Advertisement

5 ನೇ ವಯಸ್ಸಿಗೆ ಮಾತೃ ವಿಯೋಗ…ಇದು ಲೋಕಸಂಚಾರಿ ನಾರದ ಪುರಾಣ!

02:50 PM Sep 25, 2018 | |

ಒಮ್ಮೆ ವೇದವ್ಯಾಸರು ನಾರದ ಮಹರ್ಷಿಗಳನ್ನು ಭೇಟಿಯಾಗಿ ಭಗವಂತನ ಗುಣಗಾನಗಳ ಶ್ರವಣ ಮನನದಿಂದ ದೊರಕುವ ಫಲದ ಬಗ್ಗೆ ತಿಳಿಸಿರೆಂದು ಕೇಳಿದರು. ಆಗ ನಾರದರು “ಭಗವಂತನನ್ನು ನವವಿಧವಾದ [ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ,ವಂದನೆ, ದಾಸ್ಯ, ಸಖ್ಯ , ಆತ್ಮನಿವೇದನೆ] ಭಕ್ತಿಯಿಂದ ಉಪಾಸನೆ ಮಾಡಿದರೆ ಭಗವಂತನ ಪರಮಾನುಗ್ರಹವಾಗುವುದೆಂದು” ಹೇಳಿ ತನ್ನ ಪೂರ್ವವೃತ್ತಾಂತವನ್ನು ವಿವರಿಸಲು ಪ್ರಾರಂಭಿಸಿದರು.

Advertisement

           ಹಿಂದಿನ ಕಲ್ಪದಲ್ಲಿ, [ನನ್ನ ಹಿಂದಿನ ಜನ್ಮದಲ್ಲಿ] ನಾನು ವೇದವಿದ್ಯಾ ಪಾರಂಗತರಾದ ಓರ್ವ ಬ್ರಾಹ್ಮಣನ ಮನೆಯ ದಾಸೀ ಪುತ್ರನಾಗಿದ್ದೆನು. ಅಲ್ಲಿ ಓರ್ವ ಯೋಗಿಯು ವರ್ಷ ಋತುವಿನಲ್ಲಿ ಒಂದೆಡೆ ಚಾತುರ್ಮಾಸ್ಯ ವ್ರತವನ್ನಾಚರಿಸುತ್ತಿದ್ದರು. ಆಗ ನಾನು ಬಾಲಕನಾಗಿದ್ದರೂ ನನ್ನ ತಾಯಿಯು ನನ್ನನ್ನು ಆ ಯೋಗಿಯ ಶುಶ್ರೂಷೆಗೆ ನೇಮಿಸಿದ್ದಳು. ನಾನು ಆ ಬಾಲ್ಯಾವಸ್ಥೆಯಲ್ಲೂ ಆಟಗಳಲ್ಲಿ ಅನಾಸಕ್ತನಾಗಿ, ಚಾಪಲ್ಯ ರಹಿತನಾಗಿ, ಜಿತೇಂದ್ರಿಯನಾಗಿ, ಮಿತಭಾಷಿಯಾಗಿ, ಅವರ ಆಜ್ಞಾನುಸಾರ ಸೇವೆ ಮಾಡುತ್ತಿದ್ದೆನು. ನನ್ನ ಈ ಶೀಲ-ಸ್ವಭಾವವನ್ನು ಗಮನಿಸಿದ ಸಮದರ್ಶಿಗಳಾದ ಮುನಿಗಳು ಸೇವಕನಾದ ನನ್ನ ಮೇಲೆ ಪರಮಾನುಗ್ರಹವನ್ನು ಮಾಡಿದರು. ನಾನು ಅವರ ಅನುಮತಿಯ ಮೇರೆಗೆ ಅವರು ಸ್ವೀಕರಿಸಿ ಉಳಿದ ಪಾಕಶೇಷವನ್ನು ಪ್ರಸಾದವೆಂಬ ಭಾವನೆಯಿಂದ ದಿನಕ್ಕೆ ಒಂದು ಹೊತ್ತು ಮಾತ್ರ ಸೇವಿಸುತ್ತಿದ್ದೆ. ಅದರಿಂದ ನನ್ನ ಪಾಪಗಳೆಲ್ಲವೂ ಕ್ಷಯವಾಗುತ್ತಿದ್ದವು. ಹೀಗೆ ಆಹಾರವನ್ನು ಸೇವಿಸುತಿದ್ದ ನನ್ನ ಹೃದಯಾಂತರಂಗವು ಪರಿಶುದ್ಧವಾಗಿ ಅವರು ಮಾಡುತ್ತಿದ್ದ ಭಜನೆ, ಪೂಜೆಗಳಲ್ಲಿ ನನಗು ಅನುರಾಗ ಉಂಟಾಯಿತು.

