Advertisement

ಮಗನ ಅಂತ್ಯಕ್ರಿಯೆಗೆ ಹಣವಿಲ್ಲದೇ ಪರದಾಡಿದ ತಾಯಿ: ಮನಕಲಕುವ ಘಟ‌ನೆ

10:02 PM Feb 17, 2024 | Team Udayavani |

ಬೆಳಗಾವಿ: ಅನಾರೋಗ್ಯದಿಂದ ಮೃತಪಟ್ಟ ಮಗನ ಅಂತ್ಯಕ್ರಿಯೆಗೆ ಹಣ ಇಲ್ಲದೇ ಪರದಾಡಿದ ತಾಯಿ ಅಂತ್ಯಕ್ರಿಯೆ ನಡೆಸುವಂತೆ ವೈದ್ಯರಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಘಟನೆ ಶನಿವಾರ ಬೆಳಗಾವಿ ನಗರದಲ್ಲಿ ನಡೆದಿದೆ.

Advertisement

ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ನೀಲವ್ವ ಎಂಬ ಮಹಿಳೆಯ ಮಗನನ್ನು 15 ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗ ಮೃತಪಟ್ಟಿದ್ದಾನೆ.

ತಾಯಿ ನೀಲವ್ವಳಿಗೆ ಯಾವ ಸಂಬಂಧಿಕರೂ ಇಲ್ಲ. ಇತ್ತ ಕಡು ಬಡತನದಲ್ಲಿರುವ ನೀಲವ್ವಳಿಗೆ ಮಗನ ಅಂತ್ಯಕ್ರಿಯೆ ನಡೆಸಲು ಹಣವೂ ಇಲ್ಲ. ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಅಂತ್ಯಕ್ರಿಯೆ ನಡೆಸುವುದಾದರೂ ಹೇಗೆ ಎಂದು ನೀಲವ್ವ ಚಿಂತಿಸುತ್ತಿದ್ದಳು. ಆಗ ಅನಿವಾರ್ಯವಾಗಿ ಬಿಮ್ಸ್ ವೈದ್ಯಾಧಿಕಾರಿಗಳಿಗೆ ಪತ್ರ ಬರೆದ ನೀಲವ್ವ, ತಾನು ಬಡವಳಾಗಿದ್ದು, ನಮಗೆ ಯಾರೂ ಸಂಬಂಧಿಕರು ಇಲ್ಲ. ಹೀಗಾಗಿ ಶವಾಗಾರದಿಂದ ನನ್ನ ಮಗನ ಮೃತದೇಹ ನೀಡಬೇಕು. ಸಮಾಜ ಸೇವಕ ವಿಜಯ ಮೋರೆ ಅವರಿಗೆ ಮೃತದೇಹವನ್ನು ಹಸ್ತಾಂತರಿಸುತ್ತೇನೆ ಎಂದು ಪತ್ರ ಬರೆದು ಮನವಿ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.

ಈ ಬಗ್ಗೆ ಕೂಡಲೇ ವಿಜಯ ಮೋರೆ ಅವರ ಗಮನಕ್ಕೆ‌ ತಂದ ವೈದ್ಯಾಧಿಕಾರಿಗಳು, ಅಂತ್ಯಕ್ರಿಯೆ ನಡೆಸಲು ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ವಿಜಯ ಮೋರೆ ಅವರ ಪುತ್ರ ಅಲನ್ ಮೋರೆ ಹಾಗೂ ಗಂಗಾಧರ ಪಾಟೀಲ ಇತರರು ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೇರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next