Advertisement

ಅಮೆರಿಕದಲ್ಲೂ ಅಮ್ಮ ಅಮ್ಮನೇ

12:30 AM Jan 25, 2019 | |

ಎರಡು ವರ್ಷದ ಹಿಂದೆ ಅಮೆರಿಕ ಪ್ರವಾಸ ಕೈಗೊಂಡಿದ್ದೆ. ಅತ್ಯಾಧುನಿಕ ಅಮೆರಿಕದಲ್ಲಿ ಭಾರತದಲ್ಲಿರುವಂತೆ ಸುಭದ್ರ ಕೌಟುಂಬಿಕ ಜೀವನ ಇಲ್ಲ ಎಂದು ಅದುವರೆಗೂ ನಾನು ನಂಬಿದ್ದೆ. ಅಲ್ಲಿ ಎರಡೂವರೆೆ ತಿಂಗಳು ಇದ್ದು ಬಂದ ಮೇಲೆ ಪಾಶ್ಚಾತ್ಯ ಸಂಸ್ಕೃತಿಗೆ ಸಂಬಂಧಿಸಿದ ನನ್ನ ಅನೇಕ ನಂಬಿಕೆಗಳು ಬದಲಾದವು. ಅವುಗಳಲ್ಲಿ ಮುಖ್ಯವಾದುದು ಮನುಷ್ಯ ಸಂಬಂಧಗಳು ಹಾಗೂ ದಾಂಪತ್ಯದ ಕುರಿತ ನನ್ನ ಪೂರ್ವಗ್ರಹಗಳು. 

Advertisement

    ಅಮೆರಿಕದಲ್ಲಿ ನಾನು ಇದ್ದದ್ದು ಕ್ಯಾಲಿಫೋರ್ನಿಯಾದ ಕುಪರ್ಟಿನೋ ಎಂಬ ಊರಲ್ಲಿ. ನನ್ನ ತಂಗಿ ಅಲ್ಲಿದ್ದಾಳೆ. ಅವಳ ಮನೆಗೆ ಸಮೀಪ ಇರುವ ಉದ್ಯಾನದಲ್ಲಿ ನಾನು ಪ್ರತಿದಿನ ಸಂಜೆ ವಾಕಿಂಗ್‌ ಹೋಗುತ್ತಿದ್ದೆ. ಅಲ್ಲಿ ಮಾತಾಡಲು ದೇಶ -ವಿದೇಶಗಳ ಮಂದಿ ಸಿಗುತ್ತಿದ್ದರು. ಬಾಸ್ಕೆಟ್‌ ಬಾಲ್‌, ಟೆನ್ನಿಸ್‌ ಆಡುವ ಅವಕಾಶವೂ ಇತ್ತು. ಈಜು ಕೊಳವೂ ಇತ್ತು. ನಾನು ಎಡತಾಕಿದವರನ್ನೆಲ್ಲ ಮಾತನಾಡಿಸಿ, ಮನೆಗೆ ಬರುವಾಗ ರಾತ್ರಿ ಎಂಟು ಗಂಟೆ ಮೀರುತ್ತಿತ್ತು. ಒಂದೇ ಒಂದು ರಾತ್ರಿಯೂ ನನಗೆ ಬೀದಿ ಕಾಮಣ್ಣಗಳು ಸಿಗಲಿಲ್ಲ. ಕುತ್ತಿಗೆಯಲ್ಲಿ ಎಂಟು ಪವನಿನ ಕರಿಮಣಿ ಸರ ನೇತಾಡುತ್ತಿದ್ದರೂ ಒಬ್ಬರೂ ಅದನ್ನು ಎಗರಿಸಲು ಬರಲಿಲ್ಲ. ನಮ್ಮೂರಲ್ಲೋ ಮನೆಯಿಂದ ಹೊರಗೆ ಅಡಿಯಿಡಲು ರಾತ್ರಿ ಬಿಡಿ, ಮುಸ್ಸಂಜೆ ಹೊತ್ತಲ್ಲೇ  ಭಯವಾಗುತ್ತದೆ. 