             ಈ ಸತ್ಸಂಗದಲ್ಲಿ ಭಾಗವತ್ಪರಾಯಣರಾದ ಮಹಾತ್ಮರ ಅನುಗ್ರಹದಿಂದ ನಾನು ಶ್ರೀಕೃಷ್ಣನ ಮನೋಹರವಾದ ಕಥೆಗಳನ್ನು ನಿತ್ಯವೂ ಕೇಳುತ್ತಿದ್ದೆವು. ಶ್ರದ್ದೆಯಿಂದ ಒಂದೊಂದು ಪದಗಳನ್ನು ಮನನ ಮಾಡುತ್ತಿರಲು ಸ್ತೋತ್ರಪ್ರಿಯನಾದ ಭಗವಂತನಲ್ಲಿ ನನಗೆ ವಿಶೇಷ ಅಭಿರುಚಿ ಉಂಟಾಯಿತು. ಆ ಮಹಾನು ಭಾವರ ಸತ್ಸಂಗದಿಂದ ನನಗೆ ಅದ್ಭುತ ಅನುಭವಗಳಾಯಿತು. ಇದೆಲ್ಲವೂ ಆ ಮಹಾತ್ಮರ ಕೃಪೆಯೆಂದೇ ನಾನು ಭಾವಿಸುತ್ತೇನೆ.

           ಭಗವಂತನಲ್ಲಿ ಅಭಿರುಚಿ ಉಂಟಾಗಿ ಮನೋಹರ ಕೀರ್ತಿಯುಳ್ಳ ಕೃಷ್ಣನಲ್ಲಿ ನನ್ನ ಭುದ್ಧಿಯು ನಿಶ್ಚಲವಾಗಿ ನೆಲೆಸಿತು. ಹೀಗೆ ಶರದೃತು ಮತ್ತು ವರ್ಷರ್ತುವಿನ ನಾಲ್ಕು ತಿಂಗಳ ಅವಧಿಯಲ್ಲಿ ಮಹಾತ್ಮರಾದ ಮುನಿಗಳು ನಿತ್ಯವೂ ಮೂರೂ ಹೊತ್ತು ಶ್ರೀಹರಿಯ ನಿರ್ಮಲವಾದ ಕೀರ್ತನೆಯನ್ನು ಸಂಕೀರ್ತನೆ ಮಾಡುತ್ತಿದ್ದರು. ಅದರ ಫಲವಾಗಿ ರಜೋಗುಣ ಮತ್ತು ತಮೋಗುಣಗಳನ್ನು ನಾಶ ಮಾಡುವಂಥ ಭಕ್ತಿಯು ನನ್ನ ಹೃದಯದಲ್ಲಿ ಉದಯಿಸತೊಡಗಿತು. ನಾನು ಆ ಯೋಗಿಗಳನ್ನು  ವಿನಯ ಪೂರ್ವಕವಾಗಿ ಭಜಿಸುತ್ತಾ ಅವರಲ್ಲಿ ಅತ್ಯಂತ ಅನುರಕ್ತನಾಗಿದ್ದೆನು.

                 ನನ್ನ ಶ್ರದ್ಧೆಯಿಂದಲೂ ಇಂದ್ರಿಯ ಸಂಯಮದಿಂದಲೂ ಇದ್ದು ಶರೀರ, ಮಾತು, ಮನಸುಗಳಿಂದ ಅವರ ಆಜ್ಞಾನು ವರ್ತಿ ಆಗಿದ್ದೇನು. ಆ ಮಹಾತ್ಮರು ವ್ರತಾಂತ್ಯದಲ್ಲಿ ಹೊರಡುವಾಗ, ಸ್ವಯಂ ಭಗವಂತನೇ ತನ್ನ ಮುಖಾರವಿಂದದಿಂದ ಉಪದೇಶಮಾಡಿದ್ದ ರಹಸ್ಯವಾದ ಜ್ಞಾನವನ್ನು ನನಗೆ ಉಪದೇಶಿಸಿ ಅನುಗ್ರಹಿಸಿದರು. ಆ ಉಪದೇಶದಿಂದ ಜಗತ್ಕರ್ತನಾದ ಶ್ರೀಕೃಷ್ಣನ ಮಾಯೆಯ ಪ್ರಭಾವನ್ನೂ, ಆತ್ಮಸ್ವರೂಪದ ಜ್ಞಾನವನ್ನು ನಾನು ತಿಳಿಯುವಂತಾಯಿತು

