ಬೆಳಗಾವಿ:ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಭಾರೀ ರಣತಂತ್ರಗಳನ್ನು ಹಣಿಯುತ್ತಿದ್ದು, ಖಾವಿ ಧಾರಿಯೊಬ್ಬರನ್ನು ರಾಜಕಾರಣಕ್ಕೆ ಕರೆತರಲು ಪ್ರಯತ್ನ ಆರಂಭಿಸಿದೆ ಎಂದು ವರದಿಯಾಗಿದೆ.
ಪ್ರಭಾವಿ ಲಿಂಗಾಯತ ಸಮುದಾಯದ ಮಠ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರಿಗೆ ಅಥಣಿ ಕ್ಷೇತ್ರದ ಟಿಕೇಟ್ ಭರವಸೆ ನೀಡಿರುವ ಕಾಂಗ್ರೆಸ್ ಮಾತುಕತೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಅಥಣಿ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಂತಿದ್ದು ಲಿಂಗಾಯತ ಮತಗಳ ಪ್ರಾಬಲ್ಯ ಹೊಂದಿದೆ. ಹಾಲಿ ಕ್ಷೇತ್ರವನ್ನು ಬಿಜೆಪಿಯ ಲಕ್ಷ್ಮಣ ಸವದಿ ಅವರು ಪ್ರತಿನಿಧಿಸುತ್ತಿದ್ದು ಕ್ಷೇತ್ರದೆಲ್ಲೆಡೆ ಅಪಾರ ಬೆಂಬಲಿಗರು ಮತ್ತು ಪ್ರಾಬಲ್ಯ ಹೊಂದಿದ್ದಾರೆ.
ಕಳೆದ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಇದ್ದ ಹೊರತಾಗಿಯೂ, ಕಾಂಗ್ರೆಸ್ ಮಾಡಿದ ನೀಲಿ ಚಿತ್ರ ವೀಕ್ಷಣೆಯ ಕುರಿತಾಗಿನ ಭಾರೀ ಪ್ರಚಾರದ ನಡುವೆಯೂ ಸವದಿ ಭರ್ಜರಿ ಜಯಗಳಿಸಿದ್ದರು.
ಸಚಿವ ರಮೇಶ್ ಜಾರಕಿಹೋಳಿ ಅವರು ಚನ್ನಬಸವ ಸ್ವಾಮೀಜಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಗ್ಗೆ ಕೆಲ ಮೂಲಗಳು ತಿಳಿಸಿವೆ.