ನಾನು ಅಮೆರಿಕಲ್ಲಿ ಇದ್ದಷ್ಟು ಸಮಯವೂ ಆ ದೇಶದಲ್ಲಿ ಒಂದೇ ಒಂದು ಅತ್ಯಾಚಾರವಾದ ಸುದ್ದಿ ನನ್ನ ಕಿವಿಗೆ ಬೀಳಲಿಲ್ಲ. ದಾರಿಯಲ್ಲಿ ನಡೆಯುವಾಗ ಅಥವಾ ಯಾವುದಾದರೂ ಸಂದರ್ಭದಲ್ಲಿ ಅಕಸ್ಮಾತ್‌ ನನ್ನ ಮೈ ಗಂಡಸರ ಮೈಗೆ ಮುಟ್ಟಿಹೋದರೆ ಅವರೇ ಸಾರಿ ಹೇಳಿ ದೂರ ಸರಿಯುತ್ತಿದ್ದರು. ಗಾಂಧೀಜಿ ಬಯಸಿದ ಸ್ತ್ರೀಸ್ವಾತಂತ್ರ್ಯ ಅಮೆರಿಕದಲ್ಲಿ ಸಾಕಾರಗೊಂಡಿದೆ ಅನಿಸಿತ್ತು. 

ಅಲ್ಲಿ ನಿತ್ಯವೂ ಇಂಟರ್‌ನೆಟ್‌ನಲ್ಲಿ ಉದಯವಾಣಿ ಇತ್ಯಾದಿ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಅದರಲ್ಲಿ ನಮ್ಮ ದೇಶದಲ್ಲಿ ನಡೆವ ಅತ್ಯಾಚಾರ, ಅಸಹಿಷ್ಣುತೆ ಸುದ್ದಿಗಳೇ ಕಣ್ಣಿಗೆ ರಾಚುತ್ತಿದ್ದವು. ಅಮೆರಿಕದಲ್ಲಿ ಬೇರೆ ಬೇರೆ ದೇಶದ, ಬೇರೆ ಬೇರೆ ಭಾಷೆ, ಧರ್ಮದ ಜನರಿದ್ದರೂ ಶಾಂತಿ, ಸೌಹಾರ್ದ ಮತ್ತು ಸಾಮರಸ್ಯದಿಂದ ಇರುವುದನ್ನು ಕಂಡೆ. ಗೋಮಾಂಸ ಹಾಗೂ ಹಂದಿ ಮಾಂಸವನ್ನು ಜೊತೆಜೊತೆಯಲ್ಲಿಯೇ ಇಟ್ಟು ಮಾರುವುದನ್ನೂ ನೋಡಿದೆ. ಉದ್ಯೋಗ ನಿಮಿತ್ತ ಅಲ್ಲಿಗೆ ಹೋದವರು ಅಲ್ಲಿಯೇ ನೆಲೆ ನಿಲ್ಲಲು ಒಂದು ಕಾರಣ ಅಲ್ಲಿನ ಈ ಸಹಿಷ್ಣು ವಾತಾವರಣ ಕಾರಣ ಇರಬಹುದೇನೊ? 

