Advertisement

ಹೆತ್ತ ತಾಯಿಗೆ ಮಗಳಿಂದಲೇ ಮೋಸ

06:05 PM Jul 31, 2021 | Team Udayavani |

ಕೊಪ್ಪಳ: ಕುಕನೂರು ಪಟ್ಟಣದ ವಾರ್ಡ್‌ ನಂ.1ರ ಆಸ್ತಿಯ ವಿಚಾರದಲ್ಲಿ ಹೆತ್ತ ತಾಯಿಗೆ ಮಗಳು ಮೋಸ ಮಾಡಿ ಆಸ್ತಿಯನ್ನು ತನ್ನ ಹೆಸರಿನಲ್ಲಿ ದಾನವಾಗಿ ಬರೆಯಿಸಿಕೊಂಡ ಘಟನೆ ಹಿರಿಯ ನಾಗರಿಕರ ಹಿತರಕ್ಷಣಾ ನ್ಯಾಯ ಮಂಡಳಿ ಮುಂದೆ ಬಯಲಿಗೆ ಬಂದಿದ್ದು, ಎಸಿ ನಾರಾಯಣರಡ್ಡಿ ಕನಕರಡ್ಡಿ ಅವರು ಎಲ್ಲವನ್ನೂ ಆಲಿಸಿ ನೊಂದ ತಾಯಿಗೆ ಪುನಃ ಆಸ್ತಿ ಸೇರುವಂತೆ ಆದೇಶ ಮಾಡಿದ್ದಾರೆ.

Advertisement

ಕುಕನೂರಿನ ಬಸಮ್ಮ ತಳವಾರ ಎನ್ನುವ ತಾಯಿಗೆ ನಾಗಮ್ಮ ಬಿಜಕಲ್‌ ಎನ್ನುವ ಮಗಳೇ ಮೋಸ ಮಾಡಿದ್ದಾಳೆ. ಬಸಮ್ಮ ತಳವಾರ ಅವರು ಕುಕನೂರು ಪಟ್ಟಣದ 1ನೇ ವಾರ್ಡಿನಲ್ಲಿ ವಾಸವಾಗಿದ್ದಾರೆ. ಅವರ ಮನೆ ಮುಂದೆ ಖಾಲಿ ಜಾಗವಿದ್ದು, ಅದನ್ನು ತಾಯಿ ಬಸಮ್ಮಳಿಗೆ ಮಾಸಾಶನ ಮಾಡಿಸಿ ಕೊಡುವುದಾಗಿ ಹೇಳಿ 2019ರಲ್ಲಿ ತಾಯಿಯನ್ನು ನೋಂದಣಾಧಿಕಾರಿ ಕಚೇರಿಗೆ ಕರೆ ತಂದು ಮಗಳು ನಾಗಮ್ಮ ಬಿಜಕಲ್‌ ದಾನಪತ್ರ ರೂಪದಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಳು. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಾದ ಬಳಿಕ ತಾಯಿ ಬಸಮ್ಮಳ್ಳಿಗೆ ಮನೆಯಿಂದ ಹೊರ ನಡೆಯುವಂತೆ ದಬಾಯಿಸಿದ್ದಾಳೆ. ಇದರಿಂದ ನೊಂದ ಮಹಿಳೆ ಇದು ನನ್ನ ಮನೆಯೆಂದು ಹೇಳಿದ್ದಾಳೆ. ಆಗ ಆಸ್ತಿ ಮಗಳ ಹೆಸರಿನಲ್ಲಿ ಇರುವುದು ಬೆಳಕಿಗೆ ಬಂದಿದೆ.

ತಾಯಿ ಬಸಮ್ಮ ತಳವಾರ ಅವರು ಸ್ಥಳೀಯ ದೇವಸ್ಥಾನದಲ್ಲಿ ವಾಸ ಮಾಡಿ ಕೊನೆಗೆ ಎಸಿ ನೇತೃತ್ವದಲ್ಲಿನ ಹಿರಿಯ ನಾಗರಿಕರ ಹಿತರಕ್ಷಣಾ ನ್ಯಾಯ ಮಂಡಳಿಗೆ ತನ್ನ ಮಗಳೇ ನನಗೆ ಮೋಸ ಮಾಡಿದ್ದಾಳೆಂದು ದೂರು ನೀಡಿದ್ದಾಳೆ. ಆಗ ಎಸಿ ನಾರಾಯಣರಡ್ಡಿ ಕನಕರಡ್ಡಿ ಅವರು ಅರ್ಜಿ ವಿಚಾರಣೆ ನಡೆಸಿ ಪ್ರತಿವಾದಿಗಳನ್ನು ಕರೆಯಿಸಿದಾಗ ರಾಮಚಂದ್ರ ಮುಂಡರಗಿ, ನಾಗಮ್ಮ ಅವರನ್ನು ಕರೆಯಿಸಿ ವಿಚಾರಿಸಲಾಗಿ, ದಾಖಲೆಗಳನ್ನು ಪರಿಶೀಲನೆ ಮಾಡಿದ ವೇಳೆ ಆಸ್ತಿ ದಾನ ರೂಪದಲ್ಲಿ ವರ್ಗಾವಣೆಯಾದ ಕುರಿತು ತಿಳಿದು ಬಂದಿದೆ.

ಅರ್ಜಿದಾರಳ ಹೇಳಿಕೆ ಹಾಗೂ ಪ್ರತಿವಾದಿಗಳನ್ನು ವಿಚಾರಿಸಲಾಗಿ ಮೋಸದಿಂದ ಆಸ್ತಿ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದ ಹಿನ್ನೆಲೆಯಲ್ಲಿ ದಾನಕೊಟ್ಟ ಆಸ್ತಿಯನ್ನು ರದ್ದುಪಡಿಸಿ ಪುನಃ ತಾಯಿ ಬಸಮ್ಮ ತಳವಾರ ಅವರ ಹೆಸರಿಗೆ ವರ್ಗಾವಣೆ ಮಾಡುವಂತೆಯೂ ಯಲಬುರ್ಗಾದ ಉಪನೋಂದಣಾಧಿ ಕಾರಿಗಳಿಗೆ ಎಸಿ ಅವರು ಆದೇಶ ಮಾಡಿ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next