Advertisement

ಅಮ್ಮ ಮಗ ಮತ್ತು ಕಷಾಯ

12:11 PM Nov 03, 2017 | |

ನಮ್ಮದು ಕೇರಳದ ಊರು.  ಮನೆಯ ತೋಟದ ತುಂಬ ಕೊಕ್ಕೋ ಗಿಡಗಳಿವೆ. ಅದರಲ್ಲಿ ಬಿಡುವ  ಗೇಣುದ್ದದ ಕೊಕ್ಕೋಕಾಯಿಗಳನ್ನು ನಾವು ಕೊಯ್ದು  ಕ್ಯಾಂಪ್ಕೋದ ಚಾಕಲೇಟು ಫ್ಯಾಕ್ಟರಿಗೆ ಸರಬರಾಜು ಮಾಡುತ್ತೇವೆ.  ಅಲ್ಲಿನ ಚಾಕಲೇಟು ತಿನ್ನುವಾಗ ನಮಗೆ ಸಹಜವಾಗಿ ಹೆಮ್ಮೆ; ಒಂದು-  ಈ ಚಾಕಲೇಟುಗಳಲ್ಲಿ ನಮ್ಮ ತೋಟದ ಕೊಕ್ಕೋ ಕಾಯಿಗಳೂ ಇದೆ ಎಂದಾದರೆ, ಇನ್ನೊಂದು- ಸ್ವದೇಶಿ ಚಾಕಲೇಟು ಅಂತ. ಹಾಗಾಗಿ ನಮ್ಮಲ್ಲಿ ಹೆಚ್ಚಾಗಿ ಕೊಕ್ಕೋ ಚಾಕಲೇಟುಗಳು ಇರುತ್ತವೆ. ಕೊಕ್ಕೋ ಸ್ವಾದದ, ವಿಶಿಷ್ಟ ರುಚಿಯ, ಬಾಯಿಗೆ ಹಾಕಿದಾಗ  ಕರಗುವ ಈ ಚಾಕಲೇಟು  ಮಕ್ಕಳಿಗೆ ಬಲು ಪ್ರಿಯ.

Advertisement

ಮಕ್ಕಳಿರುವ ಮನೆಗಳಲ್ಲಿ ಆಗಾಗಿ ಶೀತ, ಜ್ವರಗಳು ತಪ್ಪಿದ್ದಲ್ಲ. ಸಾಮಾನ್ಯವಾಗಿ ನಮ್ಮ ಕಡೆ ಗಿಡಮೂಲಿಕೆಗಳ ಔಷಧ ಮಾಡಿ ಕುಡಿಸುವುದು ವಾಡಿಕೆ.  ಅದಕ್ಕಾಗಿ ಹುಡುಕಬೇಕಿಲ್ಲ. ಮನೆಯಂಗಳದಲ್ಲಿ, ಹಿತ್ತಲಿನಲ್ಲಿ  ಔಷಧೀಯ ಗಿಡಮೂಲಿಕೆಗಳಿರುತ್ತದೆ. ಅದನ್ನು ಕಿತ್ತು ತಂದು  ಸರಿಯಾದ ರೀತಿಯಲ್ಲಿ ಕುಡಿಸಿದರೆ  ಮತ್ತೆ ಸಮಸ್ಯೆ ಬಾರದು. ತೀರಾ ಅನಿವಾರ್ಯವಾದರೆ ಮಾತ್ರ ಇಂಗ್ಲಿಶ್‌ ಔಷಧಿ ಅಷ್ಟೆ. ಮಳೆಯಲ್ಲಿ ನೆನೆದು, ತೋಡಿನ ನೀರಿನಲ್ಲಿ  ಈಜುವ  ಹುಮ್ಮಸ್ಸಿನಿಂದ,  ತಲೆಗೆ ಸ್ನಾನ ಮಾಡಿ ಒ¨ªೆ ಸರಿಯಾಗಿ ಒರೆಸದೆ ಇ¨ªಾಗೆಲ್ಲ  ಶೀತ, ಜ್ವರ  ಹಿಂಬಾಲಿಸುತ್ತದೆ.  ಹಾಗೆಂದು ತಮಗೆ  ಜ್ವರವಿದೆ ಅನ್ನುವ ಸೂಚನೆ ಕೂಡಾ ಮಕ್ಕಳು ಕೊಡುವುದಿಲ್ಲ.

