Advertisement
ಅನಾಥಾಲಯದಲ್ಲಿ ಬೆಳೆದ ಹುಡುಗನ ತಂದು ಬೆಳೆಸಿದ ದಂಪತಿ ಅವನಿಗೆ ಉತ್ತಮಕುಮಾರ್ ಎಂದು ಹೆಸರಿಟ್ಟರು. ಹೆಸರಿಗೆ ತಕ್ಕ ಹಾಗೆ ಉತ್ತಮನಾಗಲಿಲ್ಲ. ಕುಡಿತದ ಚಟ ನೆತ್ತಿಗೇರಿಸಿಕೊಂಡಿದ್ದ ಅವನು ತಾಯಿಗೆ ಬೆಂಕಿ ಹಚ್ಚಿ ಜೈಲು ಸೇರಿದ್ದಾನೆ. ಆಳೆತ್ತರಕ್ಕೆ ಬೆಳೆಸಿದ ಸಾಕು ಮಗ ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟು ಹೋದ ನೈಜ ಘಟನೆಯಿದು.
Related Articles
Advertisement
ಆಸ್ಪತ್ರೆ ಸೇರಿದ್ದ ಪತ್ನಿಯ ಸ್ಥಿತಿಗೆ ಜಾರಿದ್ದ ಕಣ್ಣೀರಿನ ಪರಿಣಾಮ ಆತನ ಕಣ್ಣು ಕೆಂಪಾಗಿತ್ತು. ಎದುರುಗಡೆಯ ಟೇಬಲ್ ಮೇಲೆ ಕುಳಿತುಕೊಳ್ಳುವಂತೆ ಸೂಚಿಸಿದ ಇನ್ಸ್‌ಪೆಕ್ಟರ್, ಒಂದು ಗ್ಲಾಸ್ ನೀರು ಕೊಡುವಂತೆ ಸೂಚಿಸಿದರು. ನೀರು ಕುಡಿದು ಸುಧಾರಿಸಿಕೊಳ್ಳುತ್ತಲೇ, ನಿಧಾನಕ್ಕೆ ಮಾತು ಆರಂಭಿಸಿದ ಇನ್ಸ್‌ಪೆಕ್ಟರ್, ” ನಿಮ್ಮ ಪತ್ನಿ ಹೇಗಿದ್ದಾರೆ. ಏನಾಗಲ್ಲ ಸುಮ್ಮನಿರಿ.. ಹುಶಾರಾಗ್ತಾರೆ ಎಂಬ ಸಮಾಧಾನದ ಮಾತುಗಳನ್ನಾಡುತ್ತ ಸಂತೈಸುವ ಯತ್ನ ಮಾಡಿದರು.
ಇದ್ದಕ್ಕಿದ್ದಂತೆ ತಲೆ ಮೇಲೆತ್ತಿದ್ದ ರಾಮಕೃಷ್ಣ,” ಏನಾದರೂ ಆಗಲಿ ಸರ್… ಬಂಗಾರದಂತಹ ಪತ್ನಿಗೆ ಬೆಂಕಿ ಹಚ್ಚಿ, ಸುಂದರ ಕುಟುಂಬಕ್ಕೆ ಕೊಳ್ಳಿ ಇಟ್ಟ ನನ್ನ ಮಗನನ್ನು ಬಿಡಬೇಡಿ. ಜೈಲಿಗೆ ಹಾಕಿಬಿಡಿ ಆತ ನಮ್ಮ ಪಾಲಿಗೆ ಬದುಕಿದ್ದರೂ ಸತ್ತಂತೆ ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟರು.
