ಬೆಂಗಳೂರು: “ತನ್ನ ಮಗಳಿಗೆ ಆಟಿಸಂ ಎಂಬ ಕಾಯಿಲೆ ಇತ್ತು. ನನ್ನ ಕೆಲಸದ ಜತೆಗೆ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ಸಂಬಂಧಿಕರು ಮಗು ಮತ್ತು ನನಗೆ ಅಪಹಾಸ್ಯ ಮಾಡುತ್ತಿದ್ದರು. ಅದರಿಂದ ಬೇಸತ್ತು ಮಗು ಕೊಂದೆ…’
ಇದು ಇತ್ತೀಚೆಗೆ ತನ್ನ ನಾಲ್ಕು ವರ್ಷದ ಮಗುವನ್ನು 4ನೇ ಮಹಡಿಯಿಂದ ಎಸೆದು ಕೊಂದ ತಾಯಿ ಸುಷ್ಮಾ ವಿರುದ್ಧ ಸಂಪಂಗಿರಾಮನಗರ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿರುವ ಪ್ರಮುಖ ಅಂಶ.
ಸಂಪಂಗಿರಾಮನಗರ ಠಾಣೆ ವ್ಯಾಪ್ತಿಯ ಅಪಾರ್ಟ್ ಮೆಂಟ್‌ನಲ್ಲಿ ಪತಿ ಕಿರಣ್ ಮತ್ತು ಮಗಳ ದ್ಯುತಿ ಜತೆ ವಾಸವಾಗಿದ್ದ ಸುಷ್ಮಾ, ಆ.4ರಂದು ತನ್ನ ನಾಲ್ಕನೇ ಮಹಡಿಯಲ್ಲಿರುವ ಮನೆಯಿಂದ ಮಗಳನ್ನು ಎಸೆದು ಕೊಂದಿದ್ದಳು. ಈ ಸಂಬಂಧ ಆಕೆಯನ್ನು ಬಂಧಿಸಿದ ಪೊಲೀಸರು ಇದೀಗ ಪ್ರಕರಣದ ತನಿಖೆ ಮುಕ್ತಾಯಗೊಳಿಸಿ ಆರೋಪಿ ಸುಷ್ಮಾ ವಿರುದ್ಧ 193 ಪುಟಗಳ ಆರೋಪಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಆರೋಪಪಟ್ಟಿಯಲ್ಲಿ ಮೂವರು ಪ್ರತ್ಯಕ್ಷದರ್ಶಿಗಳು ಹಾಗೂ 34 ಸಾಕ್ಷ್ಯ ಹೇಳಿಕೆಯನ್ನು ಉಲ್ಲೇಖೀಸಲಾಗಿದೆ.
ಮಗಳಿಗೆ ಆಟಿಸಂ ಕಾಯಿಲೆ ಇದ್ದು, ಮಾತನಾಡಲು ಬರುತ್ತಿರಲಿಲ್ಲ. ಮಾನಸಿಕವಾಗಿ ಬೆಳವಣಿಗೆ ಕುಂಠಿತವಾಗಿತ್ತು. ಥೆರಪಿಗಾಗಿ ನಿತ್ಯ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಜತೆಗೆ ಯಾವಾಗಲೂ ಆಕೆ ಜತೆ ಇದ್ದು ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ವೈಯಕ್ತಿಕ ಜೀವನ ಹಾಳಾಗಿತ್ತು. ಮತ್ತೂಂದೆಡೆ ಸ್ನೇಹಿತರು, ಸಂಬಂಧಿಕರು ಮಗು ಮತ್ತು ತನ್ನ ಬಗ್ಗೆ ಅಪಹಾಸ್ಯ ಮಾಡುತ್ತಿದ್ದರು. ಕಾರ್ಯಕ್ರಮಗಳಿಗೆ ಮಗುವನ್ನು ಕರೆದೊಯ್ದಾಗ ಸಂಬಂಧಿಕರು ಕೊಂಕು ಮಾತನಾಡುತ್ತಿದ್ದರು. ಕೆಲವರು