಮರಣ ತಡೆಗಟ್ಟಲು ರಾಜಾದ್ಯಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತೃಪೂರ್ಣ ಯೋಜನೆ ಜಾರಿಗೆ ತಂದಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ತುರುಗನೂರು ಗ್ರಾಮದಲ್ಲಿ 1 ಕೋಟಿ ರೂ.,ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಅಪೌಷ್ಟಿಕತೆ ಸಾಮಾಜಿಕ ಪಿಡುಗಾಗುತ್ತಿರುವ ಸಂದರ್ಭದಲ್ಲಿ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಪಾರುಮಾಡಲು ರಾಜ್ಯದಲ್ಲಿ ವಿನೂತನ ಯೋಜನೆಯಾಗಿ ಮಾತೃಪೂರ್ಣ ಯೋಜನೆ ರೂಪಿಸಿ 302 ಕೋಟಿ ರೂ.ಗಳ ಅನುದಾನ ನೀಡಿದ್ದಾರೆಂದರು.
ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಸರ್ಕಾರಿ ವೈದ್ಯಕೀಯ ಸೇವೆ ಕಲ್ಪಿಸಲು 1 ಕೋಟಿ ರೂಗಳ ವೆಚ್ಚದಲ್ಲಿ ತುರುಗನೂರು ಗ್ರಾಮದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗಿದೆ. 2ನೇ ಹಂತದಲ್ಲಿ ಹೆಗ್ಗೂರು ನಾಲೆಗಳನ್ನು ಆಧುನೀಕರಣಕ್ಕೆ ನೂರಾರು ಕೋಟಿ ರೂಗಳ ವೆಚ್ಚದ ಯೋಜನೆ ರೂಪಿಸಲು ಪ್ರಗತಿ ಪರಿಶೀಲನಾ ವರದಿ ಸಲ್ಲಿಸಲಾಗಿದೆ. ರೈತರು ಬೇಸಿಗೆಯಲ್ಲಿ ಖಾರಿಫ್ ಬೆಳೆ ಬೆಳೆಯಲು ನೀರನ್ನು ನೀಡಲು ನಿರ್ಧರಿಸಲಾಗಿದೆ. ಮುಂಗಾರು ಕೃಷಿಗೂ ನೀರನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಲ್.ಶ್ರೀನಿವಾಸ್, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಘಟಕವನ್ನು ಆರೋಗ್ಯ ಸಚಿವರಾಗಿದ್ದಗಲೇ ಮಂಜೂರು ಮಾಡಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡ ನಂತರ ನಿವೇಶನ ಕಲ್ಪಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ವಸತಿ ಯೋಜನೆ ಜಾಗೃತ ಸಮಿತಿ ಅಧ್ಯಕ್ಷ ಸುನೀಲ್ ಬೋಸ್, ಜಿಪಂ ಸದಸ್ಯ ಟಿ.ಎಚ್.ಮಂಜುನಾಥನ್, ಗ್ರಾಪಂ ಅಧ್ಯಕ್ಷೆ ವಿ.ಲಕ್ಷಿ, ಉಪಾಧ್ಯಕ್ಷೆ ದುಂಡಮ್ಮ, ತಾಪಂ ಸದಸ್ಯರಾದ ರಾಮಲಿಂಗಯ್ಯ, ಆರ್.ಚಲುವರಾಜು, ಕೆ.ಎಸ್.ಗಣೇಶ, ಕೆಪಿಸಿಸಿ ಕಾರ್ಯದರ್ಶಿ ಎಸ್.ಶಿವನಾಗಪ್ಪ, ಸದಸ್ಯರಾದ ಬಿ.ಸಿ.ಪುರುಷೋತ್ತಮ,
-ಧನಂಜಯಗೌಡ, ವೀಕ್ಷಕ ಗುರುಪಾದಸ್ವಾಮಿ, ಹಿಂ.ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ಎ.ಎನ್.ಸ್ವಾಮಿ, ಗುತ್ತಿಗೆದಾರರಾದ ಟಿ.ಟಿ.ಪಾರ್ಥಸಾರಥಿ, ಪ್ರಸಾದ್, ಪುರಸಭೆ ಸದಸ್ಯರಾದ ರಾಘವೇಂದ್ರ, ಸಿ.ಉಮೇಶ(ಕನಕಪಾಪು), ಬನ್ನೂರು ಶಿವಣ್ಣ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟಿ.ಎಚ್.ಮನೋಹರ, ಇಇ ರವಿಕುಮಾರ್, ಎಇಇ ಆರ್.ವಿನಯ್‌ಕುಮಾರ್ ಮತ್ತಿತರರಿದ್ದರು.
ಕಟ್ಟಡ ಕಳಪೆಯಾಗಿದ್ದರೆ ಕಠಿಣ ಕ್ರಮ
ತುರುಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಳಪೆಯಾಗಿದ್ದರೆ ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕಟ್ಟಡ ಬಿರುಕು ಬಿಟ್ಟಿರುವ ಬಗ್ಗೆ ಎಂಜಿನಿಯರ್‌ರಿಂದ ಪ್ರಮಾಣೀಕರಿಸದೇ ರಾಜಕೀಯ ದುರುದ್ದೇಶದಿಂದ ಕೆಲವರು ಸುದ್ದಿ ವಾಹಿನಿಗಳನ್ನು ಅಪಪ್ರಚಾರಕ್ಕೆ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಶಾಶ್ವತ ಅಭಿವೃದ್ಧಿ ಕಾರ್ಯಕ್ರಮಗಳು ಜನರ ಕಣ್ಣಿಗೆ ನೇರವಾಗಿ ಕಾಣಲಿವೆ.
-ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