ಕಣ್ಣು ಬಾಡಿದ್ದು ಕಂಡಾಗ, ಮೇಲಿಂದ ಮೇಲೆ “ಹಾಕ್‌… ಶೀ… ಆಕ್‌… ಶೀ…’ ಅನ್ನುವಾಗ ಗೊತ್ತಾಗಿಯೇ ಗೊತ್ತಾಗುತ್ತದೆ.   ಮೊದಮೊದಲು  ಏನಿಲ್ಲ. ಇಲ್ಲವೇ ಇಲ್ಲ, ಸ್ವಲ್ಪಾನೂ ಜ್ವರವಿಲ್ಲ. ನಿನಗೆ ಭಾತು… ಅಂತ ಕೊಸರಾಡಿದರೂ  ಕಾಯುವ ಹಣೆ ಸುಳ್ಳು ಹೇಳುವುದಿಲ್ಲ. ಅವರಿಗೂ ಗೊತ್ತು. ಜ್ವರವಿದೆ ಎಂದು ಒಪ್ಪಿಕೊಂಡರೆ  ಕಷಾಯ ಕುಡಿಯಬೇಕಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಕೊಸರಾಟ.  ಜ್ವರದ ಮಕ್ಕಳಿಗೆ “ಮಲಗು’ ಎಂದು ಹಾಸಿಗೆ ಹಾಸಿ ಕೊಟ್ಟರೆ ಮಲಗದೆ ಟಿ.ವಿ.ಯಲ್ಲಿ  ಮೋಹನ್‌ಲಾಲ್‌ನ ಮಲಯಾಳದ ಫಿಲಂ  ನೋಡುತ್ತ ಇರುತ್ತವೆ.

ಸಾಲುಸಾಲಾಗಿ ಊರೂರಿನವರನ್ನೆಲ್ಲ ಅಡ್ಡಡ್ಡ ಮಲಗಿಸಿದ್ದ ಚಿಕುನ್‌ ಗುನ್ಯಾ, ಡೆಂಗ್ಯು ನೆನಪಿನಿಂದ ಅಳಿಸಲೇ ಅಸಾಧ್ಯ. ಆ ಸಮಯದಲ್ಲಿ  ಚಿಕುನ್‌ ಗುನ್ಯಾಕ್ಕೆ ಕಿರಾತಕಡ್ಡಿಯ ಕಷಾಯ ಅಥವಾ ಅಮೃತಬಳ್ಳಿಯ ಕಷಾಯ ರಾಮಬಾಣವೆಂದು ಗೊತ್ತಾದಾಗ ಮನೆ ಮನೆಯವರು ಅದೆಲ್ಲಿದೆ ಅಂತ ಅರಸಿಕೊಂಡು ಧಾವಿಸುತ್ತಿದ್ದರು. ಚಿಕುನ್‌ಗುನ್ಯಾ ಬಂದರೆ ಅದರ ನೋವು, ಸಂಕಟ ಅನುಭವಿಸಿದವರಿಗಷ್ಟೇ ಗೊತ್ತು.