ಇಂತಹ ಮಗು ಏಕೆ ಬೇಕು. ಹೇಗೆ ಜೀವನ ನಡೆಸುತ್ತಿಯಾ? ಎಂದೆಲ್ಲ ಅಣುಕಿಸುತ್ತಿದ್ದರು. ಹೀಗಾಗಿ ಮಗಳ ಬಗ್ಗೆ ಅಸಡ್ಡೆ ಉಂಟಾಗಿತ್ತು. ಅದರಿಂದ ಬೇಸತ್ತು ಎರಡು ಬಾರಿ ಮಗುವನ್ನು ಕೊಲೆಗೈಯಲು ಯತ್ನಿಸಿದ್ದೆ. ಜುಲೈ 20ರಂದು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಹೋಗಿ ಪ್ರಶಾಂತಿ ಎಕ್ಸ್ ಪ್ರಸ್ ರೈಲಿನಲ್ಲಿ ಮಗು ಕೂರಿಸಿ ಮನೆಗೆ ಬಂದಿದ್ದಳು. ಆಗ ಮಗಳು ಕೈತಪ್ಪಿ ಹೋಗಿದ್ದಾಳೆ ಎಂದು ಪತಿಗೆ ಸುಳ್ಳು ಹೇಳಿದ್ದಳು. ಬಳಿಕ ಖಾಸಗಿ ಸಂಸ್ಥೆ ಹಾಗೂ ರೈಲು ಅಧಿಕಾರಿಗಳ ಮೂಲಕ ಯಲಹಂಕದಲ್ಲಿ ಮಗಳನ್ನು ಪತ್ತೆಹಚ್ಚಲಾಗಿತ್ತು. ಹೀಗಾಗಿ ಕೊಂದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಭಾವಿಸಿ, ಒಮ್ಮೆ ಕಟ್ಟಡದಿಂದ ಎಸೆಯಲು ಮುಂದಾಗಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ. ಹೀಗಾಗಿ ಮಗವನ್ನು ಗಟ್ಟಿ ನೆಲದ ಮೇಲೆ ಎಸೆದು ಕೊಂದಿರುವುದಾಗಿ ಆರೋಪಿ ಸುಷ್ಮಾ ಹೇಳಿಕೆ ನೀಡಿದ್ದಳು.
ಜತೆಗೆ ಘಟನಾ ಸ್ಥಳದ ಸಮೀಪದಲ್ಲಿದ್ದ ಸಿಸಿ ಕ್ಯಾಮೆರಾಗಳಲ್ಲಿ ಆರೋಪಿಯ ಕೃತ್ಯ ಸೆರೆಯಾಗಿತ್ತು. ಜತೆಗೆ ಜುಲೈನಲ್ಲಿ ಮೆಜೆಸ್ಟಿಕ್‌ನಲ್ಲಿ ರೈಲಿನಲ್ಲಿ ಮಗು ಕೂರಿಸಿ ಹೋಗುತ್ತಿರುವ ದೃಶ್ಯ ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಸಾಕ್ಷ್ಯವಾ ಗಿ ಪರಿಗಣಿಸಿ ಆರೋಪಪಟ್ಟಿ ಉಲ್ಲೇಖೀಸಲಾಗಿದೆ. ಈ ಮಧ್ಯೆ ಘಟನೆ ಸಂದರ್ಭದಲ್ಲಿ ತಾಯಿ ಸುಷ್ಮಾ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎಂದು ಹೇಳಲಾಗಿತ್ತು. ಆದರೆ. ಇದೀಗ ವೈದ್ಯರು ಆಕೆಗೆ ಯಾವುದೇ ಒತ್ತಡವಿಲ್ಲ. ಆರೋಗ್ಯವಾಗಿದ್ದಾಳೆ ಎಂದು ಸಹ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿರುವುದಾಗಿ ಮೂಲಗಳು ತಿಳಿಸಿವೆ.