Advertisement

ಮಾತೃಭಾಷೆ ಶಿಕ್ಷಣ: ಗೊಂದಲ, ಕೊರತೆಗಳ ನಡುವೆ ಸಂತಸದ ಸುದ್ದಿ

03:07 AM Jul 05, 2021 | Team Udayavani |

ಯುನಿಫೈಡ್‌ ಡಿಸ್ಟ್ರಿಕ್ಟ್ ಇನ್ ಫಾರ್ಮೆಷನ್ ಸಿಸ್ಟಂ ಫಾರ್‌ ಎಜುಕೇಶನ್‌ನ 2019-20ರ ವರದಿಯ ಪ್ರಕಾರ ದಕ್ಷಿಣ ಭಾರತದಲ್ಲಿ ಮಾತೃಭಾಷೆಯಲ್ಲಿ ಕಲಿಯುತ್ತಿರುವವರ ಸಂಖ್ಯೆ ಉಳಿದೆಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚಾಗಿದೆ. ಇದು ಕನ್ನಡಿಗರ ಪಾಲಿಗೆ ಅತ್ಯಂತ ಸಂತಸದ ಸುದ್ದಿಯೇ. ಹಾಗೆಂದು ನಾವು ಅತಿಯಾಗಿ ಸಂಭ್ರಮಿಸುವ ಅಗತ್ಯವಿಲ್ಲ. ವರದಿಯ ಅಂಕಿ-ಅಂಶಗಳ ಪ್ರಕಾರ ಸರಿಸುಮಾರು ಶೇ.50ಕ್ಕೂ ಅಧಿಕ ಮಕ್ಕಳು ಮಾತೃಭಾಷೆಯಲ್ಲಿ ಅಂದರೆ ಕನ್ನಡದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

Advertisement

ವಾಸ್ತವದಲ್ಲಿ ನೂರು ಪ್ರತಿಶತ ಮಕ್ಕಳು ಪ್ರಾಥಮಿಕ ಹಂತದ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಪಡೆಯಬೇಕಿದೆಯಾದರೂ ದಕ್ಷಿಣ ಭಾರತದ ಉಳಿದ ರಾಜ್ಯಗಳಿಗೆ ಹೋಲಿಸಿದಾಗ ಆಂಗ್ಲ ಮಾಧ್ಯಮದ ಪ್ರಭಾವ ನಮ್ಮ ಮೇಲೆ ಅಷ್ಟೊಂದು ಬೀರಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದಷ್ಟೇ.

ಶಿಕ್ಷಣದ ವಿಚಾರ ಬಂದಾಗಲೆಲ್ಲ ಮಾಧ್ಯಮದ ಬಗೆಗೆ ಚರ್ಚೆ ಮುನ್ನೆಲೆಗೆ ಬರುವುದು ಸಹಜ. ಖಾಸಗಿ ಶಿಕ್ಷಣ ಸಂಸ್ಥೆಗಳದೇನಿದ್ದರೂ ಆಂಗ್ಲ ಮಾಧ್ಯಮ ಶಿಕ್ಷಣಕ್ಕೇ ಅಗ್ರಮಣೆ. ಹೀಗಾಗಿ ಕನ್ನಡ ಮಾಧ್ಯಮ ಶಿಕ್ಷಣ ಎಂದಾಗ ನಮ್ಮ ನೆನಪಿಗೆ ಬರುವುದು ಸರಕಾರಿ ಶಾಲೆಗಳಷ್ಟೇ. ದುರಂತ ಎಂದರೆ ಸರಕಾರಿ ಶಾಲೆಗಳಲ್ಲಿ ವರ್ಷಗಳುರುಳಿದಂತೆಯೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡಲು ಮುಂದಾಗಿ ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಿದುದು.

ಶಿಕ್ಷಣದ ಮಾಧ್ಯಮ ಯಾವುದಾಗಿರಬೇಕು? ಎಂಬ ಜಿಜ್ಞಾಸೆ ಇಂದು- ನಿನ್ನೆಯದಲ್ಲ. ತಜ್ಞರು, ಸಮಿತಿಗಳು, ಕನ್ನಡ ಸಂಘಟನೆಗಳು, ಭಾಷಾ ತಜ್ಞರು, ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಯೊಂದೂ ನೀತಿಗಳೂ ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲಿರಲೇಬೇಕು ಎಂದು ಸಾರಿ ಹೇಳುತ್ತವೆ. ಆದರೆ ಸರಕಾರವೇ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿದೆ ಎಂದಾದ ಮೇಲೆ ಈ ಸೂತ್ರ ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬರುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.

ಮಾತೃಭಾಷೆ ಶಿಕ್ಷಣ ನಿರ್ಲಕ್ಷಿಸಲ್ಪಡಲು ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಸರಕಾರ ಅಥವಾ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಧೋರಣೆ ಮತ್ತು ಜನರಲ್ಲಿ ಆಂಗ್ಲ ಭಾಷೆಯ ಬಗೆಗಿನ ಅತಿಯಾದ ವ್ಯಾಮೋಹ. ಈ ಹಿಂದೆ ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಮಾತ್ರ ಮಕ್ಕಳಿಗೆ ಬೋಧನೆ ನಡೆಯುತ್ತಿತ್ತು. ಆದರೆ ಒಟ್ಟಾರೆ ವ್ಯವಸ್ಥೆಯಲ್ಲಿ ಆಂಗ್ಲ ಭಾಷೆಯ ಪಾರುಪತ್ಯ ಅಧಿಕಗೊಳ್ಳುತ್ತಿದ್ದಂತೆ ಕನ್ನಡ ತುಸು ಹಿನ್ನಡೆಗೆ ಸರಿಯಲಾರಂಭಿಸಿತು. ಈ ಹಂತದಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಅಲ್ಲಲ್ಲಿ ಎದ್ದುನಿಂತು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಹಿನ್ನಡೆ ಅನುಭವಿಸುವಂತಾಯಿತು.

Advertisement

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಂತದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಅಪಾಯ ಎದುರಾಗದಂತೆ ಸರಕಾರ ಎಚ್ಚರ ವಹಿಸಲೇಬೇಕಿದೆ. ಮಾತೃಭಾಷೆ ಶಿಕ್ಷಣ ಕೇವಲ ಬಾಯಿಮಾತಿಗೆ ಸೀಮಿತವಾಗದೆ ಕನಿಷ್ಠ ಪ್ರಾಥಮಿಕ ಹಂತದ ಶಿಕ್ಷಣದವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೊಳ್ಳಬೇಕಿದೆ. ಈ ಹಂತದಲ್ಲಿ ಇತರ ಭಾಷೆಗಳನ್ನು ದ್ವಿತೀಯ ಮತ್ತು ತೃತೀಯ ಭಾಷೆಯ ನೆಲೆಯಲ್ಲಿ ಕಲಿಸಲು ಅವಕಾಶ ನೀಡಿದರೆ ಸೂಕ್ತ. ಇದರಿಂದ ನಮ್ಮ ಭಾವೀ ಪೀಳಿಗೆ ಕನ್ನಡ ಭಾಷೆಯ ಮೇಲೆ ಕಿಂಚಿತ್‌ ಆದರೂ ಹಿಡಿತ ಹೊಂದಲು ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next