ಹೆರಿಗೆ ಸಂಕಟವಾದರೂ ಅದಕ್ಕೊಂದು ಬಿಡುಗಡೆ ಇರುತ್ತದೆ, ಇದಕ್ಕೆ ಇಲ್ಲ. ಏಳಲಾಗದು; ಕೂರಲಾಗದು; ನಡೆಯಲಾಗದು. ಕೈಕಾಲು, ಗಂಟು, ಗಂಟು ಹಿಂಡಿ ಹಾಕುವ ನೋವು. ಅದರ ಶಮನಕ್ಕೆ ಪರಿಣಾಮಕಾರಿ ಮದ್ದು ಕಿರಾತಕಡ್ಡಿಯ ಕಷಾಯ ಎಂದು ವೈದ್ಯರೇ ಸೂಚಿಸುತ್ತಿದ್ದರು. ಈಗ ನಾನು ಹೇಳುತ್ತಿರುವುದೂ ಅದೇ ಕಿರಾತಕಡ್ಡಿ. ಕಡ್ಡಿ ಎಂದರೆ ಅದು ಯಾವುದೇ ಕೋಲು, ಕಡ್ಡಿ ಅಲ್ಲ. ಗೇಣುದ್ದ ಬೆಳೆಯುವ, ಕಾಂಡದ ಅಕ್ಕಪಕ್ಕದಲ್ಲಿ ಪುಟ್ಟ ಪುಟ್ಟ ಹಸಿರು ಎಲೆಗಳಿರುವ ಪುಟ್ಟ ಸಸ್ಯ. ಗುಂಪಾಗಿ ಬೆಳೆಯುತ್ತದೆ. ಯಾವ ಉಪಚಾರವನ್ನೂ  ಬಯಸದೆ ಹಸಿರಾಗಿ ಹರಡಿಕೊಳ್ಳುತ್ತದೆ. ಬಾಯಿಗೆ ಇಟ್ಟರೆ  ಕಹಿಯೋ ಕಹಿ. ಈ ಕಿರಾತಕಡ್ಡಿ ಹಿತ್ತಲಿನಲ್ಲಿ  ಸಮೃದ್ಧವಾಗಿ ಬೆಳೆಸಿದ ಕಾರಣಕ್ಕೇ  ಜ್ವರವೇ ಇಲ್ಲವೆಂಬ ಹಠ. ನಾನು ಅವರ ವಾದಕ್ಕೆ ಕಿವುಡಾಗಿ ಹೋಗಿ  ಗಿಡದಿಂದ ಒಂದು ಹಿಡಿ ಎಲೆ ಕಾಂಡ ಸಮೇತ ಕಿತ್ತು, ತೊಳೆದು ತಂದು ಪಾತ್ರೆಯಲ್ಲಿ ಎರಡು ಲೋಟ ನೀರು ಕುದಿಯಲಿಟ್ಟಾಗ ಇನ್ನು ತಪ್ಪಿಸಿಕೊಳ್ಳುವಂತಿಲ್ಲವೆಂಬ ಸತ್ಯ ಗೊತ್ತಾಗಿ ಹೋಗುತ್ತಿತ್ತು. 

Advertisement

ಯಾವಾಗ  ಘಮ, ಘಮ ಹರಡಿತೋ ಆಗ ಉಚಿತ ಸಲಹೆಗಳು ಹಾರಿ ಬರುತ್ತಿತ್ತು. “”ಅಮ್ಮ, ಸ್ವಲ್ಪ ಕಲ್ಲುಸಕ್ಕರೆ ಈಗಲೇ ಹಾಕಿಬಿಡು, ಸ್ವಲ್ಪೇ ಸ್ವಲ್ಪ ಕುಡೀತೇನೆ. ಅದಕ್ಕಿಂತ ಹೆಚ್ಚು ಕೊಡಬೇಡ, ಬೆಲ್ಲ ತುಂಬಾ ಇರಲಿ ಕುದಿಯುವಾಗ” ಇತ್ಯಾದಿ ಇತ್ಯಾದಿ.
ಚೆನ್ನಾಗಿ ಕುದಿಸಿದಾಗ ಮಕ್ಕಳದು ಜಾಣಕಿವುಡು. ಅವರಿಗೆ ಗೊತ್ತು ಈಗ ಕರೆ ಬರುತ್ತದೆ ಎಂದು. ಹತ್ತಾರು ಬಾರಿ ಕರೆದು  ದಯನೀಯ ಮೌನವೇ ಉತ್ತರವಾದಾಗ ಅವರಿದ್ದಲ್ಲಿಗೆ ಹೋಗಲೇಬೇಕು.   ಮುಖವಿಡೀ ದೀನ ಕಳೆ. ಅದನ್ನು ಕಂಡರೆ ಪಾಪ ಅನ್ನಿಸಿ ರಿಯಾಯಿತಿ ಸಿಗುತ್ತಾ ಅನ್ನುವ ಬುದ್ಧಿವಂತಿಕೆ. 