ಮಗನ ವಿರುದ್ಧ ರಾಮಕೃಷ್ಣ ಅವರ ಆಕ್ರೋಶ, ಸಿಟ್ಟು ಕಂಡು ಇನ್ಸ್‌ಪೆಕ್ಟರ್ ದೂರು ದಾಖಲಿಸಿಕೊಂಡು ಕ್ರಮ ಜರುಗಿಸುತ್ತೇವೆ ಎಂದು ಸಮಾಧಾನ ಪಡಿಸುತ್ತಾ, ನಿಮ್ಮ ಮಗ ಹೇಗೆ ಈ ರೀತಿ ಬದಲಾದ, ಯಾಕಿಷ್ಟೊಂದು ಕ್ರೂರಿಯಾದ ಎಂಬ ಪ್ರಶ್ನೆಗೆ ದಿಗ್ಗನೆ ಉತ್ತರಿಸಿದ ರಾಮಕೃಷ್ಣನ ”ಕುಡಿತದ ಚಟಕ್ಕೆ ಸಂಸಾರವೇ ನರಕವಾಗಿಬಿಟ್ಟಿತು ಎಂದರು. ಸರಿ ಎಂದು ಘಟನೆಯ ಬಗ್ಗೆ ವಿವರವಾದ ವರದಿ ಪಡೆದುಕೊಂಡು ದೂರು ಸ್ವೀಕರಿಸಿದ ಪೊಲೀಸರು ಕ್ರಮ ಜರುಗಿಸುವ ಭರವಸೆ ನೀಡಿದರು.
ದೂರು ನೀಡಿದ ಬಳಿಕ ರಾಮಕೃಷ್ಣ ಮನೆಗೆ ಹೊರಟು ಹೋಗಿದ್ದರು. ಆದರೆ, ಪ್ರಕರಣದ ಆರೋಪಿ ಉತ್ತಮ್‌ಕುಮಾರ್ ಬಗ್ಗೆ ಮಾಹಿತಿ ಕೆದಕಿದ ಪೊಲೀಸರು ಕ್ಷಣಕಾಲ ದಿಗ್ಭ್ರಾಂತರಾಗಿ ಬಿಟ್ಟಿದ್ದರು. ಉತ್ತಮ್ ಕುಮಾರ್ ಅಸಲಿಗೆ ರಾಮಕೃಷ್ಣ ಹಾಗೂ ಭಾರತಿ ಅವರ ಸ್ವಂತ ಮಗನಾಗಿರಲಿಲ್ಲ. ಅನಾಥಾಶ್ರಮದಲ್ಲಿದ್ದ ಉತ್ತಮ್‌ನನ್ನು ಆತನ 8ನೇ ವಯಸ್ಸಿನಲ್ಲಿ ಕರೆತಂದು ಸಾಕಿದ್ದರು. ಖಾಸಗಿ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ರಾಮಕೃಷ್ಣ ದಂಪತಿಗಳಿಗೆ ಮಕ್ಕಳಿರಲಿಲ್ಲ. ಹೀಗಾಗಿ ಮಗುವೊಂದನ್ನು ಸಾಕಿಕೊಳ್ಳುವ ನಿರ್ಧಾರ ಮಾಡಿದ್ದರು. ಅದರ ಫಲವಾಗಿಯೇ ಉತ್ತಮಕುಮಾರ್ ಅವರ ಮನೆ ಸೇರಿದ.
ಎರಡನೇ ತರಗತಿ ಓದುತ್ತಿದ್ದ ಉತ್ತಮ್ ತಂದೆ ತಾಯಿ ಪ್ರೀತಿ ಸಿಕ್ಕಿತು. ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾಭ್ಯಾಸ ಸೇರಿದಂತೆ ಬಯಸಿದ್ದೆಲ್ಲವೂ ಸಿಕ್ಕಿತು. ಆದರೆ. ಹೈಸ್ಕೂಲು ಮೆಟ್ಟಿಲು ಹತ್ತುವಷ್ಟರಲ್ಲಿ ಆತನ ತಲೆಗೆ ವಿದ್ಯೆ ಹತ್ತಲಿಲ್ಲ. ಶಾಲೆ ಬಿಟ್ಟುಬಿಟ್ಟ.
ಇರುವುದೊಬ್ಬ ಮಗ ಓಡಾಡಿಕೊಂಡಿರಲಿ ಎಂದು ಪೋಷಕರು ಸುಮ್ಮನಾದರು. ಆತನ ಜೀವನೋಪಾಯಕ್ಕೆ ಹಣ ಬರುವಂತೆ ಎರಡು ಮನೆ ಕಟ್ಟಿಸಿ ತಿಂಗಳಿಗೆ 25 ಸಾವಿರ ಬಾಡಿಗೆ ಬರುವಂತೆ ಮಾಡಿಕೊಟ್ಟಿದ್ದರು. ಆದರೆ, ಉತ್ತಮ್ ಪುಂಡ ಸ್ನೇಹಿತರ ಜತೆ ಸೇರಿ ಕುಡಿತ ಚಟ ಅಂಟಿಸಿಕೊಂಡಿದ್ದ. ತಾಯಿ ಎಷ್ಟು ಹಣ ನೀಡಿದರೂ ಕುಡಿತ, ಮೋಜಿಗೆ ಸಾಲುತ್ತಿರಲಿಲ್ಲ.
ತಾಯಿಗೆ ಬೆಂಕಿ ಹಾಕಿಬಿಟ್ಟ: ಡಿ.6ರಂದು ರಾತ್ರಿ 9 ಗಂಟೆ ಸುಮಾರು ಕುಡಿತದ ದಾಸನಾಗಿದ್ದ ಉತ್ತಮ್, ತಾಯಿ ಭಾರತಿಯವರ ಬಳಿ ಹಣ ಕೇಳಿದ. ಮಗನ ಈ ಚಟದಿಂದ ನೊಂದುಹೋಗಿದ್ದ ಅವರು, ಹಣ ನನ್ನ ಬಳಿಯಿಲ್ಲ. ನಿನ್ನ ಕುಡಿತದ ಚಟ ಮನೆ ಹಾಳು ಮಾಡಿದೆ ಎಂದು ಬೈದಿದ್ದಾರೆ. ಇದನ್ನೆಲ್ಲ ಗಮನಿಸುತ್ತಿದ್ದ ರಾಮಕೃಷ್ಣ ಬೇರೆ ಏನೋ ಕೆಲಸ ಮಾಡಿಕೊಂಡಿದ್ದರು. ತಾಯಿ ಜತೆ ಜಗಳವಾಡಿಕೊಂಡಿದ್ದ ಉತ್ತಮ್ ಕುಮಾರ್, ಸೀದಾ ಮೂರನೇ ಮಹಡಿಯಿಂದ ಕೆಳಗಡೆ ಇಳಿದವನೇ ಅರ್ಧ ಬಾಟಲ್‌ನಲ್ಲಿ ಪೆಟ್ರೋಲ್ ತಂದು ತಂದೆ ತಾಯಿ ಮುಖ ಹಾಗೂ ಮೈಮೇಲೆ ಚೆಲ್ಲಿ ಲೈಟರ್ ಹೊತ್ತಿಸಿಬಿಟ್ಟಿದ್ದ. ನೋಡ ನೋಡುತ್ತಿದ್ದಂತೆ ಭಾರತಿ ಬೆಂಕಿಯ ಕೆನ್ನಾಲಿಗೆಯಲ್ಲಿ ನರಳಾಡುತ್ತಿದ್ದರು. ಪತ್ನಿಯನ್ನು ರಕ್ಷಿಸಲು ರಗ್ಗಿನಿಂದ ಬೆಂಕಿ ಆರಿಸಿ ಆಸ್ಪತ್ರೆಗೆ ಕರೆತಂದಿದ್ದರು. ಬೆಂಕಿ ಹತ್ತಿಸಿದ್ದ ಮಗ ಪರಾರಿಯಾಗಿದ್ದ. ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದ ಭಾರತಿ ಅವರು 15ದಿನಗಳ ಜೀವನ್ಮರಣ ಹೋರಾಟ ನಡೆಸಿ ಉಸಿರು ಚೆಲ್ಲಿದ್ದರು.
ಅನಾಥಾಲಯದಿಂದ ಬಂದವ ಜೈಲಿಗೆ
ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಠಾಣೆ ಪೊಲೀಸರು, ಉತ್ತಮ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತಾಯಿ ಕೊಂದ ಆರೋಪದಲ್ಲಿ ಜೈಲುಕಂಬಿ ಎಣಿಸುತ್ತಿರುವ ಉತ್ತಮ್ ಜೈಲಿನಲ್ಲಿ ಕಂಬಿ ಎಣಿಸುತ್ತಾ ಕುಡಿತದ ಚಟದಿಂದ ಆದ ಅನಾಹುತಕ್ಕೆ ಮರುಗುತ್ತಿದ್ದಾನೆ. ಆದರೆ, ದುಃಖ ಕೇಳಲು ಅಲ್ಲಿರುವುದು ತಾಯಿಯಲ್ಲ ನಿರ್ಜೀವ ಜೈಲಿನ ಕಂಬಿಗಳು.
ಮಂಜುನಾಥ ಲಘುಮೇನಹಳ್ಳಿ