Advertisement

          ಪುರುಷೋತ್ತಮನಾದ ಶ್ರೀಕೃಷ್ಣನಿಗೆ ತಮ್ಮ ಎಲ್ಲ ಕರ್ಮಗಳನ್ನು ಸಮರ್ಪಿಸುವುದರಿಂದ ನಮ್ಮ ತಾಪತ್ರಯಗಳೆಲ್ಲವೂ ಪರಿಹಾರವಾಗಿ ಜ್ಞಾನವೃದ್ಧಿಯಾಗುವುದೆಂದು ತಿಳಿದು ಭಗವಂತನನ್ನು ಅನನ್ಯ ಭಕ್ತಿಯಿಂದ ಉಪಾಸನೆ ಮಾಡುತ್ತ ಯೋಗಿಗಳ ಆಜ್ಞಾನುಸಾರ ನಡೆದು ಬಂದೆನು. ಇದರಿಂದ ಪ್ರಸನ್ನ ಗೊಂಡ ಭಗವಂತನು ನನಗೆ ಆತ್ಮಜ್ಞಾನ, ಐಶ್ವರ್ಯ, ಕೇಶವನಲ್ಲಿ ಭಕ್ತಿಯನ್ನು ಕರುಣಿಸಿದನು. ನನಗೆ ಜ್ಞಾನೋಪದೇಶವನ್ನು ಮಾಡಿದ ಯೋಗಿಗಳು ಹೊರಟು ಹೋದಾಗ ಬಾಲಕನಾಗಿದ್ದ ನನಗೆ ತಿಳುವಳಿಕೆ ಇಲ್ಲದ ತಾಯಿಯನ್ನು ಬಿಟ್ಟು ಬೇರೆಯಾವ ಗತಿಯು ಇರಲಿಲ್ಲ. ಅವಳು ನನ್ನನ್ನು ಬಹಳಷ್ಟು ಪ್ರೀತಿಸುತ್ತ ನನ್ನ ಯೋಗ ಕ್ಷೇಮದ ಬಗ್ಗೆ ಚಿಂತಿಸುತ್ತಿದ್ದರು ಪರಾಧೀನಳಾದ ಕಾರಣ ಏನು ಮಾಡಲಾರದೆ ಅಸಹಾಯಕಳಾಗಿದ್ದಳು .

ನಾನು ಕೂಡ ನನ್ನ ತಾಯಿಯ ಸ್ನೇಹಬಂಧನದಲ್ಲಿ ಬಂಧಿತನಾಗಿ ಆ ಬ್ರಾಹ್ಮಣರ ವಸತಿಯಲ್ಲೇ ವಾಸಿಸುತ್ತಿದ್ದೆ. ನನಗೆ ಐದು ವರ್ಷ ವಯಸ್ಸಾಗಲು, ಒಂದು ದಿನ ಮುಸ್ಸಂಜೆ ಹಾಲು ಕರೆಯಲು ಮನೆಯಿಂದ ಹೊರಗೆ ಹೋದ ನನ್ನ ತಾಯಿಯು ಹಾವು ಕಚ್ಚಿ ಮರಣವಪ್ಪಿದಳು.

                  ತಾಯಿಯ ವಿರಹದಿಂದ ಒಬ್ಬಂಟಿಗನಾದ ನಾನು ಉತ್ತರ ದಿಕ್ಕಿಗೆ ದೇಶಾಂತರ ಹೊರಟುಬಿಟ್ಟೆನು. ಆಗ ನನಗೆ ದಾರಿಯಲ್ಲಿ ಧನ ಧಾನ್ಯದಿಂದ ಸಂಪನ್ನವಾದ ದೇಶಗಳೂ, ನಗರಗಳೂ , ಪರ್ವತಗಳೂ ,ಅರಣ್ಯ-ಉದ್ಯಾನವನಗಳು ಕಂಡುಬಂದವು.  ನಾನು ಬಹಳ ದೂರ ಸಾಗಿ ಭಯಾನಕವಾದ ಗೊಂಡಾರಣ್ಯವನ್ನು ಪ್ರವೇಶಿಸಿದೆನು. ನಡೆದು ನಡೆದು ಸುಸ್ತಾದ ನನ್ನ ದೇಹವು ಬಳಲಿ ಹೋಗಿದ್ದು, ತಡೆಯಲಾರದಷ್ಟು ಹಸಿವು ಬಾಯಾರಿಕೆಗಳಿಂದ ನಿತ್ರಾಣಾಗಿದ್ದೆನು. ಅಲ್ಲೇ ಹರಿಯುತ್ತಿದ್ದ ನದಿಯೊಂದರಲ್ಲಿ ಸ್ನಾನ ಮಾಡಿ ನೀರು ಕುಡಿದು ಸ್ವಲ್ಪ ವಿಶ್ರಮಿಸಿ ಆಯಾಸವನ್ನು ಪರಿಹರಿಸಿಕೊಂಡೆನು.

