ಯಾರಾದರೂ ತಪ್ಪು ಮಾಡಿದರೆ, ಎಲ್ಲಾದರೂ ಅನ್ಯಾಯ ನಡೆಯುತ್ತಿದ್ದರೆ ಆತನ ರಕ್ತ ಕುದಿಯುತ್ತದೆ, ಕೈಗಳು ಬಿಗಿಯಾಗುತ್ತವೆ. ಕಟ್ ಮಾಡಿದರೆ ಆತನ ಕೈಯಿಂದ ಏಟು ತಿಂದ ಒಂದಷ್ಟು ಮಂದಿ ನರಳಾಡುತ್ತಾ ಬಿದ್ದಿರುತ್ತಾರೆ. ಆ ಮಟ್ಟಿಗೆ ಆತ ಕೋಪಿಷ್ಠ. ತನ್ನ ಕೋಪದ ಹಿಂದೆ ಒಳ್ಳೆಯ ಉದ್ದೇಶವಿದೆ ಎಂದು ಹೇಳುತ್ತಲೇ ಹೊಡೆದಾಡಿಕೊಂಡಿರುತ್ತಾನೆ. ಮಗನಿಗೆ ಬೆಂಬಲವಾಗಿರುವ, ವೃತ್ತಿಯಲ್ಲಿ ಲಾಯರ್ ಆಗಿರುವ ತಾಯಿ, ಎಲ್ಲಾ ಕೇಸ್‌ಗಳಿಂದ ಬಚಾವ್ ಮಾಡುತ್ತಿರುತ್ತಾರೆ. ಕಾರಣ ಒಂದೇ – ಒಳ್ಳೆ ಸಮಾಜ ಬೇಕು ಅಂದ್ರೆ ಯಾರಾದರೂ ಕೋಪ ಮಾಡಿಕೊಳ್ಳಬೇಕು …
ಒಳ್ಳೆಯ ಉದ್ದೇಶಕ್ಕಾಗಿ ಕೋಪ ಮಾಡಿಕೊಳ್ಳಿ ಎಂಬ ಅಂಶವನ್ನಿಟ್ಟುಕೊಂಡು ಶಶಾಂಕ್ “ತಾಯಿಗೆ ತಕ್ಕ ಮಗ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಇದನ್ನು ಶಶಾಂಕ್ ಸಿನಿಮಾಸ್‌ನ ಮಾಸ್ ಸಿನಿಮಾ ಎಂದರೆ ತಪ್ಪಿಲ್ಲ. ಆ ಮಟ್ಟಿಗೆ ಚಿತ್ರ ತುಂಬಾ ಆ್ಯಕ್ಷನ್ ದೃಶ್ಯಗಳು ತುಂಬಿಕೊಂಡಿವೆ. ನೀವು ಶಶಾಂಕ್ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದವರಾಗಿದ್ದರೆ ನಿಮಗೆ, ಶಶಾಂಕ್ ಈ ಮಟ್ಟಿಗೆ ಬದಲಾದರೇ ಎಂಬ ಸಣ್ಣ ಸಂದೇಹ ಕಾಡದೇ ಇರದು. ಏಕೆಂದರೆ ಶಶಾಂಕ್ ಇದುವರೆಗೆ ಗೆದ್ದಿದ್ದು ಸೂಕ್ಷ್ಮಅಂಶಗಳ ಮೂಲಕ.
ಮುಖ್ಯವಾಗಿ ಅವರ ಸಿನಿಮಾದಲ್ಲಿ ಅಡಕವಾಗಿರುತ್ತಿದ್ದ ಸೂಕ್ಷ್ಮಅಂಶಗಳು, ಭಾವನಾತ್ಮಕ ಸನ್ನಿವೇಶಗಳು ಸಿನಿಮಾವನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯುತ್ತಿದ್ದವು. ಈ ಹಿಂದಿನ ಶಶಾಂಕ್ ಹಾಗೂ ಅಜೇಯ್ ರಾವ್ ಕಾಂಬಿನೇಶನ್‌ನ ಈ ಹಿಂದಿನ ಸಿನಿಮಾಗಳಲ್ಲೂ ಆ ಅಂಶಗಳು ಹೈಲೈಟ್ ಆಗಿದ್ದವು. ಆದರೆ, ನೀವು ಅದನ್ನು “ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಹೆಚ್ಚು ನಿರೀಕ್ಷಿಸುವಂತಿಲ್ಲ. ಶಶಾಂಕ್ ಈ ಬಾರಿ ತಮ್ಮ ಎಂದಿನ ಸೂಕ್ಷ್ಮ ಅಂಶಗಳ ಕಡೆಗೆ ಗಮನಕೊಟ್ಟಿಲ್ಲವೋ ಅಥವಾ ಆ ಅಂಶಗಳು ಆ್ಯಕ್ಷನ್ ಅಬ್ಬರದಲ್ಲಿ ಕಳೆದು ಹೋಗಿವೆಯೋ ಎಂಬ ಭಾವನೆ ಬರುವ ಮಟ್ಟಿಗೆ ಶಶಾಂಕ್ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ.
