ಬೆಂಗಳೂರು: ಲಾರಿ ಹರಿದು ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಣಸವಾಡಿಯ ಬಾಬುಸಾಬ್‌ಪಾಳ್ಯ ಬಸ್ ನಿಲ್ದಾಣ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ತಮಿಳುನಾಡು ಮೂಲದ ವಲ್ಲಚ್ಚಿ (70) ಮತ್ತು ಇವರ ಪುತ್ರಿ ವಸಂತ (49) ಮೃತರು. ಕೃತ್ಯವೆಸಗಿದ ಬಳಿಕ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಮೃತರು ಕೆಲ ವರ್ಷಗಳಿಂದ ಇಲ್ಲಿನ ಬಾಬುಸಾಬ್‌ಪಾಳ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಮೃತ ವಸಂತ ಅವರ ಪತಿ ತಮಿಳುನಾಡಿನಲ್ಲೇ ವಾಸಿಸುತ್ತಿದ್ದು, ವಸಂತ ಅವರು ಮಕ್ಕಳೊಂದಿಗೆ ನಗರದಲ್ಲಿ ನೆಲೆಸಿದ್ದಾರೆ. ಜೀವನ ನಿರ್ವಹಣೆಗಾಗಿ ಮನೆ ಕೆಲಸ ಮಾಡಿಕೊಂಡಿದ್ದು, ಇವರ ಪುತ್ರ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮಾಚರಣೆಗೆ ವಸಂತ ಮತ್ತು ಅವರ ತಾಯಿ ವಲ್ಲಚ್ಚಿ ತಮಿಳುನಾಡಿನ ತಿರುವಣ್ಣಾಮಲೈಗೆ ತೆರಳಿದ್ದರು. ಇಲ್ಲಿಂದ ಸೋಮವಾರ ಬೆಳಗಿನ ಜಾವ ನಗರಕ್ಕೆ ವಾಪಸ್ ಆಗಿದ್ದು, ಬಾಬುಸಾಬ್‌ಪಾಳ್ಯದಲ್ಲಿ ಬಸ್ ಇಳಿದಿದ್ದಾರೆ. ಬಸ್ ನಿಲ್ದಾಣ ಸಮೀಪವೇ ಸ್ಕೈವಾಕ್ ಇದೆ.
ಆದರೆ ತಾಯಿ ವಲ್ಲಚ್ಚಿ ಅವರಿಗೆ ವಯಸ್ಸಾಗಿದ್ದು, ಸ್ಕೈವಾಕ್ ಹತ್ತಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಗಳು ವಸಂತಾ ತಾಯಿಯ ಕೈ ಹಿಡಿದುಕೊಂಡು ರಸ್ತೆ ದಾಟುತ್ತಿದ್ದರು. ಈ ವೇಳೆ ಕೆ.ಆರ್.ಪುರ ಕಡೆಯಿಂದ ಬಂದ ಲಾರಿ ತಾಯಿ, ಮಗಳಿಗೆ ಡಿಕ್ಕಿಹೊಡೆದಿದೆ. ಪರಿಣಾಮ ಲಾರಿಯ ಮಂದಿನ ಮತ್ತು ಹಿಂದಿನ ಚಕ್ರಗಳಡಿ ಸಿಲುಕಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತವೆಸಗಿದ ಲಾರಿ ಮಹಾರಾಷ್ಟ್ರಕ್ಕೆ ಸೇರಿದೆ ಎಂಬ ಮಾಹಿತಿಯಿದ್ದು, ಚಾಲಕನ ಪತ್ತೆ ಕ್ರಮಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬಾಣಸವಾಡಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.