ನವದೆಹಲಿ: ಕಳೆದ ವರ್ಷದ ಅಕ್ಟೋಬರ್ ನಲ್ಲಿ ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಬಂಧಿಸಲ್ಪಟ್ಟಿದ್ದ ಕೇರಳದ ಪತ್ರಕರ್ತ ಸಿದ್ಧಿಖ್ ಕಪ್ಪನ್ ತಾಯಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಮರ್ಯಾದೆ ಹತ್ಯೆ : ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ
ಆಕೆಗೆ 90 ವರ್ಷವಾಗಿದ್ದು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಕೆಯ ಅಂತ್ಯಸಂಸ್ಕಾರ ಇಂದು ಸಂಜೆ ನೆರವೇರಿಸಲಾಗಿದ್ದು, ಕಪ್ಪನ್ ಗೆ ತಾಯಿಯ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಲು ಸಾಧ್ಯವಾಗಲಿಲ್ಲ ಎಂದು ವರದಿ ವಿವರಿಸಿದೆ.
ಪತ್ರಕರ್ತ ಕಪ್ಪನ್ ಅವರ ಆರೋಗ್ಯ ಸ್ಥಿತಿಯೂ ಕಳವಳಕ್ಕೆ ಕಾರಣವಾಗಿದೆ. ಕಳೆದ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ಐದು ದಿನಗಳ ಜಾಮೀನು ನೀಡಿದ್ದು, ಈ ಸಂದರ್ಭದಲ್ಲಿ ಕಪ್ಪನ್ ತಾಯಿಯನ್ನು ಭೇಟಿಯಾಗಿದ್ದರು. ಕಪ್ಪನ್ ತನ್ನ ಸಂಬಂಧಿಕರು ಮತ್ತು ತಾಯಿಗೆ ಚಿಕಿತ್ಸೆ ನೀಡುವ ವೈದ್ಯರ ಜತೆ ಮಾತ್ರ ಮಾತನಾಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿತ್ತು.
ಪತ್ರಕರ್ತ ಕಪ್ಪನ್ ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಉತ್ತರಪ್ರದೇಶ ಜೈಲಿನಲ್ಲಿ ಕಪ್ಪನ್ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವುದಾಗಿ ವರದಿ ತಿಳಿಸಿದೆ. ಕಪ್ಪನ್ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಏಮ್ಸ್ ಅಥವಾ ದೆಹಲಿಯ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು.