ವಿಜಯಪುರ: ಹೆರಿಗೆಗಾಗಿ ಅಂಬ್ಯುಲೆನ್ಸ್ ನಲ್ಲಿ ಸಾಗಿಸುವಾಗ ಗರ್ಭಿಣಿಯೊಬ್ಬರು ಮಾರ್ಗ ಮಧ್ಯೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.
ಮುದ್ದೇಬಿಹಾಳ ತಾಲ್ಲೂಕಿನ ಬ್ಯಾಕೋಡ ಗ್ರಾಮದ ದಿಲಶಾದ್ ರಫೀಕ್ ಚಪ್ಪರಬಂದ (26) ಜನ್ಮ ನೀಡಿದ ತಾಯಿ. ತೀವ್ರ ಹೇರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಕುಟುಂಬಸ್ಥರು ಅಂಬುಲೆನ್ಸಗೆ ಕರೆ ಮಾಡಿ, ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಗರ್ಭಿಣಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೂವಿನಹಿಪ್ಪರಗಿ ಆಸ್ಪತ್ರೆಗೆ ಸಾಗಿಸುವಾಗ ಶನಿವಾರ ಬೆಳಿಗ್ಗೆ 4.15 ಗಂಟೆಗೆ ನಡೆದಿದೆ.
ಅಂಬ್ಯುಲೆನ್ಸ್ ನಲ್ಲಿದ್ದ ಸೂಶ್ರೂಷಕ ಸಿಬ್ಬಂದಿ ರಮೇಶ.ಕೆ ಹಾಗೂ ಚಾಲಕ ಬಸವರಾಜಯ್ಯ ಗುರುಮಠ ಸಿಬ್ಬಂದಿ ಗರ್ಭಿಣಿ ತಾಯಿಗೆ ಯಾವುದೇ ತೊಂದರೆ ಆಗದಂತೆ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಜೊತೆಗೆ ಗರ್ಭಿಣಿಯ ತಾಯಿ ಕೂಡಾ ಅಂಬುಲೆನ್ಸನಲ್ಲಿ ಜೊತೆಯಲ್ಲಿ ಇದ್ದು ಬಾಣಂತಿ ಮಗಳ ಆರೈಕೆ ಮಾಡಿದ್ದಾರೆ.
ನಂತರ ಹೂವಿನಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿದಾಗ ಕರ್ತವ್ಯ ನಿರತ ವೈದ್ಯರು ಎರಡು ಹೆಣ್ಣು ಮಗು ಹಾಗೂ ತಾಯಿ, ಮಕ್ಕಳ ಆರೋಗ್ಯ ಪರೀಕ್ಷಿಸಿದ್ದಾರೆ.
ಅಂಬ್ಯಲೆನ್ಸ್ ನಲ್ಲಿ ಜನ್ಮ ಪಡೆದ ಮಕ್ಕಳಲ್ಲಿ ಒಂದು ಮಗುವಿನ ತೂಕ 1.75 ಕೆಜಿ, ಇನ್ನೊಂದು ಮಗುವಿನ ತೂಕ1.50 ಕೆಜಿ ಇದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ, ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಂಬುಲೆನ್ಸ್ ಸುಶ್ರೂಷಕ ಸಿಬ್ಬಂದಿ ಕೆ.ರಮೇಶ ಮಾಹಿತಿ ಹಂಚಿಕೊಂಡಿದ್ದಾರೆ.