ಸಿನಿಮಾದಿಂದ ಸಿನಿಮಾಕ್ಕೆ ನಿರ್ದೇಶಕ ತನ್ನನ್ನು ಹೊಸತನಕ್ಕೆ, ಹೊಸ ಜಾನರ್‌ಗೆ ಒಗ್ಗಿಸಿಕೊಳ್ಳಬೇಕೆಂಬ ಉದ್ದೇಶ ಶಶಾಂಕ್ ಅವರದ್ದೇನೋ ಎಂದು ನೀವು ಅಂದುಕೊಳ್ಳಬಹುದು. ಶಶಾಂಕ್ ಮಾಡಿಕೊಂಡಿರುವ ಕಥೆ ಹಾಗೂ ಅದರ ಆಶಯ ಚೆನ್ನಾಗಿದೆ. ಚಿತ್ರಕಥೆ ಹಾಗೂ ನಿರೂಪಣೆಯೂ ಅದಕ್ಕೆ ಸಾಥ್ ನೀಡಿದ್ದರೆ “ತಾಯಿ-ಮಗ’ನ ಆಟ ಇನ್ನೂ ಮಜವಾಗಿರುತ್ತಿತ್ತು. ಆದರೆ, ಕಥೆ ಒಂದು ಕಡೆ ಸಾಗಿದರೆ, ಚಿತ್ರಕಥೆ ಇನ್ನೊಂದು ಕಡೆ ಸಾಗಿದಂತೆ ಭಾಸವಾಗುತ್ತದೆ. ಜೊತೆಗೆ ಆ್ಯಕ್ಷನ್ ಕಡಿಮೆ ಮಾಡಿ, ಒಂದಷ್ಟು ಭಾವನಾತ್ಮಕ ಸನ್ನಿವೇಶಗಳಿಗೆ ಒತ್ತು ನೀಡುವ ಅವಕಾಶವಿತ್ತು.
ಆರಂಭದಿಂದ ಕೊನೆವರೆಗೂ ತಾನು ಬಲಾಡ್ಯ ಎಂದು ಬಿಂಬಿಸಿಕೊಂಡು ಬಂದ ನಾಯಕ, ಒಂದು ಹಂತದಲ್ಲಿ ಇಡೀ ವಿಲನ್‌ಗಳ ಆಟದಿಂದ ಇಡೀ ಮನೆಯೊಳಗೆ ಲಾಕ್ ಆಗುತ್ತಾನೆ, ಇನ್ನೊಂದು ಸೀರಿಯಸ್ ಸನ್ನಿವೇಶದಲ್ಲಿ ಸಾಧುಕೋಕಿಲ ಬಂದು ಕಾಮಿಡಿ ಮಾಡಲು ಪ್ರಯತ್ನಿಸುತ್ತಾರೆ. ಈ ತರಹದ ಸನ್ನಿವೇಶಗಳು ಪ್ರೇಕ್ಷಕರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಲಾಜಿಕ್ ಬಿಟ್ಟು ಸಿನಿಮಾದ ಮ್ಯಾಜಿಕ್‌ನಷ್ಟೇ ಎಂಜಾಯ್ ಮಾಡಲು ಅಡ್ಡಿಯಿಲ್ಲ. ಒಂದು ಕಮರ್ಷಿಯಲ್ ಮಾಸ್ ಎಂಟರ್‌ಟೈನರ್ ಆಗಿ “ತಾಯಿಗೆ ತಕ್ಕ ಮಗ’ ಚಿತ್ರ ನಿಮ್ಮನ್ನು ರಂಜಿಸುತ್ತದೆ.
ಅದರಲ್ಲೂ ನೀವು ಮಾಸ್ ಪ್ರಿಯರಾದರೆ ಇಲ್ಲಿ ಹೈವೋಲ್ಟೆಜ್ ಫೈಟ್, ನರಬಿಗಿ ಹಿಡಿದು ಹೇಳುವ ಡೈಲಾಗ್, ಹೀರೋ-ವಿಲನ್ ನಡುವಿನ ಕಣ್ಣಾಮುಚ್ಚಾಲೆಯಾಟ, ರೊಮ್ಯಾಂಟಿಕ್ ಪ್ರಿಯರಿಗಾಗಿ ಒಂದು ರೊಮ್ಯಾಂಟಿಕ್ ಹಾಡು … ಇವೆಲ್ಲವೂ ನಿಮಗೆ ಖುಷಿಕೊಡಬಹುದು. ನಾಯಕ ಅಜೇಯ್ ರಾವ್ ಅವರ 25ನೇ ಸಿನಿಮಾ. 25ನೇ ಸಿನಿಮಾದಲ್ಲಿ ಔಟ್ ಅಂಡ್ ಔಟ್ ಆ್ಯಕ್ಷನ್ ಹೀರೋ ಆಗಬೇಕು, ಲವ್ವರ್ ಬಾಯ್ ಇಮೇಜ್‌ನಿಂದ ಹೊರಬರಬೇಕೆಂದು ಸಾಕಷ್ಟು ಶ್ರಮಪಟ್ಟಿದ್ದಾರೆ ಮತ್ತು ಅದು ತೆರೆಮೇಲೆ ಎದ್ದು ಕಾಣುತ್ತದೆ. ಫಿಟ್ ಆದ ಬಾಡಿ, ಮೀಸೆ, ಹೇರ್‌ಸ್ಟೈಲ್, ಬೆಂಕಿಯುಗುಳುವ ಸಂಭಾಷಣೆಯನ್ನು ಹೇಳುತ್ತಾ ಮಾಸ್ ಕೆಟಗರಿಗೆ ಸೇರಲು ಪ್ರಯತ್ನಿಸಿದ್ದಾರೆ ಮತ್ತು ಪಾತ್ರದಲ್ಲಿ ಇಷ್ಟವಾಗುತ್ತಾರೆ ಕೂಡ.
ನಾಯಕಿ ಆಶಿಕಾ ರಂಗನಾಥ್‌ಗೆ ಇಲ್ಲಿ ನಟನೆಗಿಂತ ಬೋಲ್ಡ್ ಆಗಿ, ಮುದ್ದಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ಗಮನ ಸೆಳೆಯುವ ಮತ್ತೂಂದು ಪಾತ್ರವೆಂದರೆ ಸುಮಲತಾ ಅಂಬರೀಶ್ ಅವರದು. ಅನ್ಯಾಯದ ವಿರುದ್ಧ ಹೋರಾಡುವ ವಕೀಲೆಯಾಗಿ ಹಾಗೂ ಸತ್ಯಕ್ಕಾಗಿ ಹೊಡೆದಾಡುವ ಮಗನಿಗೆ ಬೆಂಬಲ ಕೊಡುವ ತಾಯಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಲೋಕಿ, ಕೃಷ್ಣ ಹೆಬ್ಟಾಳೆ, ಅಚ್ಯುತ್ ಕುಮಾರ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತದ ಹಾಡುಗಳು ಗುನುಗುವಂತಿದೆ. ಶೇಖರ್ ಚಂದ್ರ ಛಾಯಾಗ್ರಹಣ ಅಲ್ಲಲ್ಲಿ ಕಂಗೊಳಿಸಿದೆ.
ಚಿತ್ರ: ತಾಯಿಗೆ ತಕ್ಕ ಮಗ
ನಿರ್ಮಾಣ: ಶಶಾಂಕ್ ಸಿನಿಮಾಸ್
ನಿರ್ದೇಶನ: ಶಶಾಂಕ್
ತಾರಾಗಣ: ಅಜೇಯ್ ರಾವ್, ಆಶಿಕಾ ರಂಗನಾಥ್, ಸುಮಲತಾ ಅಂಬರೀಶ್, ಲೋಕಿ, ಕೃಷ್ಣ ಹೆಬ್ಟಾಳೆ, ಸಾಧುಕೋಕಿಲ ಮತ್ತಿತರರು.
* ರವಿಪ್ರಕಾಶ್ ರೈ