    ಅಲ್ಲಿ ನನ್ನ ಎದುರಿಗೆ ಸಿಕ್ಕ ಅಪರಿಚಿತರೂ ನನ್ನನ್ನು ನೋಡಿ ಜನ್ಮಾಂತರಗಳ ಸಂಬಂಧವೋ ಎಂಬಂತೆ ನಸುನಕ್ಕು , “ಹಾಯ್‌’, “ಹಲೋ’ ಎನ್ನುತ್ತಿದ್ದರು. ಒಮ್ಮೆ ಒಂದು ಪೆಟ್ರೋಲ್‌ ಬಂಕಿನಲ್ಲಿ ಪೆಟ್ರೋಲ್‌ ತುಂಬಿಸಲು ಬಂದಿದ್ದ ಐದು ಕೋಟಿ ಬೆಲೆಬಾಳುವ ಕಾರನ್ನು ನಾನು ಕುತೂಹಲದಿಂದ ದಿಟ್ಟಿಸಿದ್ದಕ್ಕೆ – ಅಪೇಕ್ಷೆ ಇದ್ದರೆ ಕಾರಿನ ಒಳಗೂ ನೋಡಬಹುದು, ಕುಳಿತುಕೊಳ್ಳಬಹುದು ಎಂದು ಹೇಳುತ್ತ ಕಾರಿನ ಮಾಲೀಕ ಬಾಗಿಲು ತೆರೆದಿದ್ದ. 

Advertisement

ಪಾಶ್ಚಾತ್ಯರಲ್ಲಿ ದಾಂಪತ್ಯದ ಆಯುಸ್ಸು ಕಡಿಮೆ ಎಂದು ನಾವು ಮಾತನಾಡಿಕೊಳ್ಳುತ್ತೇವೆ. ಆದರೆ, ಗಂಡ-ಹೆಂಡತಿ ಕೊನೆತನಕ ಜೊತೆಯಾಗಿಯೇ ಇರುವವರು ಅಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ನನಗೆ ಒಬ್ಬ ವೃದ್ಧ ಅಮೆರಿಕನ್‌ ದಂಪತಿಗಳ ಪರಿಚಯ ಪಾರ್ಕಿನಲ್ಲಿ ಆಗಿತ್ತು. ನಮಗೆ ನಾಲ್ಕು ಜನ ಮಕ್ಕಳು. ಮೊಮ್ಮಕ್ಕಳೂ ಆಗಿವೆ. ಮಕ್ಕಳು ಕೆಲಸ ನಿಮಿತ್ತ ದೂರ ಇದ್ದಾರೆ. ನಾವು ಸಮಯ ಸಿಗುವಾಗ ಅವರು ಇರುವಲ್ಲಿಗೆ ಹೋಗುತ್ತೇವೆ. ಅವರಿಗೆ ಸಮಯ ಸಿಕ್ಕಾಗ ಇಲ್ಲಿಗೆ ಬರುತ್ತಾರೆ ಎಂದು ಹೇಳಿದರು. ನಾವು ತುಂಬ ಸಲ ಒಟ್ಟಿಗೆ ಊಟ ಮಾಡಿದೆವು. ಅವರ ಆ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಇನ್ನೊಮ್ಮೆ ಒಂದು ಲೈಬ್ರರಿಯಲ್ಲಿ ಒಬ್ಬ ವೃದ್ಧ ತನ್ನ ಹತ್ತಿರ ಕೂಡಿಸಿಕೊಂಡು ಒಬ್ಬ ವೃದ್ಧೆಗೆ ಕೈತುತ್ತು ನೀಡುತ್ತಿದ್ದ. ಎಲ್ಲವೂ ಅವಳ ಹೊಟ್ಟೆಗೆ ಹೋಗುತ್ತಿರಲಿಲ್ಲ. ಸ್ವಲ್ಪ$ ಬಾಯಿಯಿಂದ ಕೆಳಗೆ ಬೀಳುತ್ತಿತ್ತು. ಆದರೂ ಬೇಸರಿಸದೆ ತಿನ್ನಿಸುತ್ತಿದ್ದ. ಕೊನೆಗೆ ಅವಳ ಮುಖವನ್ನು ಟಿಶ್ಯೂ ಪೇಪರಿನಿಂದ ಒರೆಸಿ ಕೈ ಹಿಡಿದು ನಡೆಸುತ್ತ ಹೊರಗೆ ಕಾರಿನ ಹತ್ತಿರ ಕರೆದುಕೊಂಡು ಹೋದ. ನಾನು ಅವರ ಹಿಂದೆಯೇ ಹೋಗಿ ವೃದ್ಧನನ್ನು ಮಾತಾಡಿಸಿದೆ. “ಈಕೆ ನನ್ನ ಹೆಂಡತಿ. ಎರಡು ವರ್ಷಗಳ ಹಿಂದೆ ಅವಳಿಗೆ ಮರೆವಿನ ಕಾಯಿಲೆ ಶುರುವಾಗಿದೆ. ಊಟ ಮಾಡಲೂ ಅವಳಿಗೆ ಗೊತ್ತಾಗುವುದಿಲ್ಲ. ಮಗುವಿನಂತೆ ಅವಳನ್ನು ನೋಡಬೇಕಾಗುತ್ತದೆ’ ಎಂದ. ಅವರದೂ ಏಕ-ತಾರಿ. ಅವರ ವೈವಾಹಿಕ ಜೀವನಕ್ಕೆ ಐವತ್ತು ವರ್ಷ ಕಳೆದಿದೆಯಂತೆ. 

