Advertisement
“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎಂಬ ನಾಣ್ಣುಡಿ ಎಲ್ಲರಿಗೂ ತಾಯಿ ದೇವರ ಸಮಾನ. ಮನೆಯಲ್ಲಿ ತನ್ನ ತಾಯಿಯಿದ್ದರೆ ಮಕ್ಕಳಿಗೆ ಅದೆಷ್ಟೋ ಖುಷಿ. ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಯಲ್ಲಿ ತಾಯಿ ಮುಖ್ಯ ಪಾತ್ರ ವಹಿಸುತ್ತಾಳೆ. ಹೀಗೆ ತನ್ನ ಮಕ್ಕಳ ಮತ್ತು ಕುಟುಂಬದ ಆರೋಗ್ಯದ ಸೂತ್ರಧಾರಿ ತಾಯಿ, ತನ್ನ ಸ್ವ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತೀ ಮುಖ್ಯ. ನಾವು ಹಲವಾರು ರಾಷ್ಟ್ರೀಯ ಮಾನ್ಯತಾ ದಿನಗಳನ್ನು ಆಚರಿಸುತ್ತೇವೆ. ಅವುಗಳಲ್ಲಿ ಒಂದಾದ ರಾಷ್ಟ್ರೀಯ ಮಾತೃತ್ವ ಸುರಕ್ಷಾ ದಿನವು ನಮಗೆ ತನ್ನ ಕುಟುಂಬದ ಆರೋಗ್ಯ ಕಾಪಾಡುವಲ್ಲಿ ತನ್ನ ಆರೋಗ್ಯ ಎಷ್ಟು ಮುಖ್ಯ ಎಂಬುದರ ಪ್ರಾಮುಖ್ಯವನ್ನು ತಿಳಿಸುತ್ತದೆ.
Related Articles
Advertisement
ಒಬ್ಬ ಹೆಣ್ಣು ಮಗಳು ತನ್ನ ಒಡಲಲ್ಲಿ ಗರ್ಭ ಧರಿಸಿ ಪ್ರಸವಾನಂತರ ತಾಯಿಯಾಗುತ್ತಾಳೆ. ತಾಯ್ತನವು ದೇವರು ಕೊಟ್ಟ ವರ. ಇದನ್ನು ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯವು ಎಷ್ಟು ಮುಖ್ಯವೋ, ಗರ್ಭಧಾರಣೆಯೂ ಕೂಡ ತಾಯಿಯ ಆರೋಗ್ಯದ ಮೇಲೆ ಹೊಂದಿಕೊಂಡಿರುತ್ತದೆ. ದಂಪತಿ ಶಿಶುಭಾಗ್ಯಕ್ಕೆ ಕಾತರಿಸುತ್ತಿರುವಿರಾದರೆ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವುದು ಅತೀ ಉತ್ತಮ.
ಗರ್ಭಧಾರಣೆಯ ಪ್ರಥಮ ಕೆಲವು ವಾರಗಳಲ್ಲಿ ಫೋಲಿಕ್ ಆ್ಯಸಿಡ್ ಎಂಬ ಅಂಶವು ಮಗುವಿನ ಬೆನ್ನುಹುರಿ ಮತ್ತು ನರಗಳ ಬೆಳವಣಿಗೆಗೆ ಅತೀ ಸಹಾಯಕಾರಿ. ಈ ಫೋಲಿಕ್ ಆ್ಯಸಿಡ್ ಅಂಶಯುಕ್ತ ಆಹಾರ ಅಥವಾ ಗುಳಿಗೆಗಳನ್ನು ಗರ್ಭಧಾರಣೆಯ ಮೊದಲು ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ತೆಗೆದುಕೊಳ್ಳುವುದು ಉತ್ತಮ. ಅಂತೆಯೇ ಗರ್ಭಧರಿಸಿದ ಕೂಡಲೇ ತಜ್ಞರ ಭೇಟಿ ಮಾಡಿ ತನ್ನ ಮತ್ತು ತನ್ನ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಆಗುವ ಅಪಾಯವನ್ನು ತಡೆಗಟ್ಟಲು ಮತ್ತು ಸೂಕ್ತ ಚಿಕಿತ್ಸೆ ಪಡೆಯಲು ಸಹಾಯ ಮಾಡುತ್ತದೆ.
ಉತ್ತಮ ಆಹಾರ ಪದ್ಧತಿ, ವಿಶ್ರಾಂತಿ, ಲಘು ವ್ಯಾಯಾಮ, 2-3 ಲೀ. ನೀರಿನ ಸೇವನೆ, ಉತ್ತಮ ಪುಸ್ತಕಗಳನ್ನು ಓದುವುದು ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಹಾಯಕಾರಿ. ಗರ್ಭಿಣಿ ತಾಯಂದಿರು ತಮ್ಮನ್ನು ತಾವೇ ಯಾವುದಾದರೂ ಉತ್ತಮ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಮನಸ್ಸನ್ನು ಶಾಂತವಾಗಿರಿಸುವುದು ಖನ್ನತೆಯಿಂದ ದೂರವಿರಲು ಸಹಾಯ ಮಾಡುತ್ತದೆ. ಪ್ರಾಣಾಯಾಮ, ಉಸಿರಾಟದ ವ್ಯಾಯಾಮ, ಬೆಳಗ್ಗಿನ ಶಾಂತ ಹವೆಗೆ ಮೈ ಒಡ್ಡಿಕೊಳ್ಳುವುದು ಗರ್ಭದಲ್ಲಿ ಬೆಳೆಯುವ ಮಗುವಿಗೆ ಪುಷ್ಟಿ ತರುತ್ತದೆ.ಆಹಾರದಲ್ಲಿ ಮುಖ್ಯ ಆಹಾರ ಬೆಳಗ್ಗಿನ ಉಪಾಹಾರ. ಸೂಕ್ತ ಉಪಾಹಾರವನ್ನು ಸೂಕ್ತ ಪ್ರಮಾಣದಲ್ಲಿ ಸೂಕ್ತ ಸಮಯದಲ್ಲಿ ಸೇವಿಸುವುದು ಪ್ರಮುಖವಾದುದು. ಉಪಾಹಾರವು ನಮ್ಮ ದೇಹದ ಎಲ್ಲ ಕ್ರಿಯೆಗಳು ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಅಂತೆಯೇ ಸೂಕ್ತವಾದ ಹಣ್ಣುಗಳ ನಿಯಮಿತ ಸೇವನೆ ಬೆಳೆಯುವ ಮಗುವಿಗೆ ಅಂದ ತರುತ್ತದೆ. ಗರ್ಭಾವಸ್ಥೆಯಲ್ಲಿ ಟಿಟಿ ಚುಚ್ಚುಮದ್ದು 2 ಬಾರಿ ಪಡೆಯುವುದು ಕಡ್ಡಾಯ. ಋಣಾತ್ಮಕ ರಕ್ತದ ಗುಂಪುಳ್ಳವರು ಕೂಡ ತಜ್ಞರಿಗೆ ಮೊದಲೇ ತಿಳಿಸಿ ಅದಕ್ಕೆ ಪೂರಕವಾದ ಚಿಕಿತ್ಸೆ ಪಡೆಯುವುದು ಮೊದಲ ಮಗುವನ್ನು ಮಾತ್ರವಲ್ಲ ಎರಡನೇ ಮಗುವನ್ನು ಕೂಡ ರಕ್ಷಿಸುತ್ತದೆ. ಗರ್ಭಿಣಿ ತಾಯಿಯಲ್ಲಿ ರಕ್ತದ ತೊಂದರೆಗಳೇನಾದರೂ ಇದ್ದಲ್ಲಿ ಅವುಗಳ ಚಿಕಿತ್ಸೆ ಅಥವಾ ಮುಂಗಡ ರಕ್ತ ಕಾಯ್ದಿರಿಸುವಿಕೆ, ಹೆರಿಗೆಯ ಸಮಯದಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸುತ್ತದೆ. ಹೆಚ್ಚಿನ ಅಪಾಯದ ಗರ್ಭಧಾರಣೆಯಿದ್ದವರು ತಮ್ಮ ಹೆರಿಗೆಯನ್ನು ಸುಸಜ್ಜಿತವಾದ ಎಲ್ಲ ಅನುಕೂಲಗಳಿರುವ ಹೆರಿಗೆ ಆಸ್ಪತ್ರೆಗಳಲ್ಲಿ ಮಾಡಿಸಿದರೆ ತಾಯಿ ಮತ್ತು ಮಗುವಿನ ಆರೋಗ್ಯ ಸುರಕ್ಷಿತವಿದ್ದಂತೆ. ಗರ್ಭಾವಸ್ಥೆಯಲ್ಲಿ ತನ್ನ ಸಂಗಾತಿಯ ಪ್ರೀತಿ, ಬೆಂಬಲ ಮತ್ತು ಕುಟುಂಬಸ್ಥರ ನಯವಿನಯ ಹುಟ್ಟುವ ಮಗುವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇಂತಹ ಕೆಲವೊಂದು ಸಲಹೆಗಳನ್ನು ಗರ್ಭಿಣಿಯಾದ ತಾಯಿ ಮತ್ತು ಆಕೆಯ ಸಂಗಾತಿ ತಮ್ಮ ಜೀವನದಲ್ಲಿ ಪಾಲಿಸಿದರೆ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ಸಂದೇಹವಿಲ್ಲ. ಜನನಿ ಶಿಶು ಸುರಕ್ಷಾ ಅಭಿಯಾನ
ಮಹಿಳೆಯರಿಗೆ ಸುರಕ್ಷಿತ ಮಾತೃತ್ವವನ್ನು ಖಚಿತಪಡಿಸಿಕೊಳ್ಳಲು ಭಾರತ ಸರಕಾರವು ಅನೇಕ ರಾಷ್ಟ್ರೀಯ ಉಪಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ಜನನಿ ಶಿಶು ಸುರಕ್ಷಾ ಅಭಿಯಾನ ಮುಖ್ಯವಾದುದು. ಗರ್ಭಿಣಿಯಾಗಿರುವ ಪ್ರತಿಯೊಬ್ಬ ಮಹಿಳೆಯು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಉಚಿತವಾಗಿ ಹೆರಿಗೆಯಾಗಲು ಅರ್ಹರಿರುತ್ತಾರೆ. ಗರ್ಭಿಣಿಯರಿಗೆ ಉಚಿತ ಔಷಧಗಳು, ಇತರ ಉಪಭೋಗ್ಯ ವಸ್ತುಗಳು, ಉಚಿತ ರೋಗನಿರ್ಣಯ, ಉಚಿತ ರಕ್ತ, ಸಾಮಾನ್ಯ ಹೆರಿಗೆಯ ಸಮಯದಲ್ಲಿ 3 ದಿನ ಮತ್ತು ಸಿಜೇರಿಯನ್ ಹೆರಿಗೆಯ ಸಮಯದಲ್ಲಿ 7 ದಿನಗಳವರೆಗೆ ಉಚಿತ ಆಹಾರವನ್ನು ನೀಡಲಾಗುತ್ತದೆ. ತಾಯ್ತನವು ಮಹಿಳೆಯ ಜೀವನದಲ್ಲಿ ಒಂದು ಮಹತ್ವದ ಹಂತವಾಗಿದೆ ಮತ್ತು ಈ ಅವಧಿಯಲ್ಲಿ ಅವಳು ಅತ್ಯುತ್ತಮ ಆರೈಕೆ ಮತ್ತು ರಕ್ಷಣೆಗೆ ಅರ್ಹಳು. ಎಲ್ಲ ತಾಯಂದಿರ ಜೀವನದಲ್ಲಿ ತಾಯ್ತನವನ್ನು ಅತ್ಯಂತ ಸುಂದರ ಅನುಭವವನ್ನಾಗಿ ಮಾಡುವುದೇ ಶಿಕ್ಷಿತ, ಸುಂದರ ಸಮಾಜವೊಂದರ ಧ್ಯೇಯವಾಗಿರಬೇಕು. -ರೀನಾ ಡಿ’ಸೋಜಾ
ಎಂಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿ
ಡಾ| ಸುಷ್ಮಿತಾ ಕರ್ಕಡ
ಅಸಿಸ್ಟೆಂಟ್ ಪ್ರೊಫೆಸರ್
ಒಬಿಜಿ ನರ್ಸಿಂಗ್ ವಿಭಾಗ, ಮಣಿಪಾಲ ನರ್ಸಿಂಗ್ ಕಾಲೇಜು, ಮಾಹೆ, ಮಣಿಪಾಲ