ಹೊಸದಿಲ್ಲಿ: ಟ್ವಿಟರ್, ಲಿಂಕ್ಡ್ಇನ್, ಡ್ರಾಪ್‌ಬಾಕ್ಸ್‌ನಂಥ ಸೈಟ್‌ಗಳಿಂದ ಸೋರಿಕೆಯಾದ ಬರೋಬ್ಬರಿ 2,600 ಕೋಟಿ ದಾಖಲೆಗಳನ್ನು ಒಳಗೊಂಡ ದತ್ತಾಂಶಗಳು ಅಸುರಕ್ಷಿತ ಪೇಜ್‌ವೊಂದರಲ್ಲಿ ಪತ್ತೆಯಾಗಿವೆ. “ಇದು ಈವರೆಗೆ ನಡೆದ ಎಲ್ಲ ಸೋರಿಕೆಗಳನ್ನೂ ಮೀರಿಸಿದ ಬೃಹತ್ ದತ್ತಾಂಶ ಸೋರಿಕೆ’ ಎಂದು ಫೋರ್ಬ್ಸ್ ವರದಿ ಮಾಡಿದೆ.
ವಿವಿಧ ಸೈಟ್‌ಗಳಿಂದ ಕಳವುಗೈಯಲಾದ ಸೂಕ್ಷ್ಮ ಮಾಹಿತಿಗಳನ್ನು ಇದರಲ್ಲಿದ್ದು, ಇವುಗಳ ಒಟ್ಟು ಗಾತ್ರ 12 ಟೆರಾ ಬೈಟ್ಸ್‌ನಷ್ಟು ಎಂದು ಸೆಕ್ಯೂರಿಟಿ ಡಿಸ್ಕವರಿ ಆ್ಯಂಡ್ ಸೈಬರ್‌ನ್ಯೂಸ್ ನ ಭದ್ರದ ಸಂಶೋಧಕರು ಹೇಳಿದ್ದಾರೆ.
ಈ ಮಾಹಿತಿಗಳನ್ನು ದತ್ತಾಂಶ ಬ್ರೋಕರ್‌ಗಳು ಸಂಗ್ರಹಿಸಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಸೋರಿಕೆಯಾದ ದತ್ತಾಂಶಗಳ ಪೈಕಿ ಚೀನದ ಮೆಸೇಜಿಂಗ್ ದಿಗ್ಗಜ ಟೆನ್ಸೆಂಟ್ ಮತ್ತು ಸಾಮಾಜಿಕ ಜಾಲತಾಣ ವೈಬೋ ಚಂದಾದಾರರ ಮಾಹಿತಿಯೂ ಸೇರಿದೆ. ಇದಲ್ಲದೆ ಟ್ವಿಟರ್, ಲಿಂಕ್ಡ್ಇನ್, ಡ್ರಾಪ್‌ಬಾಕ್ಸ್, ಅಡೋಬ್, ಕ್ಯಾನ್ವಾ, ಟೆಲಿಗ್ರಾಂನ ದಾಖಲೆಗಳೂ ಒಳಗೊಂಡಿವೆ. ಹಲವರ ಯೂಸರ್‌ನೆàಮ್ ಮತ್ತು ಪಾಸ್‌ವರ್ಡ್‌ಗಳೂ ಇದರಲ್ಲಿವೆ. ಇದನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಸೈಬರ್ ದಾಳಿ, ಐಡೆಂಟಿಟಿ ಕಳ್ಳತನ, ಫಿಶಿಂಗ್, ವೈಯಕ್ತಿಕ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆಯಿದೆ.
ಸಮಾಧಾನಕರ ವಿಚಾರವೆಂದರೆ, ಸೋರಿಕೆಯಾದ ದಾಖಲೆಗಳ ಪೈಕಿ ಕೆಲವಷ್ಟೇ ಹೊಸದಾಗಿದ್ದು, ಉಳಿದವು ಈ ಹಿಂದೆ ಸೋರಿಕೆಯಾಗಿದ್ದ ದಾಖಲೆಗಳ ಸಂಗ್ರಹವಾಗಿದೆ ಎಂದೂ ಫೋರ್ಬ್ಸ್ ವರದಿ ತಿಳಿಸಿದೆ.
2019ರಲ್ಲಿ ಸುಮಾರು 100 ಕೋಟಿ ದಾಖಲೆ ಗಳನ್ನು ಇದೇ ರೀತಿ ಸೋರಿಕೆ ಮಾಡಲಾಗಿತ್ತು. ಅದನ್ನು ಆವರೆಗಿನ ಅತಿದೊಡ್ಡ ಪ್ರಮಾಣದ ದತ್ತಾಂಶ ಸೋರಿಕೆ ಎಂದು ಪರಿಗಣಿಸಲಾಗಿತ್ತು.