ಅಲ್ಲಿನ ವೃದ್ಧರು ನನಗೆ ವಯಸ್ಸಾಯಿತು ಎಂದು ಮೂಲೆ ಹಿಡಿದು ಕೂರುವುದಿಲ್ಲ. ವೃದ್ಧರೂ ಉಲ್ಲಾಸದಿಂದ ಕಾರು ಚಲಾಯಿಸುತ್ತಾರೆ. ನಿಗದಿಪಡಿಸಿದ ಸಮಯದಲ್ಲಿ ಉದ್ಯಾನದಲ್ಲಿ ಸೇರಿ ಡ್ಯಾನ್ಸ್‌ ಮಾಡುತ್ತಾರೆ. ಪ್ರವಾಸ ಹೋಗುತ್ತಾರೆ. ಲೈಬ್ರರಿಗೆ ಹೋಗಿ ಹೊರಲಾರದಷ್ಟು ಪುಸ್ತಕ ಮನೆಗೆ ತೆಗೆದುಕೊಂಡು ಹೋಗಿ ಓದುತ್ತಾರೆ. ಒಟ್ಟಿನಲ್ಲಿ ಬದುಕಿನ ಕೊನೆಯ ದಿನಗಳನ್ನೂ ಆನಂದದಿಂದ ಕಳೆಯುತ್ತಾರೆ. ಅಪವಾದಗಳಿರಬಹುದು. ನನಗೆ ನೋಡಲು ಸಿಗಲಿಲ್ಲ. ನನ್ನ ತಂಗಿಯ ಮಗ ಮ್ಯಾಥ್ಸ್ ಒಲಂಪಿಯಾಡ್‌ ಎಂಬ ತರಗತಿಗೆ ಹೋಗುತ್ತಾನೆ. ಅದನ್ನು ಕಲಿಸುವವರು ಒಬ್ಬ ಅಮೆರಿಕನ್‌ ಶಿಕ್ಷಕರು. ಅವರು ಪ್ರತಿ ಶನಿವಾರ ರಾತ್ರಿ 9.30ರ ಕ್ಲಾಸ್‌ ಮುಗಿಸಿದ ಮೇಲೆ, ಮಧ್ಯರಾತ್ರಿಯ ಚಳಿಯನ್ನೂ ಲೆಕ್ಕಿಸದೆ 350 ಮೈಲು ದೂರ ಇರುವ ವೃದ್ಧ ತಂದೆ, ತಾಯಿಯನ್ನು ನೋಡಲು ಹೋಗುತ್ತಾರೆ. ಭಾನುವಾರವಿಡೀ ಅವರ ಜೊತೆ ಕಳೆದು ಸೋಮವಾರ ಹೆಂಡತಿ, ಮಕ್ಕಳು ಇರುವ ತನ್ನ ಮನೆಗೆ ಬರುತ್ತಾರೆ. 

