Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜೂರಾದ 51 ಹುದ್ದೆಗಳಲ್ಲಿ 20 ಮಾತ್ರ ಭರ್ತಿಯಾಗಿದ್ದು 31 ಖಾಲಿಯಿವೆ. ಉಡುಪಿ ಜಿಲ್ಲೆಯಲ್ಲಿ ಮಂಜೂರಾ ಗಿರುವ 29 ಹುದ್ದೆಗಳಲ್ಲಿ 20 ಖಾಲಿಯಿದ್ದು 9 ಮಾತ್ರ ಭರ್ತಿಯಾಗಿದೆ. ಉಭಯ ಜಿಲ್ಲೆಯಲ್ಲೂ ಉಪನಿರ್ದೇಶಕರ ಹುದ್ದೆ ಖಾಲಿಯಿದ್ದು ಪ್ರಭಾರಿ ಸೇವೆಯಲ್ಲಿ ಇರುವ ಅಧಿಕಾರಿಗಳು ಕಾರ್ಯಭಾರ ನೋಡಿಕೊಳ್ಳುತ್ತಿದ್ದಾರೆ. ಸಹಾಯಕ ನಿರ್ದೇಶಕರ ಹುದ್ದೆಯೂ ಖಾಲಿ ಬಿದ್ದಿದೆ. ವ್ಯವಸ್ಥಾಪಕರ ಹುದ್ದೆಯೂ ಭರ್ತಿಯಾಗಿಲ್ಲ. ದಕ್ಷಿಣ ಕನ್ನಡದಲ್ಲಿ ಲೆಕ್ಕಾಧಿಕಾರಿಯಿದ್ದಾರೆ, ಉಡುಪಿಯಲ್ಲಿ ಆ ಹುದ್ದೆಯೂ ಖಾಲಿಯಾಗಿದೆ.ಉಡುಪಿ ಜಿಲ್ಲೆಯ 10 ಮಂದಿ ಆಹಾರ ನಿರೀಕ್ಷಕರಲ್ಲಿ ಐವರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ ಐದು ಖಾಲಿಯಿದೆ. ದ.ಕ.ದಲ್ಲಿ 17 ಹುದ್ದೆಯಲ್ಲಿ 4 ಖಾಲಿಯಿವೆ.
ಉಭಯ ಜಿಲ್ಲೆಗಳಲ್ಲೂ ಆಹಾರ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬಂದಿ ಕೊರತೆ ಇರುವುದರಿಂದ ಯಾವುದೇ ಕಾರ್ಯವೂ ವೇಗವಾಗಿ ಸಾಗುತ್ತಿಲ್ಲ. ಅನ್ನಭಾಗ್ಯ ಸಹಿತವಾಗಿ ಇಲಾಖೆಯ ಕೇಂದ್ರ ಕಚೇರಿಯಿಂದ ಬರುವ ಹಲವು ಸೂಚನೆ, ಮಾಹಿತಿ ಮತ್ತು ನಿರ್ದೇಶನಗಳನ್ನು ಪಾಲಿಸುವುದು ಹಾಗೂ ಅನುಷ್ಠಾನಕ್ಕೆ ತರುವುದು ನಿಯೋಜನೆಯಲ್ಲಿರುವ ಸಿಬಂದಿಗೆ ಕಷ್ಟವಾಗುತ್ತಿದೆ.
Related Articles
Advertisement
ನೇಮಕಾತಿಗೆ ಆಗ್ರಹಆಹಾರ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಎರಡು ಜಿಲ್ಲೆಯಲ್ಲಿ ಉಪನಿರ್ದೇಶಕರ ಹುದ್ದೆ ಸೇರಿದಂತೆ ಡಿ ಗ್ರೂಪ್ ವರೆಗೂ ಸುಮಾರು 51 ಹುದ್ದೆ ಖಾಲಿಯಿದೆ. ಇದರಲ್ಲಿ ವಾಹನ ಚಾಲಕರು, ಬೆರಳಚ್ಚುಗಾರರು, ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಆಹಾರ ಶಿರಸ್ತೇದಾರರು, ಲೆಕ್ಕಾಧಿಕಾರಿಗಳ ಹುದ್ದೆಯೂ ಸೇರಿದೆ. ಅನೇಕ ವರ್ಷಗಳಿಂದ ನೇಮಕಾತಿ ಸರಿಯಾಗಿ ನಡೆದಿಲ್ಲ. ಅನೇಕ ತಿಂಗಳಿಂದ ಉಪನಿರ್ದೇಶಕರು ಕೂಡ ಪ್ರಭಾರ ಸೇವೆಯಲ್ಲಿ ಇರುವುದರಿಂದ ಎರಡು ಇಲಾಖೆಯನ್ನು ನಿಭಾಯಿಸುವುದು ಅವರಿಗೆ ಕಷ್ಟವಾಗುತ್ತಿದೆ. ವಾರಕ್ಕೆ ಒಮ್ಮೆ ಅಥವಾ ಎರಡು ದಿನ ಮಾತ್ರ ಕಚೇರಿಗೆ ಬರಲು ಸಾಧ್ಯವಾಗುತ್ತಿದೆ. ಹೀಗಾಗಿ ಸರಕಾರ ಆದಷ್ಟು ಬೇಗ ಸಿಬಂದಿ ಕೊರತೆ ನೀಗಿಸಬೇಕು. ಇಲ್ಲದಿದ್ದರೆ ಆಹಾರ ಇಲಾಖೆಯಿಂದ ಸಾರ್ವಜನಿಕರ ಸಮರ್ಪಕ ಸೇವೆ ಒದಗಿಸಲು ಕಷ್ಟವಾಗುತ್ತದೆ ಎಂಬ ದೂರುಗಳು ಕೇಳಿಬರುತ್ತವೆ.