ಲೋಟ ಹತ್ತಿರ ತಂದಾಗ ಅದಕ್ಕೆ ಇಣಿಕಿ ನೋಡಿ, “”ಇಷ್ಟಾ! ಒಂದು ಕೊಡದಷ್ಟಿದೆ !” ಅನ್ನುವ ಅಸಹನೆ.  ಒತ್ತಾಯಿಸಿದಾಗ  ಬೀಸುವ ದೊಣ್ಣೆ ತಪ್ಪಿದರೆ ಅಂತ ದುರಾಸೆ. “”ಅಮ್ಮ, ಮೋಹನ್‌ಲಾಲ್‌ ತೆಂಗಿನ ಮರ ಹತ್ತುವುದು ಮುಗೀಲಿ”  ಸರಿ. ಮೇರುನಟ ಮರದಿಂದ ಇಳಿಯುವ ತನಕ ಕಾದರೆ  ಮತ್ತೂ ಮೊಂಡಾಟ.  “”ಈಗ ಜ್ವರವೆ ಇಲ್ಲ. ಕಿರಾತಕಡ್ಡಿಯ ಘಾಟಿಗೇ ಗುಣವಾಯ್ತು ಆಹಾ!” 
ಮತ್ತೂ ಗದರಿಸಿದಾಗ ಇನ್ನಾವ ಕಾರಣವೂ ಇಲ್ಲವಾದ  ಮೇಲೆ ಸೋತ ಕಳೆಯಿಂದ ಕೊಡು. “”ಸ್ವಲ್ಪ ತಣಿದ  ಮೇಲೆ ಕುಡೀತೇನೆ. ನೀ ಹೋಗು” “”ನಮ್ಮ ದೇವರ ಸತ್ಯ ನನಗೆ ಗೊತ್ತಿಲ್ವಾ? ಅದೆಲ್ಲ ಬೇಡ. ನಾನು ಕುಡಿಸುತ್ತೇನೆ” ಅಂತ ಗದರಿಸಿದ ಮೇಲೇ  ಸ್ವಲ್ಪ ಬಗ್ಗುವುದು. ಕಾಲು ನೀಡಿ ಕುಳಿತಾಗ ತೊಡೆಯ ಮೇಲೆ ಎಳೆಯ ಮಕ್ಕಳಂತೆ ಕಾಲು ಚಾಚಿ ಮಲಗಲು ಒಂಚೂರೂ ಆಕ್ಷೇಪವಿಲ್ಲ. ಸಣ್ಣದಿ¨ªಾಗ ಕಾಲಿನಲ್ಲಿ ಉದ್ದಕ್ಕೆ ಮಲಗಿಸಿದರೆ ಪಾದದ ತನಕ ಬರುತ್ತಿದ್ದವರು ಈಗ ಪಾದ ದಾಟಿ ನಾಲ್ಕೈ ದು ಫೀಟು ಉದ್ದಕ್ಕಿ¨ªಾರೆ. ಮಲಗಿದರಲ್ಲ ಎಂದು ನಾನು ಪುಟ್ಟ ಲೋಟದಲ್ಲಿರುವ ಕಷಾಯ ಬಾಯಿಗೆ ಹಾಕಲು ಹೊರಟರೆ ತಕ್ಷಣ ಕೈ ತಡೆಯುವ ಹಿಕಮತ್ತು.
“”ಎಷ್ಟಿದೆ  ನೋಡ್ತೇನೆ”
“”ಕುಡೀತೀಯಾ, ಬೇಕಾ ಏನಾದ್ರೂ ಸಮ್ಮಾನ?” ಅಂತ ಗದರಿಕೆ ನನ್ನದು.
“”ಚಾಕಲೇಟು ಎಲ್ಲಿ ಕಾಣಿಸ್ತಿಲ್ಲ”
“”ಸರಿ. ನೋಡು ಚಾಕಲೇಟು ಕೈಯಲ್ಲೇ ಇದೆ” ಅಂತ ತೋರಿಸಬೇಕು. ಅದು “”ಸಣ್ಣದ್ದಾ ಅಲ್ಲ ದೊಡ್ಡದ್ದಾ” ಅಂತ ಮಲಗಿದಲ್ಲಿಗೇ ಪರಿಶೀಲನೆ. ಪುನಃ ಬಾಯಿ ತೆರೆಯಲು ನನ್ನ ಬಲವಂತ.