ಡೈವೋರ್ಸ್‌ ಆದ ಹಲವು ಗಂಡು-ಹೆಣ್ಣುಗಳನ್ನೂ ಭೇಟಿ ಮಾಡಿದ್ದೆ. ಅವರು ಯಾರೂ ತಾವು ಬಿಟ್ಟ ಸಂಗಾತಿಯನ್ನು ದೂರಲಿಲ್ಲ. ಹೊಂದಾಣಿಕೆಯಾಗಲಿಲ್ಲ ಎಂದಷ್ಟೇ ಹೇಳಿದ್ದರು. ಮನಸ್ಸು ಮುರಿದ ಸಂಗಾತಿಯೊಂದಿಗೆ ಮುಖವಾಡ ಹಾಕಿ ಬದುಕುವುದಕ್ಕಿಂತ ಅದೇ ಒಳ್ಳೆಯದು ಅನಿಸಿತು.

“ಕ್ಯಾಲಿಫೋರ್ನಿಯಾ ಕ್ಯಾವರ್ನ್’ ಎಂಬ ವಿಶಾಲ ಕತ್ತಲ ಗುಹೆ ನೋಡಲು ಒಮ್ಮೆ ನಾನು ತಂಗಿ ಮತ್ತು ಅವಳ ಗಂಡ-ಮಕ್ಕಳ ಜೊತೆ ಹೋಗಿದ್ದೆ. ಈ ಗುಹೆ ಹೊರಗಿನಿಂದ ಪ್ರವೇಶಿಸುವಾಗ ಒಬ್ಬರು ಮಾತ್ರ ಹೋಗುವಷ್ಟು ಕಿರಿದಾಗಿರುವುದು. ಒಳ ಹೋದಂತೆ ವಿಸ್ತಾರವಾಗುತ್ತದೆ. ಗುಹೆಯ ಒಳಗೆ ಇನ್ನೂ ಕೆಲವು ಗುಹೆಗಳು ಇವೆ. ಗೈಡ್‌ನ‌ ಸಹಾಯ ಇಲ್ಲದೆ ಇದರ ಒಳಗೆ ಹೋಗಲು ಸಾಧ್ಯವಿಲ್ಲ; ಬಿಡುವುದೂ ಇಲ್ಲವೆನ್ನಿ. ನಾವು ಹೋದ ದಿನ ಭಾನುವಾರ. ಅಂದು ಒಬ್ಬ ಗೈಡ್‌ನ‌ ಹೊರತಾಗಿ ಉಳಿದವರು ರಜೆ ಮಾಡಿದ್ದರು. ಅವನೂ ಮಧ್ಯಾಹ್ನ ಮೂರು ಗಂಟೆಯ ನಂತರ ರಜೆ ಹಾಕಿದ್ದ. ನಾವು ಅಲ್ಲಿಗೆ ತಲಪುವಾಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ನಾವು ಕಟ್ಟಿಕೊಂಡು ಹೋದ ಬುತ್ತಿ ಬಿಚ್ಚಿ ತಿನ್ನುವಾಗ ಮತ್ತೆ ಅರ್ಧ ಗಂಟೆ ಕಳೆದುಹೋಯ್ತು. ಆ ಗೈಡ್‌ “ಈ ಸ್ವಲ್ಪ$ ಸಮಯದಲ್ಲಿ ನನಗೆ ಗುಹೆ ತೋರಿಸಲು ಸಾಧ್ಯವಿಲ್ಲ. ನಾಳೆ ಬನ್ನಿ. ಈಗ ನಾನು ಹೆಂಡತಿ, ಮಕ್ಕಳ ಜೊತೆ ಹೊರಗೆ ಹೋಗುವವನಿದ್ದೇನೆ. ಹಾಗೆಂದು ಅವರಿಗೆ ಮಾತು ಕೊಟ್ಟಿದ್ದೇನೆ’ ಎಂದ. “ಗುಹೆ ನೋಡಲೆಂದೇ 300 ಕಿ.