                  ಅನಂತರ ಆ ನಿರ್ಜನವಾದ ಅರಣ್ಯದಲ್ಲಿ ಅರಳಿಮರದ ಬುಡದಲ್ಲಿ ಕುಳಿತು ಅಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದೆನು. ಏಕಾಗ್ರಚಿತ್ತದಿಂದ ಭಗವಂತನ ಪಾದಾರವಿಂದಗಳನ್ನು ಸ್ಮರಿಸುತ್ತಿರಲು ಆತನ ದರ್ಶನದ ಅಪೇಕ್ಷೆಯಿಂದ ಕಣ್ಣುಗಳಲ್ಲಿ ಆನಂದಾಶ್ರುಗಳು ತುಂಬಿದವು. ಆಗ ನನ್ನ ಹೃದಯದಲ್ಲಿ ಭಗವಂತನ ಅದ್ಭುತವಾದ ರೂಪವು ಗೋಚರಿಸಿತು. ನಾನು ರೋಮಾಂಚಿತನಾಗಿ ಅನಿರ್ವಚನೀಯವಾದ ಸುಖವನ್ನು ಅನುಭವಿಸಿದೆನು. ಮನಸ್ಸಿಗೆ ಅತ್ಯಂತ ರಮಣೀಯವಾದ, ಸರ್ವ ಶೋಕವನ್ನು ಪರಿಹರಿಸುವ ಭಗವಂತನ ಆ ರೂಪವು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಆಗ ನನ್ನ ಮನಸ್ಸಿಗೆ ಬಹಳ ಕಳವಳ ಉಂಟಾಗಿ ತಡೆಯಲಾರದ ಬೇಗುದಿಯಿಂದ ತಟ್ಟನೆ ಎದ್ದು ನಿಂತೆನು.

ಆ ದಿವ್ಯ ಮಂಗಳ ರೂಪವನ್ನು ಮತ್ತೆ ದರ್ಶಿಸಬೇಕೆಂದು ಎಷ್ಟೇ ಪ್ರಯತ್ನಿಸಿದರೂ ವಿಫಲನಾದ ನಾನು ನೊಂದು ನರಳತೊಡಗಿದೆನು. ಆಗ ನನ್ನ ಶೋಕವನ್ನು ಶಮನಗೊಳಿಸಲು, ಮಹಾಪ್ರಭುವು ಮೃದುವಾದ ಮಾತಿನಿಂದ “ವತ್ಸ ಈ ಜನ್ಮದಲ್ಲಿ ಮತ್ತೊಮ್ಮೆ ನೀನು ನನ್ನ ದರ್ಶನವನ್ನು ಮಾಡಲಾರೆ, ನೀನು ಸ್ವಲ್ಪ ಕಾಲ ಮಾಡಿದ ಸಾಧು ಸಂತರ ಸೇವೆಯಿಂದ ನಿನ್ನ ಚಿತ್ತವು ನನ್ನಲ್ಲಿ ಸ್ಥಿರಗೊಂಡಿದೆ. ಈಗ ನೀನು ಪಂಚಭೌತಿಕ ಶರೀರವನ್ನು ತ್ಯಜಿಸಿ ಬೇಗನೆ ನನ್ನ ಪಾರ್ಷದಾನಾಗಿ ಬಿಡುವೆ. ಸಮಸ್ತ ಸೃಷ್ಟಿಯು ಪ್ರಳಯವಾಗಿ ಹೋದರೂ ನನ್ನನ್ನು ಪಡೆಯಬೇಕೆಂಬ ದೃಢನಿಶ್ಚಯವು ಬದಲಾಗಲಾರದು.” ಎಂದು ಹೇಳಿದನು.

                ಅಂದಿನಿಂದ ನಾನು ನಾಚಿಕೆ ಸಂಕೋಚ ಬಿಟ್ಟು ಭಗವಂತನ ಮಂಗಳ ಮಾಯವಾದ ನಾಮಕೀರ್ತನೆಯಲ್ಲಿ ಕಾಲವನ್ನು ಕಳೆಯತೊಡಗಿದನು. ಈ ರೀತಿ ಕಾಲವನ್ನು ಕಳೆಯುತ್ತಿರಲು ಭಗವಂತನ ಪಾರ್ಷದ ಶರೀರವನ್ನು ಹೊಂದುವ ಸಮಯ ಬಂದೊಡನೆ ನನ್ನ ಪ್ರಾಕೃತಿಕ ಶರೀರವು ಕಳಚಿಬಿದ್ದು ಹೋಯಿತು. ಆ ಕಲ್ಪದ ಕೊನೆಯಲ್ಲಿ ಭಗವಂತನು ಪ್ರಳಯ ಕಾಲದ ಜಾಲದಲ್ಲಿ ನಿದ್ರಿಸಲು ಸಂಕಲ್ಪಿಸಿದಾಗ ಬ್ರಹ್ಮದೇವರು ತನ್ನ ಸೃಷ್ಟಿಯನ್ನು ಉಪಸಂಹಾರಗೈದು ಪರಮಾತ್ಮನಲ್ಲಿ ಐಕ್ಯವಾದಾಗ ನಾನು ಬ್ರಹ್ಮನ ಉಸಿರಿನೊಡನೆ ಉಸಿರಾಗಿ ಭಗವಂತನ ಹೃದಯವನ್ನು ಪ್ರವೇಶಿಸಿದೆನು.

              ಸಹಸ್ರ ಚತುರ್ಯುಗಗಳು ಕಳೆದ ಬಳಿಕ ಬ್ರಹ್ಮನು ಪುನಃ ಸೃಷ್ಟಿಯನ್ನು ಮಾಡಲು ಇಚ್ಚಿಸಿದಾಗ ಅವನ ಪ್ರಾಣಗಳ ಮೂಲಕ ಮರೀಚ್ಯಾದಿ ಋಷಿಗಳೊಂದಿಗೆ ನಾನು ಪ್ರಕಟ ಗೊಂಡೆನು. ಅಂದಿನಿಂದ ನಾನು ಭಗವಂತನ ಕೃಪೆಯಿಂದ ಮೂರು ಲೋಕಗಳಲ್ಲಿಯೂ ಒಳಗು ಹೊರಗೂ ಯಾವ ಅಡೆತಡೆಗಳಿಲ್ಲದೆ ಸಂಚರಿಸುತ್ತಿದ್ದು ಭಗವದ್ಭಜನರೂಪೀ ಜೀವನದ ನನ್ನ ವ್ರತವು ಅಖಂಡವಾಗಿ ನಡೆಯುತ್ತಿದೆ.

ಭಗವಂತನು ಅನುಗ್ರಹಿಸಿದ ನಾದಬ್ರಹ್ಮನಿಂದ ಅಲಂಕೃತನಾದ ಮಹಾತಿಯೇನೆಂಬ ವೀಣೆಯನ್ನು ನುಡಿಸುತ್ತಾ ಶ್ರೀಹರಿಯ ಕಥೆಗಳನ್ನು ಹಾಡುತ್ತಾ, ತ್ರಿಲೋಕ ಸಂಚಾರಿಯಾಗಿದ್ದೇನೆ. ಸ್ತೋತ್ರ ಪ್ರಿಯನೂ ತೀರ್ಥಗಳಿಗೆ ಆಶ್ರಯನೂ ಆದ ಭಗವಂತನ ಲೀಲಾ ವಿಳಾಸಗಳನ್ನು ನಾನು ಗಾನ ಮಾಡತೊಡಗಿದಾಗ ಆ ಪ್ರಭುವು ಕೂಗಿ ಕರೆಯಲ್ಪಟವನಂತೆ ಒಡನೆಯೇ ನನ್ನ ಹೃದಯಕ್ಕೆ ಬಂದು ದಿವ್ಯ ದರ್ಶನವನ್ನು ದಯಪಾಲಿಸುತ್ತಾನೆ.

             ಕಾಮ ಕ್ರೋಧಾದಿ ವೈರಿಗಳಿಂದ ಪದೇಪದೇ ಗಾಯಗೊಂಡ ಹೃದಯವು ಶ್ರೀಕೃಷ್ಣನ ಸೇವೆಯಿಂದ ಶಾಂತವಾಗುವುದು. ಯಮನಿಯಮಾದಿ ಯೋಗ ಮಾರ್ಗಗಳಿಂದಲೂ ಅಂತಹ ಶಾಂತಿಯು ದೊರೆಯಲಾರದು. ಇದು ನನ್ನ ಅನುಭವವಾಗಿದೆ ಎಂದು ನಾರದರು ವೇದವ್ಯಾಸರಿಗೆ ತನ್ನ ಜನ್ಮ-ಕರ್ಮ, ಸಾಧನೆಯ ರಹಸ್ಯಗಳನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next