“”ಸ್ವಲ್ಪ ಇರು. ತಯಾರಿ ಮಾಡ್ಕೊಳ್ತಿದ್ದೇನೆ”
“”ಎಂಥದ್ದು ಪರೀಕ್ಷೆಗಾ ತಯಾರಿ! ಇರುವುದು ಒಂದೇ ಗುಟುಕು, ಕುಡಿ,  ನೇರ ಗಂಟಲಿಗೇ ಹಾಕ್ತೇನೆ. ಆಗ ರುಚಿ ಗೊತ್ತಾಗುವುದಿಲ್ಲ” ಹತ್ತಿರ ತಂದು ಇನ್ನೇನು ಬಾಯಿಗೆ ಹಾಕಬೇಕು ಎನ್ನುವಾಗ ಬಿಗಿಯಾಗಿ ಬಾಯಿ ಮುಚ್ಚಿಕೊಳ್ಳುವುದು. ಬೈದರೆ, “ಸ್ವಲ್ಪ  ಟೈಂ  ಕೊಡು’ ಅನ್ನುತ್ತಾನೆ ದೀನ ಬಾಲಕ. ಆಗಾಗ ನನ್ನ ಕೈಲಿರುವ ಹಿಡಿದ  ಚಾಕಲೇಟು  ದೊಡ್ಡದಾ ಅಲ್ವಾ ಅಂತ ಪರಿಶೀಲನೆ ಮಾಡುತ್ತಾನೆ.

“”ಅದೆಷ್ಟು ಹೊತ್ತೋ, ಒಂದು ಕ್ಷಣದಲ್ಲಿ ನುಂಗಿದರಾಯ್ತು. ಅದಕ್ಕೇನು, ಕೊಂಬು, ವಾದ್ಯ , ಡೋಲು ಬರಬೇಕಾ?” ಸಂಧಾನದ ಆಸೆ ಆಗ.
“”ಚಾಕಲೇಟು ಕೊಡು. ಅದನ್ನು ಮೊದಲು ತಿಂತೇನೆ, ಮತ್ತೆ ಕಷಾಯ ಕುಡೀತೇನೆ  ಬುದ್ಧಿವಂತಿಕೆ ನನಗೆ ಗೊತ್ತಿಲ್ಲ¨ªಾ !” ಈಗ ಸ್ವಲ್ಪ ಗದರಿಕೆ ನನ್ನಿಂದ. ಅಮ್ಮನಿಗೆ ಸಿಟ್ಟು ಬಂದಿದೆ ಅಂತ ಸ್ವಲ್ಪ ತಗ್ಗಿದ ಪುಟ್ಟ. 

ಈಗ ಗಂಟಲಿಗೇ ಹಾಕು, ನಾಲಿಗೆಗೆ ತಾಗಕೂಡದು ಅನ್ನುವ ರಾಜಿ.
ಬಾಯಿಯ ಸಮೀಪ ತಂದರೆ ಮೊದಲಿನದೇ ಆಟ. ಫ‌ಕ್ಕನೆ ಬಾಯಿ ಬಂದ್‌.
“”ಈಗ ಕುಡೀತೇನೆ. ಮೊದಲು ಕಣ್ಣುಮುಚ್ಚಿಕೊಳೆ¤àನೆ”.
ಪುನಃ ನಂಬಿ ಬಾಯಿ ಬಳಿ ತಂದರೆ  ಬಾಯಿ ಮುಚ್ಚುವ ಆಟ. ಸಾಕಾಗಿ ಸಿಟ್ಟು ಮಾಡಿಕೊಂಡಾಗ ಸ್ವಲ್ಪ ತಗ್ಗಿ ಬಾಯಿ ತೆರೆದು ಫ‌ಕ್ಕನೆ ಹಾಕಿಬಿಡು. ಎರಡೇ ಚಮಚ. ಇರುವ ಎರಡು ಗುಟುಕನ್ನೂ ಒಟ್ಟಿಗೇ ಹಾಕಬೇಕು ಅನ್ನುವಾಗ ಬಲಗೈ ಚಾಚಿಕೊಳ್ಳುತ್ತದೆ.
“”ಕೊಡು ಚಾಕಲೇಟು. ನನ್ನ ಕೈಲಿ ಹಿಡ್ಕೊಳ್ಳುತ್ತೇನೆ”
ಸುತರಾಂ ಆ ಸೂಚನೆಗೆ ಒಪ್ಪದೆ ಪುನಃ ಒಮ್ಮೆಗೆ ಸುರಿದಾಗ ಅನಿವಾರ್ಯವಾಗಿ ನುಂಗಲೇಬೇಕಾಗುತ್ತದೆ ಅವನಿಗೆ. ಅದಾಗಲೇ ಚಾಕಲೇಟು ಕವಚ ಬಿಡಿಸಿ ಇಟ್ಟ ಕಾರಣ ತಕ್ಷಣ ಬಾಯಿಗೆ ಹಾಕಿಕೊಂಡು  ಆಗುತ್ತದೆ. ಅಗಿದು ನುಂಗಿದ ಮೇಲೆ ಅನುನಯ.