ಮೀ. ದೂರದಿಂದ ಬಂದಿದ್ದೇವೆ. ಮತ್ತೆ ಬರಲು ಸಾಧ್ಯವಾಗುವುದಿಲ್ಲ. ದಯವಿಟ್ಟು ಈಗಲೇ ತೋರಿಸಿ’ ಎಂದು ಗೋಗರೆದೆವು. ಕೊನೆಗೂ ಅವನು ಒಪ್ಪಿ$ಗುಹೆಯೊಳಗೆ ಕರೆದುಕೊಂಡು ಹೋದ. ಒಳಗೆ ಹೋದದ್ದೇ ತಡ ಆ ಗುಹೆಯನ್ನು ಕಂಡುಹಿಡಿದವರು ಯಾರು? ಯಾವಾಗ? ಹೇಗೆ? ಇತ್ಯಾದಿ ಎಲ್ಲ ವಿವರಗಳನ್ನು ತುಂಬ ಶ್ರದ್ಧೆಯಿಂದ ನಮಗೆ ವಿವರಿಸತೊಡಗಿದ. ಗುಹೆಯ ಎಲ್ಲ ಭಾಗಗಳನ್ನು ತೋರಿಸಿದ. ಸಮಯ ಸರಿದದ್ದೇ ಗೊತ್ತಾಗಲಿಲ್ಲ. ನಾವು ಗುಹೆಯಿಂದ ಹೊರ ಬರುವಾಗ ಸಂಜೆ ಗಂಟೆ ಐದು! ನಮ್ಮೆದುರು ಗುಹೆಯ ಬಾಗಿಲಲ್ಲಿ ಒಬ್ಬ ಅಮೆರಿಕನ್‌ ಹೆಣ್ಣುಮಗಳು ನಿಂತಿದ್ದಳು. ಕಣ್ಣಿಂದ ಇನ್ನೇನು ಹನಿಗಳು ಉದುರುತ್ತವೆ ಎಂಬಂತೆ ಅವಳ ಮೊಗ! ಅವಳ ಸೊಂಟದಲ್ಲಿ ಎದೆಗೆ ಅವಚಿಕೊಂಡಿರುವ ಸುಮಾರು ಎರಡು ತಿಂಗಳ ಕೂಸು, ಕೈ ಹಿಡಿದಿರುವ ಸುಮಾರು ನಾಲ್ಕು ವರ್ಷ ಪ್ರಾಯದ ಇನ್ನೊಂದು ಮಗು. ಅವನು ಅವಳ ಬಳಿ ಓಡಿ ಹೋಗಿ ತಡವಾದುದಕ್ಕೆ ಕಾರಣ ಕೊಟ್ಟು ಅವಳನ್ನು ಸಮಾಧಾನಿಸಿದ. ಅವಳು ಆ ಗೈಡ್‌ನ‌ ಹೆಂಡತಿಯಾಗಿದ್ದಳು. ಮಕ್ಕಳೊಂದಿಗೆ ಕಾತರದ ನಯನದಿಂದ ಗಂಡನಿಗೆ ಕಾಯುತ್ತ ನಿಂತ ಅವಳ ಆ ಭಂಗಿಯನ್ನು ನೋಡುವಾಗ ನನಗೆ ಅವಳು ಓರ್ವ ಭಾರತೀಯ ನಾರಿಯಂತೆಯೇ  ಕಂಡಳು. ದೇಶ ಯಾವುದಾದರೂ ಅಮ್ಮ ಅಮ್ಮನೇ ಎಂಬುದನ್ನು ನಾನು ಅಲ್ಲಿ ಮನಗಂಡೆ. 
    
ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next