“”ನೀ ಕರೆದಾಗ ಬಂದು ಕಷಾಯ ಕುಡಿಯಲಿಲ್ವಾ ನಾನು. ಇನ್ನೊಂದು ಚಾಕಲೇಟು ಬೇಕು”. “”ಕಹಿ ಬಾಯಿ ಅಮ್ಮನಲ್ವಾ ನಾನು. ಕೊಟ್ಟೇ ಕೊಡುತ್ತೇನೆ” ಎಂದು ಗೊತ್ತು. ಬಿಸಿಯೇರಿದ್ದ  ಮೈ, ಹಣೆ ಅರ್ಧ ಗಂಟೆಯಲ್ಲಿ ತಗ್ಗಿ ಜ್ವರ ಬಿಡುತ್ತದೆ.  ಮಾಮೂಲಿಯಾಗಿ ಬಿಡುತ್ತಾರೆ ಮಕ್ಕಳು. ಆದರೆ, ನನಗೆ ಗೊತ್ತು. ಇನ್ನೆರಡು ಬಾರಿ ಕಷಾಯ ಕುಡಿದರೆ ಒಳ್ಳೆಯದು. ನಾಲ್ಕಾರು ಗಂಟೆ ಕಳೆದ ಮೇಲೆ ಫ್ರೆಶ್‌ ಕಷಾಯ ಕುದಿಸಿ ತಣಿಸಿ ತಂದರೆ ಅದೇ ಹಾಡು. “”ಜ್ವರವಾ, ಇಲ್ವೇ ಇಲ್ಲಮ್ಮ. ಈ ಸಲದ್ದು ನೀನೆ ಕುಡಿ. ನಿನಗೆ  ಜ್ವರ ಬಾರದ ಹಾಗೆ ಈಗಲೆ ಕುಡಿದು ಬಿಡು” ಪುಸಲಾವಣೆ. ಮೂರು ಬಾರಿ ಕುಡಿಸದೆ ನಾನೂ ಬಿಡುವುದಿಲ್ಲ. ಸಂಪೂರ್ಣವಾಗಿ ಬಿಡುತ್ತದೆ ಜ್ವರ. ಹೊತ್ತಿಗೆ ನಾಲ್ಕು ಮಾತ್ರೆ, ಆಂಟಿ ಬಯೋಟಿಕ್‌, ಲಿಕ್ವಿಡ್‌ ಯಾವ ಔಷಧಿಯ ಅಗತ್ಯವಿಲ್ಲ. ಹಿರಿಯರಿಗೆ ಜ್ವರ ಬಂದರೂ ಅದೇ ಔಷಧಿ. ವಿಶೇಷವೆಂದರೆ ಅವರಿಗೆ ಕೈಲಿ ಚಾಕಲೇಟು  ಹಿಡಿದು ಗಂಟಲಿಗೆ ಹಾಕುವ  ಕಷ್ಟವಿಲ್ಲ. ಪುನಃ ಜ್ವರದ  ಹೆದರಿಕೆ ಇಲ್ಲ.

ತಕರಾರು ಮಕ್ಕಳದು. ಆಸೆ, ಆಮಿಷವೊಡ್ಡಿ ಒಂದು ಗುಟುಕು ಬಾಯಿಗೆ ಹಾಕಬೇಕಾದರೆ ನನಗೆ ಉಸಿರು ಮೇಲೆ ಕೆಳಗೆ ಆಗುತ್ತದೆ.  ಅಂದ ಹಾಗೆ ಮಕ್ಕಳು ಅಂದರೆ ಪುಟಾಣಿಗಳಲ್ಲ. ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳು. ಎಳವೆಯಿಂದ ಇಂದಿನ ತನಕ ಅದೇ ರಚ್ಚೆ , ಅದೇ ರಂಪ ಕುಡಿಯಲು. ಕಿರಾತಕಡ್ಡಿಯ ಕಷಾಯಕ್ಕೂ ಕ್ಯಾಂಪ್ಕೋದ ಕೊಕ್ಕೋ ಚಾಕಲೇಟಿಗೂ ಅಂಟಿದ ನಂಟು ಇದೇ.

ಕೃಷ್ಣವೇಣಿ ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next